21,167 ಕೋಟಿ ರು. ವೆಚ್ಚದ ಪರಿಷ್ಕೃತ ಅಂದಾಜು । ಕೇಂದ್ರದ ನೆರವು 6 ಸಾವಿರ ಕೋಟಿ ರು.ನಿರೀಕ್ಷೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಧ್ಯಕರ್ನಾಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯ 21,167 ಕೋಟಿ ರು.ನ ಪರಿಷ್ಕೃತ ಯೋಜನೆ ಕೇಂದ್ರ ಜಲಶಕ್ತಿ ಸಚಿವಾಲಯ ತಾಂತ್ರಿಕ ಹಾಗೂ ಆರ್ಥಿಕವಾಗಿ (Techno-economic viability) ಕಾರ್ಯಸಾಧುವೆಂದು ತೀರ್ಮಾನಿಸಿದೆ.ಶುಕ್ರವಾರ ನಡೆದ ಜಲಶಕ್ತಿ ಸಚಿವಾಲಯ ತಾಂತ್ರಿಕ ಸಲಹಾ ಸಮಿತಿ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಭದ್ರಾ ಮೇಲ್ದಂಡೆಗೆ 2ನೇ ಬಾರಿಗೆ ಜಲಶಕ್ತಿ ಸಚಿವಾಲಯ ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧುವೆಂಬ ಷರಾ ಬರೆದಂತಾಗಿದೆ. ಈ ಮೊದಲು ಡಿಸೆಂಬರ್ 24-2020ರಂದು ನಡೆದ ತಾಂತ್ರಿಕ ಸಲಹಾ ಸಮಿತಿ 147ನೇ ಸಭೆ ಒಪ್ಪಿಗೆ ಸೂಚಿಸಿತ್ತು. ಇದೀಗ ಮರು ಪ್ರಸ್ತಾವನೆ ಮೂರು ಹಂತಗಳ ದಾಟಿ ಹೋದಂತಾಗಿದ್ದು ಸಾರ್ವಜನಿಕ ಬಂವಡವಾಳ ಸಮಿತಿ ಅನುಮೋದನೆ ಪಡೆದು ಅಂತಿಮವಾಗಿ ಕೇಂದ್ರ ಸಂಪುಟದ ಮುಂದೆ ಪ್ರಸ್ತಾವ ಮಂಡಿಸುವ ಕೆಲಸ ಮಾತ್ರ ಬಾಕಿ ಉಳಿದಂತಾಗುತ್ತದೆ.
ಮಾರ್ಚ್ 25-2021ರಂದು ಜರುಗಿದ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ Investment clearance ಸಮಿತಿಯ ಸಭೆಯಲ್ಲಿ ಈ ಯೋಜನೆಯಲ್ಲಿನ ಹನಿ ನೀರಾವರಿ ಲ್ಯಾಟರಲ್‌ಗಳ ವೆಚ್ಚವನ್ನು ಹೊರತುಪಡಿಸಿ 16,125 ಕೋಟಿ ರು. ಮೊತ್ತಕ್ಕೆ Investment clearance ಸಮಿತಿಯು ಸ್ಥಿರೀಕರಿಸಿ ಅನುಮೋದನೆ ನೀಡಿತ್ತು.
ಫೆಬ್ರವರಿ 15-2022ರಂದು ಜರುಗಿದ 14ನೇ High powered Steering Committee ಸಭೆಯಲ್ಲಿ ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿ ಪರಿಗಣಿಸುವಂತೆ ಶಿಫಾರಸ್ಸು ಮಾಡಿತ್ತು. ನಂತರದ ಬೆಳವಣಿಗೆಯಲ್ಲಿ ಕೇಂದ್ರ ಹಣಕಾಸು ಇಲಾಖೆ ಕಾರ್ಯದರ್ಶಿಯವರ ಹಣಕಾಸು ಕಾರ್ಯದರ್ಶಿ (ಖರ್ಚು) ಸಾರ್ವಜನಿಕ ಹೂಡಿಕೆ ಮಂಡಳಿ (Finance Secretary (Expenditure) A Public Investment Board) ಭದ್ರಾ ಮೇಲ್ದಂಡೆ ಪ್ರಸ್ತಾವನೆ ಅಂಗೀಕರಿಸಿ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ 60-40ರ ಅನುಪಾತದಲ್ಲಿ 5,300 ಕೋಟಿ ರು. ಮೊತ್ತಕ್ಕೆ ಕೇಂದ್ರದ ಧನ ಸಹಾಯದ ನೆರವು ನೀಡಲು ಶಿಫಾರಸ್ಸು ಮಾಡಿತ್ತು. ಇದಾದ ಬಳಿಕ. 2023-24ನೇ ಸಾಲಿನ ಕೇಂದ್ರದ ಆಯವ್ಯಯದಲ್ಲಿ 5300 ಕೋಟಿ ರು. ಅನುದಾನ ನೆರವು ನೀಡಲು ಘೋಷಣೆ ಮಾಡಲಾಗಿತ್ತಾದರೂ ಬಿಡುಗಡೆ ಮಾಡಿರಲಿಲ್ಲ.ಕೇಂದ್ರ ಜಲಶಕ್ತಿ ಮಂತ್ರಾಲಯದ ನಿರ್ದೇಶನದಂತೆ ಭದ್ರಾ ಮೇಲ್ದಂಡೆ ಯೋಜನೆಗೆ 2024-25ನೇ ಸಾಲಿನ ದರಪಟ್ಟಿಗಳನ್ವಯ ಪರಿಷ್ಕೃತ ಅಂದಾಜು ಮೊತ್ತ 21,167 ಕೋಟಿ ರು. ಗಳಿಗೆ (ಡ್ರಿಪ್ ಲ್ಯಾಟರಲ್‌ಗಳನ್ನು ಹೊರತುಪಡಿಸಿ) ಅಂತಿಮಗೊಳಿಸಿ ಸಲ್ಲಿಸಲಾಗಿದ್ದು ಇದಕ್ಕೆ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ಸೂಚಿಸಿರುವುದು ರೂಟಿನ್ ಬೆಳವಣಿಗೆ.
ಶುಕ್ರವಾರ ನಡೆದ ಕೇಂದ್ರ ಜಲಶಕ್ತಿ ಸಚಿವಾಲಯದ ಸಭೆಯಲ್ಲಿ ಕರ್ನಾಟಕದ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೆ.ಬಿ.ಕುಲಕರ್ಣಿ, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಫಕೀರಪ್ಪ ಹರಿಶ್ಚಂದ್ರ ಲಮಾಣಿ, ಕಾರ್ಯಪಾಲಕ ಎಂಜಿನಿಯರ್ ಹರ್ಷ ಪಾಲ್ಗೊಂಡಿದ್ದರು.