ಕೇಂದ್ರ, ರಾಜ್ಯದಿಂದ ವಿಶೇಷ ಮಕ್ಕಳ ಸವಲತ್ತಿಗೆ ಕ್ರಮ: ಖಾದರ್‌

KannadaprabhaNewsNetwork |  
Published : Aug 10, 2026, 02:45 AM IST
ಮಾನಸಿಕ ಭಿನ್ನ ಸಾಮಾರ್ಥ್ಯದ ಮಕ್ಕಳಿಗಾಗಿ ನಿರ್ಮಿಸಲಾದ ಸಾನಿಧ್ಯ ಅರ್ಜುನ್ ಶೆಟ್ಟಿ ಶಾಲೆ ಲೋಕಾರ್ಪಣೆಗೊಳಿಸಿದ ಸಚಿವ ಯು.ಟಿ.ಖಾದರ್‌  | Kannada Prabha

ಸಾರಾಂಶ

Centre, State taking steps to provide facilities for special-needs children: Khader

ಮಂಗಳೂರು: ಕೇಂದ್ರ ಹಾಗೂ ರಾಜ್ಯದಿಂದ ಸಿಗಬಹುದಾದ ಎಲ್ಲ ಸವಲತ್ತುಗಳನ್ನು ವಿಶೇಷ ಮಕ್ಕಳಿಗೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್‌ ಹೇಳಿದ್ದಾರೆ.

ಮಂಗಳೂರಿನ ಹೊರವಲಯದ ಶಕ್ತಿನಗರದಲ್ಲಿ ಮುಂಬೈ ಅರ್ಜುನ್ ಶೆಟ್ಟಿ ಫೌಂಡೇಶನ್ ವತಿಯಿಂದ ಅರ್ಜುನ್ ಎಸ್. ಶೆಟ್ಟಿ ಸ್ಮರಣಾರ್ಥ ಮಾನಸಿಕ ಭಿನ್ನ ಸಾಮಾರ್ಥ್ಯದ ಮಕ್ಕಳಿಗಾಗಿ ನಿರ್ಮಿಸಲಾದ ‘ಸಾನಿಧ್ಯ ಅರ್ಜುನ್ ಶೆಟ್ಟಿ’ ಶಾಲೆಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ವಿಶೇಷ ಮಕ್ಕಳಿಗೆ ಬೇಕಾದ ಚಿಕಿತ್ಸೆಗೆ ಸಂಬಂಧಿಸಿದಂತೆ ಡಾ. ವಸಂತ ಶೆಟ್ಟಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ಅಗತ್ಯವಿರುವ ಚಿಕಿತ್ಸೆಗಳನ್ನು ಪಟ್ಟಿ ಮಾಡಿ ಸರ್ಕಾರದಿಂದ ಉಚಿತವಾಗಿ ಒದಗಿಸಲು ಕ್ರಮವಹಿಸಲಾಗುವುದು. ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾನವ ಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಸಿಎಸ್‌ಆರ್ ಅನುದಾನದಲ್ಲಿ ಶೇ.25ರಷ್ಟಾದರೂ ವಿಶೇಷ ಮಕ್ಕಳ ಸಂಸ್ಥೆಗಳಿಗೆ ಒದಿಗಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ವಿಶೇಷ ಮಕ್ಕಳಿಗೆ ರಾಜ್ಯದಲ್ಲಿ ಮಿನಿ ಒಲಿಂಪಿಕ್ಸ್ ಆಯೋಜಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಕ್ರೀಡಾ ಸಚಿವರೊಂದಿಗೆ ವಿಷಯ ಪ್ರಸ್ತಾಪಿಸಿದ್ದು, ಅವರಿಂದ ಸಕಾರತ್ಮಕ ಸ್ಪಂದನೆ ಸಿಕ್ಕಿದೆ. ಶೀಘ್ರದಲ್ಲೇ ಅನುಷ್ಠಾನಗೊಳಿಸಲಾಗುವುದು ಎಂದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಅರ್ಜುನ್ ಅವರು ಕೆಲಸ ಮಾಡುತ್ತಿರುವಾಗ ವಿಶೇಷ ಮಕ್ಕಳ ಆರೈಕೆಯ ಚಿಂತನೆ ಹೊಂದಿದ್ದರು. ಅವರ ಕುಟುಂಬಸ್ಥರಿಂದ ಆ ಕನಸು ನನಸಾಗಿದೆ. ಮಂಗಳೂರಿನ ಜನ ಎಷ್ಟೇ ಎತ್ತರಕ್ಕೆ ಏರಿದರೂ ತನ್ನ ಊರನ್ನು ಮರೆಯುವುದಿಲ್ಲ ಎನ್ನುವುದಕ್ಕೆ ಈ ಸೇವೆಯೇ ನಿದರ್ಶನ ಎಂದರು.

