ಕನಕಪುರ: ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಲದು, ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಗಮನ ಹರಿಸಬೇಕು ಎಂದು ಮಾತೃಶ್ರೀ ಎಜುಕೇಷನ್ ಸೊಸೈಟಿ ಅಧ್ಯಕ್ಷ ಶ್ರೀಕಂಠು ತಿಳಿಸಿದರು.
ತಾಲೂಕಿನ ಸಾತನೂರು ಗ್ರಾಮದಲ್ಲಿರುವ ಮಾತೃಶ್ರೀ ಎಜುಕೇಷನ್ ಸೊಸೈಟಿಯ ಶಾರದಾ ವಿದ್ಯಾಮಂದಿರದಲ್ಲಿ ನಡೆದ 36ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು ಎಂಬ ಏಕೈಕ ಸದುದ್ದೇಶದಿಂದ ಶಾರದಾ ವಿದ್ಯಾಮಂದಿರವನ್ನು ಪ್ರಾರಂಭಿಸಲಾಗಿದ್ದು, ಕಳೆದ 36 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಉತ್ತುಂಗಕ್ಕೇರಿದ್ದಾರೆ.
ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಶಾಲೆಗೆ ಬರುವ ಮಕ್ಕಳನ್ನು ಸುರಕ್ಷಿತವಾಗಿ ಕರೆತರಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ, ಶಾಲೆಯಲ್ಲಿ ಡಿಜಿಟಲ್ ಲೈಬ್ರರಿ ಇದೆ, ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎಲ್ಲಾ ಸಹಕಾರವನ್ನು ನೀಡಲಾಗಿದೆ, ಇದನ್ನು ಹೋಬಳಿಯ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಮತ್ತು ಮಂಡ್ಯ ಜಿಲ್ಲೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಮಾತನಾಡಿದರು.
ವಾರ್ಷಿಕೋತ್ಸವದ ಅಂಗವಾಗಿ ಶಾಲೆಯಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಮತ್ತು ಮನರಂಜನೆ ಕಾರ್ಯಕ್ರಮವನ್ನು ಕಿರುತೆರೆ ನಟಿ ಸುಕೃತಾ ನಾಗ್ ನಡೆಸಿಕೊಟ್ಟರು, ವಿದ್ಯಾರ್ಥಿಗಳು ದೇಶದ ಸಂಸ್ಕೃತಿ, ಕಲೆ, ಸಾಹಿತ್ಯ, ಕನ್ನಡ ನಾಡಿನ ಪರಂಪರೆ ಸಾರುವ ವಿವಿಧ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡಸಿಕೊಟ್ಟರು.
ಮಾತೃ ಶ್ರೀ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ನಾಗರಾಜು, ಜಂಟಿ ಕಾರ್ಯದರ್ಶಿ ಪ್ರದೀಪ್.ಎ.ಎಲ್., ಖಜಾಂಚಿ ಡಿ.ಎಚ್.ಕೃಷ್ಣೇಗೌಡ, ನಿರ್ದೇಶಕರಾದ ಎಚ್.ಕೆ.ಶಾಂತರಾಜು, ಗೋಪಾಲರಾಜೇಗೌಡ, ಶಂಕರ್, ಸಿದ್ದೇಶ್ ಕುಮಾರ್, ಶಿಕ್ಷಣ ಸಂಯೋಜಕ ಟಿ.ರುದ್ರಮುನಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ನೌಕರರು, ಸಿಬ್ಬಂದಿ ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.