ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಔಷಧ ತಜ್ಞರ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕು ಆಸ್ಪತ್ರೆಯ ವೈದ್ಯ ಡಾ. ವೈದ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಔಷಧ ತಜ್ಞರ ಪಾತ್ರ ಮಹತ್ವದ್ದಾಗಿದೆ ಎಂದು ತಾಲೂಕು ಆಸ್ಪತ್ರೆಯ ವೈದ್ಯ ಡಾ. ವೈದ್ಯ ಹೇಳಿದರು.ವಿಶ್ವ ಔಷಧ ತಜ್ಞರ ದಿನಾಚರಣೆ ನಿಮಿತ್ತ ಮುದ್ದೇಬಿಹಾಳ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಆಶ್ರಯದಲ್ಲಿ ಶುಕ್ರವಾರ ತಾಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ಹಾಗೂ ಬಿಸ್ಕತ್ ವಿತರಿಸಿ ಅವರು ಮಾತನಾಡಿದರು.
ವೈದ್ಯರು ರೋಗಿಗಳಿಗೆ ಔಷಧಗಳನ್ನು ಸೂಚಿಸುತ್ತಾರೆ. ಆದರೆ ಔಷಧ ಹೇಗೆ, ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ಸಮಯದಲ್ಲಿ ಸೇವಿಸಬೇಕು, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಉಂಟಾಗಬಹುದಾದ ಪರಿಣಾಮಗಳೇನು ಎಂಬ ಕುರಿತು ರೋಗಿಗಳಿಗೆ ಮಾಹಿತಿ ನೀಡುವಲ್ಲಿ ಫಾರ್ಮಾಸಿಸ್ಟ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರ ಕಾರ್ಯಕ್ಕೆ ಔಷಧ ತಜ್ಞರು ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.ವಿಜಯಪುರ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹಾಗೂ ಕೆಸಿಡಿಎ ಬೆಂಗಳೂರು ಆಡಳಿತ ಮಂಡಳಿ ಸದಸ್ಯ ಕೆ.ಆರ್. ಎತ್ತಿನಮನಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಔಷಧ ತಜ್ಞರ ದಿನ ಆಚರಿಸಲಾಗುತ್ತಿದೆ. ಇದರ ನಿಮಿತ್ತ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್, ಬಿಸ್ಕತ್ ಹಾಗೂ ಸೇಬು ವಿತರಿಸುವ ಮೂಲಕ ನಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಔಷಧ ತಜ್ಞರ ದಿನಾಚರಣೆಯ ಅಂಗವಾಗಿ ರೋಗಿಗಳಿಗೆ ಫಲಾಹಾರ ವಿತರಿಸಿದ ಔಷಧ ವ್ಯಾಪಾರಸ್ಥರ ಸಂಘದ ಸದಸ್ಯರಿಗೆ ಆಸ್ಪತ್ರೆಯ ವೈದ್ಯರು ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಮುದ್ದೇಬಿಹಾಳದ ಔಷಧ ವ್ಯಾಪಾರಸ್ಥರು, ಔಷಧ ಅಂಗಡಿ ಮಾಲೀಕರು ಹಾಗೂ ಫಾರ್ಮಾಸಿಸ್ಟ್‌ಗಳು ಉಪಸ್ಥಿತರಿದ್ದರು.