ಸರ್ಕಾರ ವೇತನ ನೀಡಲಿ: ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಭಿನ್ನ ಸಾಮಾರ್ಥ್ಯದ ಶಾಲೆಯ ಅಧ್ಯಾಪಕರ ಜೀವನಕ್ಕೆ ಭದ್ರತೆ ಇಲ್ಲ. ದೇವರಂತಹ ಮಕ್ಕಳನ್ನು ತಪಸ್ಸಿನ ರೀತಿಯಲ್ಲಿ ಕೆಲಸ ಮಾಡಿ ಇಲ್ಲಿನ ಅಧ್ಯಾಪಕರು ಸಲಹುತ್ತಿದ್ದಾರೆ. ಸರ್ಕಾರ ಅಧ್ಯಾಪಕರ ಕಷ್ಟಕ್ಕೆ ನೆರವಾಗಿ ಸೂಕ್ತ ವೇತನ ನೀಡಲು ಕ್ರಮ ವಹಿಸಬೇಕು ಎಂದರು.

ಆಶೀರ್ವಚನ ನೀಡಿದ ಸುತ್ತೂರು ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು, ತನ್ನಿಂದಾಯಿತು ಎಂಬ ಭಾವನೆ ಇದ್ದರೆ ಮಾಡಿದ ಸೇವೆ ಸಾರ್ಥಕವಾಗದು. ಮಹಾಭಾರತದ ಅರ್ಜುನನಂತೆ ಮಂಗಳೂರಿನ ಅರ್ಜುನನೂ ಕೂಡ ಶಾಶ್ವತವಾಗಿ ಉಳಿಯಲಿ ಎಂದರು.ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಪ್ರಸ್ತಾವಿಸಿ, 2003ರಲ್ಲಿ ಮನೆಯಿಂದ ಇಬ್ಬರು ಮಕ್ಕಳೊಂದಿಗೆ ಪ್ರಾರಂಭವಾದ ಸಾನಿಧ್ಯ ಸೇವೆ ಹಂತ ಹಂತ ಬೆಳೆದು 206 ಮಕ್ಕಳಿಗೆ ಸೇವೆ ನೀಡುತ್ತಿದ್ದೇವೆ. 5ರಿಂದ 46 ವರ್ಷದ ವರೆಗಿನವರು ಸಂಸ್ಥೆಯಲ್ಲಿದ್ದಾರೆ. 79 ಮಂದಿ ಸಿಬ್ಬಂದಿ ಸೇವೆ ನೀಡುತ್ತಿದ್ದಾರೆ ಎಂದರು.ಅರ್ಜುನ್ ಫೌಂಡೇಶನ್ ಮುಂಬೈನ ಸಿ.ಎ. ಸುಧೀರ್ ಶೆಟ್ಟಿ ಸ್ವಾಗತಿಸಿದರು. ಪ್ರೊ. ರಾಧಾಕೃಷ್ಣ ನಿರೂಪಿಸಿದರು. ಫೌಂಡೇಶನ್‌ನ ವಿಜಯ ಎಸ್. ಶೆಟ್ಟಿ, ಕಾಂಚಿ ಮತ್ತು ವೇಣು, ಶ್ರೀ ಗಣೇಶಾ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ, ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ, ಖಜಾಂಚಿ ಜಗದೀಶ್ ಶೆಟ್ಟಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಮುಖ್ಯವಾಹಿನಿಗೆ ಬರಲು ಸಂಘಟನೆ ಮುಖ್ಯ: ವಿಜಯಕುಮಾರ ಪಾಟೀಲ
ಪ್ರತಿಭಾ ಪುರಸ್ಕಾರ ಮಕ್ಕಳ ಸಾಧನೆ ಜವಾಬ್ದಾರಿ ಹೆಚ್ಚಿಸುವುದು-ಶಾಸಕ ಬಸವರಾಜ