ರಂಗಕಲಾವಿದೆ ಡಾ. ನಾಗರತ್ನಮ್ಮ ಮುಡಿಗೆ ಗುಬ್ಬಿವೀರಣ್ಣ ಪ್ರಶಸ್ತಿ ಗರಿ

KannadaprabhaNewsNetwork | Published : Feb 14, 2025 12:31 AM

ಸಾರಾಂಶ

ಉತ್ತರ ಕರ್ನಾಟಕ ಬಹುತೇಕ ಊರುಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ಅವರದ್ದು.

ಸಿ.ಕೆ. ನಾಗರಾಜ

ಮರಿಯಮ್ಮನಹಳ್ಳಿ: ವೃತ್ತಿ ರಂಗಭೂಮಿ ಕಲಾ ಸಾಧಕರಿಗೆ ರಾಜ್ಯ ಸರ್ಕಾರ ನೀಡುವ 2024-25ನೇ ಸಾಲಿನ ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ ಇಲ್ಲಿನ ಹಿರಿಯ ರಂಗಕಲಾವಿದೆ ಡಾ.ಕೆ. ನಾಗರತ್ನಮ್ಮ ಅವರಿಗೆ ಲಭಿಸಿದೆ.

ನಾಗರತ್ನಮ್ಮ ರಂಗಕಲೆಯನ್ನೇ ಉಸಿರಾಗಿಸಿಕೊಂಡವರು. ಉತ್ತರ ಕರ್ನಾಟಕ ಬಹುತೇಕ ಊರುಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಖ್ಯಾತಿ ಅವರದ್ದು. ಕೆ.ಮಾರೆಪ್ಪ- ಕೆ.ಸಿದ್ದಮ್ಮ ಅವರ ಏಳು ಮಕ್ಕಳಲ್ಲಿ ಹಿರಿಯ ಮಗಳೇ ನಾಗರತ್ನಮ್ಮ. 1952ರ ಜೂನ್‌ 5ರಂದು ಜನಿಸಿದರು. ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ರಂಗಭೂಮಿಯ ಬಗ್ಗೆ ಬಾಲ್ಯದಿಂದಲೇ ಸೆಳೆತವಿತ್ತು. ಶಿಕ್ಷಕಿಯಾಗಬೇಕು ಅಂದುಕೊಂಡಿದ್ದ ಇವರು ರಂಗಭೂಮಿಯ ಕಲಾವಿದೆಯಾದರು.

ರಂಗಭೂಮಿಯ ಗುರುಗಳಾದ ಗೌಳೇರ್‌ ಮೈಲಾರಪ್ಪ ಅವರು ಒಂದು ವಯಸ್ಸಿನ ಹುಡುಗಿಯರನ್ನೆಲ್ಲ ಕಲೆಹಾಕಿ ನಾಟಕ ಕಲಿಸುತ್ತಿದ್ದರು. ಅವರ ಗರಡಿಯಲ್ಲಿರಿವರು ಬೆಳೆದು, 1967ರಲ್ಲಿ ರಂಗಭೂಮಿ ಪ್ರವೇಶಿಸಿದರು.

ಅಭಿನಯಿಸಿದ ನಾಟಕಗಳು:

ಸುದೀರ್ಘ 65 ವರ್ಷಗಳ ರಂಗ ಪಯಣದಲ್ಲಿ ವೈವಿಧ್ಯಮಯ ಪಾತ್ರ ನಿರ್ವಹಿಸಿದ್ದಾರೆ. ರಕ್ತರಾತ್ರಿ, ಕುರುಕ್ಷೇತ್ರ, ಹೇಮರೆಡ್ಡಿ ಮಲ್ಲಮ್ಮ, ಅಕ್ಷಯಾಂಬರ, ಉತ್ತರ ಭೂಪ, ಶೀಲಾವತಿ, ಬೆಳ್ಳಕ್ಕಿ ಹಿಂಡು ಬೆದರ್‍ಯಾವೋ, ಸೂರ್ಯ ಶಿಕಾರಿ, ಸಂಗ್ಯಾ ಬಾಳ್ಯಾ, ಅವ್ವಣ್ಣೆವ್ವ ಸೇರಿದಂತೆ ಸಾವಿರಾರು ನಾಟಕಗಳಲ್ಲಿ ಪಾತ್ರ ಮಾಡಿ ಸೈ ಎನ್ನಿಸಿಕೊಂಡ ಹಿರಿಮೆ ಇವರದು.

