ಕೂಡ್ಲಿಗಿ ತಾಲೂಕಿಗೆ ಕೇಂದ್ರದ ತಂಡ ಭೇಟಿ

KannadaprabhaNewsNetwork | Published : Feb 14, 2025 12:31 AM

ಸಾರಾಂಶ

ಕೇಂದ್ರದ ಗ್ರಾಮೀಣ ವಸತಿ ಯೋಜನೆಯಡಿ ಹಳ್ಳಿಗಳಲ್ಲಿ ಆ್ಯಪ್ ಮೂಲಕ ವಸತಿ, ನಿವೇಶನರಹಿತ ಫಲಾನುಭವಿಗಳನ್ನು ಸರ್ವೇ ಕಾರ್ಯ ನಡೆಸಿದೆ.

ಕೂಡ್ಲಿಗಿ: ಕೇಂದ್ರದ ಗ್ರಾಮೀಣ ವಸತಿ ಯೋಜನೆಯಡಿ ಹಳ್ಳಿಗಳಲ್ಲಿ ಆ್ಯಪ್ ಮೂಲಕ ವಸತಿ, ನಿವೇಶನರಹಿತ ಫಲಾನುಭವಿಗಳನ್ನು ಸರ್ವೇ ಕಾರ್ಯ ನಡೆಸಿದ್ದು, ಆ ಸರ್ವೇಯಲ್ಲಿರುವ ಫಲಾನುಭವಿಗಳ ನೈಜ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ತಾಲೂಕಿಗೆ ಕೇಂದ್ರದ ತಂಡವು ಗುರುವಾರ ಭೇಟಿ ನೀಡಿತು.

ದೆಹಲಿಯ ಗ್ರಾಮೀಣ ವಸತಿ ಯೋಜನೆಯ ಮೇಲ್ವಿಚಾರಣಾ ಘಟಕ ಸದಸ್ಯ ರೂಫಿ ಜಾಯಿದಿ, ಬೆಂಗಳೂರಿನ ರಾಜೀವ್‌ಗಾಂಧಿ ವಸತಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಎಸ್.ಆಶಾ ತಾಲೂಕಿನ ಆಲೂರು ಗ್ರಾಪಂ ವ್ಯಾಪ್ತಿ ಕಾನಮಡುಗು ಗ್ರಾಮದಲ್ಲಿ ಆ್ಯಪ್‌ನಲ್ಲಿ ಸರ್ವೆ ನಡೆಸಿ ಅಪ್‌ಲೋಡ್ ಮಾಡಿರುವ ಫಲಾನುಭವಿಗಳ ಸ್ಥಿತಿಗತಿ ಕುರಿತು ಖುದ್ದು ಪರಿಶೀಲಿಸಿದರು.

ಅಲ್ಲಿಂದ ಹಿರೇಕುಂಬಳಗುಂಟೆ ಗ್ರಾಮ ಸೇರಿ ಗಂಡಬೊಮ್ಮನಹಳ್ಳಿ ಗ್ರಾಪಂನ ಹಳ್ಳಿಗಳಿಗೆ ಭೇಟಿ ನೀಡಿದ ಕೇಂದ್ರದ ತಂಡವು ಅಲ್ಲಿನ ವಸತಿ ಹಾಗೂ ನಿವೇಶನರಹಿತ ಫಲಾನುಭವಿಗಳ ಕುರಿತು ಸರ್ವೇ ಆಗಿ ಆಪ್‌ನಲ್ಲಿರುವ ಹೆಸರುಗಳ ನೈಜತೆಯನ್ನು ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರಿಶೀಲಿಸಿದರು.

ರೂಫಿ ಜಾಯಿದಿ ಮಾತನಾಡಿ, ತಾಲೂಕಿನಲ್ಲಿ ಸರ್ವೇ ಕಾರ್ಯವು ಉತ್ತಮವಾಗಿ ನಡೆದಿದೆ. ವಸತಿ, ನಿವೇಶನರಹಿತ ನೈಜ ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಪಂ ಇಒ ನರಸಪ್ಪ, ಜಿಪಂ ವಸತಿ ಯೋಜನೆಯ ಕೂಡ್ಲಿಗಿ ತಾಲೂಕು ನೋಡಲ್ ಅಧಿಕಾರಿ ಮಹೇಶ್, ತಾಪಂ ವಸತಿ ಯೋಜನೆ ವಿಷಯ ನಿರ್ವಾಹಕಿ ತೇಜಸ್ವಿನಿ, ಶ್ಯಾಮ್, ಹಗರಿಬೊಮ್ಮನಹಳ್ಳಿ ತಾಲೂಕು ನೋಡಲ್ ಅಧಿಕಾರಿ ಬಸವನಗೌಡ, ಜಿಪಂ ಡಿಎಂಐ ಸಂಯೋಜಕ ಗಿರೀಶ್, ಆಲೂರು ಗ್ರಾಪಂ ಪಿಡಿಒ ವಿನಯ್‌ಕುಮಾರ್, ಹಿರೇಕುಂಬಳಗುಂಟೆ ಗ್ರಾಪಂ ಪಿಡಿಒ ನಿಂಗಪ್ಪ, ಆಲೂರು ಬಿಲ್ ಕಲೆಕ್ಟರ್ ಅನಂತ್, ಗ್ರಾಪಂ ಸದಸ್ಯರು ಇದ್ದರು.

ಕೂಡ್ಲಿಗಿ ತಾಲೂಕಿನ ಗಂಡಬೊಮ್ಮನಹಳ್ಳಿಯಲ್ಲಿ ಕೇಂದ್ರದ ಗ್ರಾಮೀಣ ವಸತಿ ಯೋಜನೆಯ ಮೇಲ್ವಿಚಾರಣಾ ಘಟಕ ಸದಸ್ಯೆ ರೂಫಿ ಜಾಯಿದಿ ತಂಡ ಸ್ಥಳ ಪರಿಶೀಲನೆ ನಡೆಸಿದರು.

Share this article