ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್ ಎಸ್ ಯುಐ ನೇತೃತ್ವದ ಛಾತ್ರೊಂಕಿ ಗೂಂಜ್ ಕಾರ್ಯಕ್ರಮ
ಕೇಂದ್ರ ಸರ್ಕಾರ ಪಾಕಿಸ್ತಾನಿ, ಬಾಂಗ್ಲದೇಶಿ, ಹಿಂದೂ, ಮುಸ್ಲಿಂ ಎಂದು ಜನರನ್ನು ವಿಭಜಿಸಿ, ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ಎನ್ ಎಸ್ ಯುಐ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಛಾತ್ರೊಂಕಿ ಗೂಂಜ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮಣಿಪುರದಲ್ಲಿ ಸುಮಾರು ಒಂದು ತಿಂಗಳ ಕಾಲ ಹಿಂಸಾತ್ಮಕ ಚಟುವಟಿಕೆ ನಡೆದರೂ ಕೇಂದ್ರ ಸರ್ಕಾರ ಗಮನಿಸಲಿಲ್ಲ. ಇನ್ನು ಸತತವಾಗಿ ಒಂದು ವರ್ಷ ಕಾಲ ರೈತರು ದೆಹಲಿ ಬಳಿ ಹೋರಾಟ ನಡೆಸಿದರು. ಅವರಿಗೆ ದೇಶದ್ರೋಹಿ ಪಟ್ಟಕಟ್ಟುವ ಕೆಲಸ ಮಾಡ ಲಾಗಿತ್ತು. ಈಗಲೂ ಸಹ ಅದೇ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸರ್ಕಾರ ಈ ರೀತಿಯಾದರೆ, ಜನ ಸಾಮಾನ್ಯರು ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಬೇಕು. ಕನಿಷ್ಠ ಪಕ್ಷ ಚರ್ಚೆ ಮಾಡಿ ಸಮಸ್ಯೆ ಪರಿಹಾರ ಮಾಡುವ ಸೌಜನ್ಯವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ನೀಟ್ ಪರೀಕ್ಷೆ ಅಕ್ರಮದಿಂದ 21 ವಿದ್ಯಾರ್ಥಿ ಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಯಾವ ಜಾತಿ, ಧರ್ಮ ಸೇರಿದವರು ಎಂಬುದು ಮುಖ್ಯವಲ್ಲ. ನಿರುದ್ಯೋಗ, ಬೆಲೆ ಏರಿಕೆ ಸಮಸ್ಯೆ ಚರ್ಚೆ ಮಾಡಿ ಪರಿಹಾರ ಮಾಡಬೇಕಿದೆ. ಆದರೆ, ಕೇಂದ್ರ ಸರ್ಕಾರ ಭಾವನಾತ್ಮಕ ವಿಚಾರ ಇಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪ್ರಶ್ನೆ ಪತ್ರಿಕೆಗಳ ಸೋರಿಕೆಯಿಂದ ಎಷ್ಟೇ ಚೆನ್ನಾಗಿ ಓದಿದರು ಉತ್ತಮ ಉದ್ಯೋಗ ಸಿಗುವುದೇ ಎಂಬ ಅನುಮಾನ ಯುವ ಜನತೆಯಲ್ಲಿ ಮೂಡಲಾರಂಭಿಸಿದೆ. ಸಿಬಿಎಸ್ಇ ಪ್ರಶ್ನೆ ಪತ್ರಿಕೆ ಸೋರಿಕೆ ಪತ್ತೆ ಹಚ್ಚಿದ್ದು 19 ವರ್ಷದ ಯುವಕ. ಇನ್ನು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕಳೆದ 20 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಅವರನ್ನು ಮಾತನಾಡಿ ಸುವ ಕೆಲಸ ಮಾಡಿಲ್ಲ. ಮಣಿಪುರದಲ್ಲಿ ತಿಂಗಳುಗಟ್ಟಲೆ ಹಿಂಸಾಚಾರ ನಡೆದರೂ ಅದರ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚಲಿಲ್ಲ. ದೆಹಲಿಯಲ್ಲಿ ರೈತರು ಹೋರಾಟ ಮಾಡಿದರೆ ಅವರನ್ನು ದೇಶದ್ರೋಹಿಗಳು ಎಂದು ಕರೆದರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಮುಖಂಡೆ ಪುಷ್ಪಲತಾ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ 5-6 ಕ್ಷೇತ್ರಕ್ಕೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಇದೇ ಕಾರಣದಿಂದ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋರಾಟ ಆರಂಭಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲೂ ವಿಪುಲ ಉದ್ಯೋಗಾವಕಾಶಗಳಿವೆ. ಇದನ್ನು ಯುವಜನತೆಗೆ ತಿಳಿಸುವ ಕೆಲಸ ಮಾಡಬೇಕಿದೆ. ಇದಕ್ಕೆ ರಾಹುಲ್ ಗಾಂಧಿ ಅವರಂತ ನೇತಾರರು ಅಧಿಕಾರಕ್ಕೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಸಿಡಿಎ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮಾಜಿ ಅಧ್ಯಕ್ಷ ನಯಾಜ್ ಅಹಮದ್, ಯುವ ಕಾಂಗ್ರೆಸ್ ಮುಖಂಡ ಲಾಕೇಶ್ ಮತ್ತಿತರರಿದ್ದರು.
ಧರ್ಮೇಂದ್ರ ಪ್ರಧಾನ್ ರಾಜಿನಾಮೆಗೆ ಆಗ್ರಹ