ಕನ್ನಡಪ್ರಭ ವಾರ್ತೆ ಉಡುಪಿ
ಕೇಂದ್ರ ಸರ್ಕಾರವು ಬಡವರಿಗಾಗಿಯೇ ರೂಪಿಸಿರುವ ಪ್ರತಿಯೊಂದು ಯೋಜನೆಯು ಅವರಿಗೆ ತಲುಪಿಸಲು ಅಧಿಕಾರಿಗಳು ಶ್ರದ್ಧೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಮುಂದಿನ ತಿಂಗಳು ನಡೆಯುವ ಸಂಸದರ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಪೂರ್ವಸಿದ್ಧತೆಯಾಗಿ ನಡೆದ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೋಟ, ಗಣಿ ಇಲಾಖೆಯ ಮೂಲಕ ಜಿಲ್ಲೆಯಲ್ಲಿ ಸಂಗ್ರಹವಾದ ಹಣವನ್ನು ಯಾವ ಪ್ರದೇಶಗಳಿಂದ ಗಣಿಗಾರಿಕೆ ನಡೆಯುತ್ತೋ ಅದೇ ಪಂಚಾಯಿತಿ ವ್ಯಾಪ್ತಿಯ ರಸ್ತೆ ನಿರ್ಮಾಣಕ್ಕೆ ವೆಚ್ಚ ಮಾಡಬೇಕು. ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯಡಿ ಅನುದಾನ ಹಂಚಿಕೆ ಪಾರದರ್ಶಕವಾಗಬೇಕು ಎಂದವರು ಹೇಳಿದರು.ಗ್ರಾಮೀಣ ಕುಡಿಯುವ ನೀರು ಯೋಜನೆಯಂತೆ, ಬೈಂದೂರು ಕ್ಷೇತ್ರದ ೭೮೮ ವಸತಿ ಪ್ರದೇಶಗಳು ಹಾಗೂ ಬೈಂದೂರು ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜಿನ ಪ್ರಗತಿ ಮತ್ತು ಕುಂದಾಪುರ ತಾಲೂಕಿನ, ಹಾಲಾಡಿ ಬಳಿಯ ವಾರಾಹಿ ನದಿಯಿಂದ ಉಡುಪಿ, ಕಾರ್ಕಳ, ಹೆಬ್ರಿ, ಕಾಪುವಿನ ೬೯ ಗ್ರಾಮಗಳಿಗೆ ಬೃಹತ್ ನೀರು ಸರಬರಾಜಿನ ಬಗ್ಗೆ ಮಾಹಿತಿ ಪಡೆದ ಸಂಸದರು, ಜಲಜೀವನ್ ಯೋಜನೆಯೂ ಸೇರಿದಂತೆ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ತೀವ್ರವಾಗಿ ಶೀಘ್ರದಲ್ಲಿ ಮುಗಿಸಬೇಕೆಂದು ಸಂಸದರು ಸೂಚಿಸಿದರು.ಮೀನುಗಾರಿಕೆ ಇಲಾಖೆಯ ಮೂಲಕ ಮತ್ಸ್ಯಸಂಪದ ಯೋಜನೆಯಡಿ ಪಂಜರದ ಕೃಷಿಗಾಗಿ ರಾಜ್ಯ ಸರ್ಕಾರದ ಮೂಲಕ ಪ್ರಸ್ತಾಪವೊಂದನ್ನು ಸಲ್ಲಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಕೈಗಾರಿಕಾ ಇಲಾಖೆ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಮೂಲಕ ಲೀಡ್ ಬ್ಯಾಂಕ್ ವತಿಯಿಂದ ೧೨೦೦ ಫಲಾನುಭವಿಗಳಿಗೆ ವಿಶ್ವಕರ್ಮ ಯೋಜನೆ ಮಂಜೂರು ಮಾಡಿದ್ದು, ಮುದ್ರಾ ಸಾಲವೂ ಸೇರಿದಂತೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ಬಿಡುಗಡೆಯಾದ ಸಾಲ ಸೌಲಭ್ಯದ ಬಗ್ಗೆ ಲೀಡ್ ಬ್ಯಾಂಕ್‌ನ ಪ್ರಬಂಧಕರು ವರದಿ ಸಲ್ಲಿಸಿದರು.ಇಂದ್ರಾಳಿ ಮೇಲ್ಸೆತುವೆ ಕಾಮಗಾರಿ ಜನವರಿ ಮಧ್ಯದಲ್ಲಿ ಪೂರ್ಣಗೊಳಿಸುವುದಾಗಿ ಪ್ರಕರಣದ ಮೂಲಕ ಲಿಖಿತ ಹೇಳಿಕೆ ಕೊಟ್ಟಿದ್ದೀರಿ. ಕಾಮಗಾರಿ ಆರಂಭವಾದ ನಂತರ ನಡೆಯುತ್ತಿರುವ ಚಳುವಳಿಯನ್ನು ಗಮನದಲ್ಲಿಟ್ಟುಕೊಂಡು ನಿಗದಿತ ಸಮಯಕ್ಕೆ ಕೆಲಸ ಮುಗಿಸಬೇಕೆಂದು ರಾಹೆ ಅಧಿಕಾರಿಗೆ ಸೂಚಿಸಿದರು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್, ಉಪನಿರ್ದೇಶಕ ನಾಗರಾಜ ನಾಯಕ್, ಜಿಲ್ಲಾ ಕೌಶಾಲಾಭಿವೃದ್ಧಿ ಅಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.