ಮಂಗಳೂರಲ್ಲಿ ಪುರಭವನ, ತೆರೆದ ಮೈದಾನಗಳ ಬುಕ್ಕಿಂಗ್‌, ಶುಲ್ಕ ಪಾವತಿಗೆ ಆನ್‌ಲೈನ್‌, ಆಫ್‌ಲೈನ್‌ ಚಲನ್‌ ವ್ಯವಸ್ಥೆ

KannadaprabhaNewsNetwork |  
Published : Feb 14, 2025, 12:31 AM IST
ಆನ್‌ಲೈನ್‌ ಬುಕ್ಕಿಂಗ್‌ ವ್ಯವಸ್ಥೆಗೆ ಚಾಲನೆ ನೀಡಿದ ಮೇಯರ್‌ ಮನೋಜ್‌ ಕುಮಾರ್‌  | Kannada Prabha

ಸಾರಾಂಶ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಟೌನ್ ಹಾಲ್, ಅಂಬೇಡ್ಕರ್ ಭವನ ಹಾಗೂ ಎಲ್ಲ ತೆರೆದ ಮೈದಾನಗಳ ಕಾಯ್ದಿರಿಸುವಿಕೆ ಹಾಗೂ ಸಂಬಂಧಪಟ್ಟ ಶುಲ್ಕವನ್ನು ಪಾವತಿಸಲು ಆನ್‌ಲೈನ್‌ ಮತ್ತು ಆಫ್ ಲೈನ್ ಚಲನ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆ ಪಾವತಿಗೆ ರೂಪಿಸಿದ ತಂತ್ರಾಂಶವನ್ನು ಒಳಗೊಂಡ ವೆಬ್‌ಸೈಟ್‌ನ್ನು ಗುರುವಾರ ಅನಾವರಣಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಟೌನ್ ಹಾಲ್, ಅಂಬೇಡ್ಕರ್ ಭವನ ಹಾಗೂ ಎಲ್ಲ ತೆರೆದ ಮೈದಾನಗಳ ಕಾಯ್ದಿರಿಸುವಿಕೆ ಹಾಗೂ ಸಂಬಂಧಪಟ್ಟ ಶುಲ್ಕವನ್ನು ಪಾವತಿಸಲು ಆನ್‌ಲೈನ್‌ ಮತ್ತು ಆಫ್ ಲೈನ್ ಚಲನ್ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆ ಪಾವತಿಗೆ ರೂಪಿಸಿದ ತಂತ್ರಾಂಶವನ್ನು ಒಳಗೊಂಡ ವೆಬ್‌ಸೈಟ್‌ನ್ನು ಗುರುವಾರ ಅನಾವರಣಗೊಳಿಸಲಾಯಿತು.

ಪಾಲಿಕೆ ಸಭಾಂಗಣದಲ್ಲಿ ಮೇಯರ್‌ ಮನೋಜ್‌ ಕುಮಾರ್‌ ಅವರು www.mccportal.in ಎಂಬ ವೆಬ್‌ಸೈಟ್‌ನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ವೆಬ್‌ ಅಪ್ಲಿಕೇಷನ್ ಮೂಲಕ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬರುವ ಟೌನ್ ಹಾಲ್, ಅಂಬೇಡ್ಕರ್ ಭವನ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ತೆರೆದ ಮೈದಾನಗಳ ಕಾಯ್ದಿರಿಸುವಿಕೆ ಮಾತ್ರವಲ್ಲ, ವಾಣಿಜ್ಯ ಮಳಿಗೆಗಳ ಬಾಡಿಗೆ ಪಾವತಿಸಲು ಸಾರ್ವಜನಿಕರಿಗೆ ಸುಲಭವಾಗಲಿದೆ. ತಾವು ಇರುವ ಸ್ಥಳದಿಂದಲೇ ತಮ್ಮ ತೆರಿಗೆಯ ಮೊತ್ತವನ್ನು ಪಾವತಿಸಲು ಅವಕಾಶವಿರುತ್ತದೆ. ಇದರಿಂದ ಸಾರ್ವಜನಿಕರ ಮತ್ತು ಕಚೇರಿಯ ಸಮಯ ಉಳಿತಾಯವಾಗಲಿದೆ, ಸಾರ್ವಜನಿಕರಿಗೂ ಅನುಕೂಲವಾಗಲಿದೆ. ಸದ್ಯ ಇದು ಪ್ರಾಯೋಗಿಕ ಹಂತದಲ್ಲಿದೆ ಎಂದರು.

ಈ ತಂತ್ರಾಂಶದಲ್ಲಿ ಸಾರ್ವಜನಿಕರು ಪಾವತಿಸಿದ ಪಾವತಿ ವಿವರಗಳು ಸಿಗಲಿದೆ. ಮಂಗಳೂರು ಮಹಾನಗರಪಾಲಿಕೆಯ mccportal.in ವೆಬ್‌ಸೈಟ್‌ನ MCC SHOP RENT ಖಾತೆಯಲ್ಲಿ ತಕ್ಷಣ ನವೀಕೃತ ಮಾಹಿತಿ ಲಭ್ಯವಾಗಲಿದೆ. ಬಾಡಿಗೆ ಪಾವತಿಸಿದ ರಶೀದಿಯ ನಕಲು ಪ್ರತಿಯೂ ವೆಬ್‌ಅಪ್ಲಿಕೇಷನ್‌ನಲ್ಲಿಯೇ ಲಭ್ಯವಿರುವುದರಿಂದ ಮಾಹಿತಿ ಪಡೆದುಕೊಳ್ಳಲು ಹಾಗೂ ಪರಿಶೀಲನೆಗೆ ಸುಲಭವಾಗಲಿದೆ ಎಂದರು.

ಜಾಹಿರಾತು ಪರವಾನಿಗೆಗೂ ಆನ್‌ಲೈನ್‌: ಮುಂಬರುವ ದಿನಗಳಲ್ಲಿ ಅಂತೆಯೇ ಪಾಲಿಕೆ ವ್ಯಾಪ್ತಿಯ ಎಲ್ಲ ಜಾಹಿರಾತು ಫಲಕಗಳ ಅನುಮತಿ ಪಡೆಯಲು ಹಾಗೂ ಶುಲ್ಕ ಪಾವತಿಸಲು ಅನುಕೂಲವಾಗುವಂತೆ ಇದೇ ತಂತ್ರಾಂಶದಲ್ಲಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮೇಯರ್‌ ಮನೋಜ್‌ ಕುಮಾರ್‌ ತಿಳಿಸಿದರು. ಪ್ರಸ್ತುತ ಪಾಲಿಕೆ ವ್ಯಾಪ್ತಿಯಲ್ಲಿ 1,070 ಸ್ಟಾಲ್‌ಗಳು, 39 ಮಾರ್ಕೆಟ್‌ಗಳು, 7 ತೆರೆದ ಮೈದಾನಗಳು ಇದೆ. ಪುರಭವನ, ಅಂಬೇಡ್ಕರ್‌ ಭವನ ತೆರೆದ ಮೈದಾನಗಳಿಗೆ 2 ತಿಂಗಳು ಮುಂಗಡ ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಉಪ ಮೇಯರ್‌ ಭಾನುಮತಿ, ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ಸುಮಿತ್ರಾ ಕರಿಯ, ಮನೋಹರ ಕದ್ರಿ, ಆಡಳಿತ ವಿಭಾಗದ ಆಯುಕ್ತೆ ಅಕ್ಷತಾ ಇದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