ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ದೇವೇಗೌಡರಿಗೆ ಮನವಿ

KannadaprabhaNewsNetwork |  
Published : Mar 21, 2026, 01:30 AM IST
20ಎಚ್ಎಸ್ಎನ್8 : ಜಿಲ್ಲೆಯ ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಮಾಜಿ ಪ್ರಧಾನಿ ಎಚ್ ಡಿ  ದೇವೇಗೌಡರಿಗೆ  ಹಾಗೂ ಪ್ರಧಾನ ಮಂತ್ರಿ ನರೇಂದ್ರಮೋದಿಗೆ ಹೆಚ್ ಡಿ ಪಿ ಎ ಯಿಂದ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಸರ್ಫೈಸಿ ಕಾಯ್ದೆ ಅಡಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ನೋಟಿಸ್‌ಗಳನ್ನು ಜಾರಿಗೊಳಿಸಿರುವುದು ಕಾಫಿ ಬೆಳೆಗಾರರಿಗೆ ಆತಂಕಕಾರಿ ಪರಿಸ್ಥಿತಿ ಉಂಟುಮಾಡಿದೆ. ಕೃಷಿ ಕ್ಷೇತ್ರಕ್ಕೆ ಸೂಕ್ತವಲ್ಲದ ಈ ಕಾಯ್ದೆಯ ಅನ್ವಯಿಕೆಯಿಂದ ರೈತರ ಬದುಕು ಸಂಕಷ್ಟಕ್ಕೀಡಾಗುತ್ತಿರುವುದರಿಂದ, ಸಾಲ ವಸೂಲಾತಿ ಪ್ರಕ್ರಿಯೆಯನ್ನು ಹಿಂದಿನಂತೆ ಸಾಲ ವಸೂಲಾತಿ ನ್ಯಾಯಮಂಡಳಿ ಮೂಲಕ ನಡೆಸುವಂತೆ ಕೇಂದ್ರ ಹಣಕಾಸು ಸಚಿವಾಲಯದ ಮಟ್ಟದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಕಾಫಿ ಬೆಳೆಗಾರರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಮಧ್ಯಸ್ಥಿಕೆ ವಹಿಸುವಂತೆ ಹಾಸನ ಜಿಲ್ಲಾ ಪ್ಲಾಂಟರ್ಸ್ ಅಸೋಸಿಯೇಷನ್ ವತಿಯಿಂದ ದೇಶದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಂಘದ ಅಧ್ಯಕ್ಷ ಎ.ಎಸ್. ಪರಮೇಶ ಹಾಗೂ ಗೌರವ ಕಾರ್ಯದರ್ಶಿ ಕೆ.ಬಿ. ಲೋಹಿತ್ ಅವರು ಮನವಿ ಸಲ್ಲಿಸಿದರು.ಮನವಿಯಲ್ಲಿ, 2016ರಿಂದ 2022ರವರೆಗೆ ಬರ, ಪ್ರವಾಹ ಹಾಗೂ ಅಕಾಲಿಕ ಮಳೆಯಂತಹ ಪ್ರತಿಕೂಲ ಹವಾಮಾನದಿಂದ ಕಾಫಿ ಉತ್ಪಾದನೆ ತೀವ್ರವಾಗಿ ಹಾನಿಗೊಳಗಾಗಿದೆ. ಇದರಿಂದ ಅನೇಕ ಬೆಳೆಗಾರರು ಬ್ಯಾಂಕ್ ಸಾಲಗಳನ್ನು ತೀರಿಸಲು ಸಾಧ್ಯವಾಗದೆ, ಸಾಲಗಳು ಎನ್‌ಪಿಎ ಆಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಸರ್ಫೈಸಿ ಕಾಯ್ದೆ ಅಡಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ನೋಟಿಸ್‌ಗಳನ್ನು ಜಾರಿಗೊಳಿಸಿರುವುದು ಕಾಫಿ ಬೆಳೆಗಾರರಿಗೆ ಆತಂಕಕಾರಿ ಪರಿಸ್ಥಿತಿ ಉಂಟುಮಾಡಿದೆ. ಕೃಷಿ ಕ್ಷೇತ್ರಕ್ಕೆ ಸೂಕ್ತವಲ್ಲದ ಈ ಕಾಯ್ದೆಯ ಅನ್ವಯಿಕೆಯಿಂದ ರೈತರ ಬದುಕು ಸಂಕಷ್ಟಕ್ಕೀಡಾಗುತ್ತಿರುವುದರಿಂದ, ಸಾಲ ವಸೂಲಾತಿ ಪ್ರಕ್ರಿಯೆಯನ್ನು ಹಿಂದಿನಂತೆ ಸಾಲ ವಸೂಲಾತಿ ನ್ಯಾಯಮಂಡಳಿ ಮೂಲಕ ನಡೆಸುವಂತೆ ಕೇಂದ್ರ ಹಣಕಾಸು ಸಚಿವಾಲಯದ ಮಟ್ಟದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.ಇದರ ಜೊತೆಗೆ ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಕಾಫಿ ತೋಟ ಪ್ರದೇಶಗಳಲ್ಲಿ ಮಾನವ, ಆನೆ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿರುವುದನ್ನೂ ಸಂಘ ಗಮನಕ್ಕೆ ತಂದಿದೆ. ಕಳೆದ ಎರಡು ದಶಕಗಳಿಂದ ಆನೆ ದಾಳಿಯಿಂದ ಬೆಳೆ ನಾಶ ಹಾಗೂ ಜೀವಹಾನಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.2009ರಲ್ಲಿ ವಿಷಯವನ್ನು ಪರಿಗಣಿಸಿದ ಕರ್ನಾಟಕ ಹೈಕೋರ್ಟ್ 2014ರಲ್ಲಿ ತೋಟ ಪ್ರದೇಶಗಳನ್ನು ಆನೆ ನಿರ್ಮೂಲನ ವಲಯಗಳಾಗಿ ಘೋಷಿಸುವಂತೆ ಸೂಚನೆ ನೀಡಿದ್ದರೂ ಇದುವರೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಕಾಫಿ ಬೆಳೆಯುವ ಪ್ರದೇಶಗಳಿಂದ ಆನೆಗಳನ್ನು ಸ್ಥಳಾಂತರಿಸುವ ಕುರಿತು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹಾಗೂ ಕರ್ನಾಟಕ ಸರ್ಕಾರದ ನಡುವೆ ಸಮನ್ವಯ ಸಾಧಿಸಿ ಶಾಶ್ವತ ಪರಿಹಾರ ಒದಗಿಸಲು ಮಧ್ಯಸ್ಥಿಕೆ ವಹಿಸುವಂತೆ ಮನವಿಯಲ್ಲಿ ಕೋರಲಾಗಿದೆ.ಈ ವಿಷಯಗಳಲ್ಲಿ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಕಾಫಿ ಬೆಳೆಗಾರರ ಜೀವನೋಪಾಯವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಸಂಘ ಎಚ್ಚರಿಸಿದೆ.‌

ಈ ಸಂದರ್ಭದಲ್ಲಿ ಬೇಲೂರು ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ಧೂರಿ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತನ್ನ ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಬೋನಿಗೆ ಸೆರೆ
ಅರೇಹಳ್ಳಿಯಲ್ಲಿ ಮತ್ತೆ ಕಾಡುಕೋಣ ಕಾಡೆಮ್ಮೆ ಪ್ರತ್ಯಕ್ಷ