ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ನೊಂದ ಮನಕ್ಕೆ ಶಾಂತಿ ನೆಮ್ಮದಿ ನೀಡುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಜೀವನದ ಒಂದು ಅವಿಭಾಜ್ಯ ಅಂಗ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವ ಅಂಗವಾಗಿ ನಡೆದ ಸಂಗೀತ ಸೌರಭ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಿಂದೂಸ್ಥಾನಿ ಸಂಗೀತವೇ ಇರಬಹುದು ಕರ್ನಾಟಕ ಶಾಸ್ತ್ರೀಯ ಸಂಗೀತವೇ ಇರಬಹುದು. ಕಿವಿಗೆ ಇಂಪು ಮನಸ್ಸಿಗೆ ಮುದ ನೀಡುವ ಶಕ್ತಿ ಹೊಂದಿವೆ. ಸಂಗೀತವನ್ನು ಕೇಳಿದ ಸಸ್ಯಗಳು ಸೊಂಪಾಗಿ ಬೆಳೆಯುತ್ತವೆ ಎಂದು ವಿಜ್ಞಾನಿಗಳು ಪ್ರಯೋಗಗಳ ಮೂಲಕ ಕಂಡುಕೊಂಡಿದ್ದಾರೆ. ಭಕ್ತಿ ಗೀತೆಗಳನ್ನು ಕೇಳಿದಾಗ ಅವ್ಯಕ್ತ ಭಕ್ತಿಯ ಭಾವನೆ ಉಂಟಾಗುವುದು ನಮ್ಮೆಲ್ಲರ ಗಮನಕ್ಕೆ ಬಂದ ವಿಷಯವಾಗಿದೆ ಎಂದರು.ಗದಗಿನ ಖ್ಯಾತ ಗಾಯಕ ಪಂ. ಡಾ.ರಾಜಗುರು ಗುರುಸ್ವಾಮಿ ಕಲಕೇರಿ ಮತ್ತು ಸಂಗಡಿಗರು ಒಂದು ಗಂಟೆಗಳ ಕಾಲ ತಮ್ಮ ಸುಶ್ರಾವ್ಯ ಸಂಗೀತದ ಮೂಲಕ ಜನಮನ ಸೂರೆಗೊಂಡರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಪಂಚಾಯತಿ ಮಾಹಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ, ಎಂಎಡಿಬಿ ಮಾಜಿ ಅಧ್ಯಕ್ಷೆ ಬಿ.ಸಿ.ಗೀತಾ ಯಡ್ರಾಮಿಯ, ಚಂದ್ರ ಶೇಖರ ಪುರಾಣಿಕ, ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿ ನೇತೃತ್ವ ವಹಿಸಿದ್ದರು. ಸಿಂದಗಿ, ಎಡೆಯೂರು, ಆವರಗೊಳ್ಳ, ರಾಯಚೂರು ಕಿಲ್ಲೆ ಬೃಹನ್ಮಠ, ಹೊನ್ನಕಿರಣಗಿ, ಶ್ರೀನಿವಾಸ ಸರಡಗಿ, ಸ್ಟೇಶನ್ ಬಬಲಾದ, ಹರಪನಹಳ್ಳಿ, ಮಳಲಿ, ಶಿವಗಂಗಾ, ತಾವರೆಕೆರೆ, ಬೀರೂರು, ಬಿಳಿಕಿ, ತಡವಲಗಾ, ಕೆಂಭಾವಿ, ಉದ್ಗಿರಿ, ನಂಜನ ಗೂಡು, ಮಾನಿಹಳ್ಳಿ, ಅಚಲೇರಿ, ಹಣ್ಣೆಮಠ, ಕಲ್ಬಾಳು, ನಾಗಲಾಪುರ, ರಾಜಾಪುರ, ಚನ್ನಗಿರಿ, ಹಾರನಹಳ್ಳಿ, ಹುಡುಗಿ ಮಠಗಳ ಮಠಾಧೀಶರು ಉಪಸ್ಥಿತರಿದ್ದರು. ಗುರುಲಿಂಗಯ್ಯ ಹಿತ್ತಲಶಿರೂರು ಪ್ರಾರ್ಥಿಸಿ, ವಿಹಿಂಪ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಸ್ವಾಗತಿಸಿದರು. ಹಂಪಸಾಗರ ನವಲಿ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿ ನಿರೂಪಿಸಿದರು. ೦೪ಬಿಹೆಚ್‌ಆರ್ ೧:ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಡೆದ ಸಂಗೀತ ಸೌರಭ ಕಾರ್ಯಕ್ರಮವನ್ನು ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಉದ್ಘಾಟಿಸಿದರು.