74 ವರ್ಷಗಳಾದರೂ ಇಂದಿಗೂ ರಂಗಚಟುವಟಿಕೆಯಲ್ಲಿ ನಿರಂತರ ತೊಡಗಿಕೊಂಡಿದ್ದಾರೆ. ಚಲನಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಮದರ್‌, ಇದುವೇ ಜೀವನ, ಗಂಡುಗೂಳಿಗಳು, ಪ್ರತಿಭಟನೆ ಪ್ರಮುಖ ಚಿತ್ರಗಳು. ಕಿನ್ನಾರಿ ಮತ್ತು ಶರಣು ವಾಹಿನಿ ಧಾರಾವಾಹಿಗಳಲ್ಲಿ ಅಭಿನಯ, ದೂರದರ್ಶನ, ಚಂದನವಾಹಿನಿಯಲ್ಲಿ ಪ್ರಸಾರವಾದ ರಕ್ತರಾತ್ರಿ ನಾಟಕದಲ್ಲಿ ಅಭಿನಯ, ಆಕಾಶವಾಣಿಯಲ್ಲಿ ಧ್ವನಿ ಮುದ್ರಿತ ನಾಟಕಗಳಲ್ಲಿ ಅಭಿನಿಸಿದ್ದಾರೆ.

ಪ್ರಶಸ್ತಿಗಳು:

ವಾಲ್ಮೀಕಿ ಪ್ರಶಸ್ತಿ, ಶ್ರೀಕೃಷ್ಣ ದೇವರಾಯ ವಿವಿಯಿಂದ ಗೌರವ ಡಾಕ್ಟರೇಟ್, ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾವಿತ್ರಮ್ಮ ದೇಜಗೌ ಪ್ರಶಸ್ತಿ, ನಾಡಚೇತನ ಪ್ರಶಸ್ತಿ, ಸಾಮಾಜಿಕ ಸೇವಾ ಭಾರ್ಗವ ಪ್ರಶಸ್ತಿ, ಕೈಲಾಸಂ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಉಡುಪಿಯ ರಂಗಭೂಮಿಯಿಂದ ಶ್ರೇಷ್ಠ ನಟಿ ಪ್ರಶಸ್ತಿ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳಿಂದ ಪ್ರಶಸ್ತಿ ನೀಡಿವೆ.

ರಂಗಭೂಮಿ ಕಲಾ ಸೇವೆಯೊಂದಿಗೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ಮಹಿಳಾ ವೃತ್ತಿ ರಂಗ ಕಲಾವಿದರ ಸಂಘದ ಅಧ್ಯಕ್ಷರಾಗಿ, ಲಲಿತ ಕಲಾರಂಗದಲ್ಲಿ ಸಕ್ರಿಯ ಕಲಾವಿದೆಯಾಗಿ, ಒಂದು ಅವಧಿಯ ಅಧ್ಯಕ್ಷರಾಗಿ, ಎರಡು ಅವಧಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಮತ್ತು ರಾಜಕೀಯವಾಗಿ ಮರಿಯಮ್ಮನಹಳ್ಳಿ ಗ್ರಾಪಂ ಸದಸ್ಯರಾಗಿ, ಹೊಸಪೇಟೆ ತಾಪಂ ಸದಸ್ಯರಾಗಿ, ತಾಪಂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಕುರಿತು "ನನ್ನ ನಾ ಕಂಡಂತೆ " ಆತ್ಮಚರಿತ್ರೆ​ 1994ರಲ್ಲಿ ‘ಸುಧಾ‘ ವಾರ ಪತ್ರಿಕೆಯಲ್ಲಿ 19 ವಾರಗಳ ಕಾಲ ಧಾರಾವಾಹಿಯಾಗಿ ಪ್ರಕಟವಾಗಿದೆ. ಮೊದಲ ಗ್ರಾಮೀಣ ರಂಗನಟಿಯ ಆತ್ಮಚರಿತ್ರೆ ರಂಗಸಿರಿ ಹಂಪಿ ವಿವಿಯಿಂದ ಪುಸ್ತಕ ಪ್ರಕಟವಾಗಿದೆ. ರಂಗಸಿರಿ ಸಾಕ್ಷ್ಯಚಿತ್ರ ಗುಲ್ಬರ್ಗ ವಿವಿ ಎಂಎ ವಿದ್ಯಾರ್ಥಿಗಳಿಗೆ ಪಠ್ಯವೆಂದು ಆಯ್ಕೆಯಾಗಿದೆ.

ಗುಬ್ಬಿ ವೀರಣ್ಣ ಪ್ರಶಸ್ತಿ ಬಂದಿರುವುದು ಸಂಸತ ತಂದಿದೆ. ವೃತ್ತಿ, ಹವ್ಯಾಸಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ರಂಗಭೂಮಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದೆ ಡಾ.ಕೆ. ನಾಗರತ್ನಮ್ಮ.

Share this article