ಸುದ್ದಿಗೋಷ್ಠಿಯಲ್ಲಿ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಆರೋಪಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆಗೆ ಕೇಂದ್ರ ಸರ್ಕಾರದ ಅನುದಾನ ಪಡೆಯುವುದು ದಿನದಿಂದ ದಿನಕ್ಕೆ ಕ್ಲಿಷ್ಟವಾಗುತ್ತಿದ್ದು ಇದೇ ಪರಿಸ್ಥಿತಿ ಮುಂದುವರಿದರೆ ಯೋಜನೆ ಪೂರ್ಣಗಳೊಳ್ಳಲು ಮತ್ತೊಂದು ದಶಕ ಸಮಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ 2022-23 ಸಾಲಿನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ 5300 ಕೋಟಿ ರು. ಅನುದಾನದ ಭರವಸೆ ನೀಡಿತ್ತು. ನಂತರದ ಬೆಳವಣಿಗೆಯಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಯೋಜನೆ ಘೋಷಣೆ ಅಸಾಧ್ಯವೆಂದು ಹೇಳಿ ಪ್ರಧಾನ ಮಂತ್ರಿ ಕೃಷಿ ಸಂಚಾಯಿನಿ ಯೋಜನೆಯಡಿ ಪ್ರಸ್ತಾವನೆ ಸಲ್ಲಿಸಿದರೆ ಅನುದಾನ ಒದಗಿಸುವುದಾಗಿ ಹೇಳಿತ್ತು. ಅಚ್ಚರಿ ಎಂದರೆ ಇದುವರೆಗೂ ಕೃಷಿ ಸಂಚಾಯಿನಿ ಯೋಜನೆಯಡಿ ಅನುದಾನ ಪಡೆಯಲು ಪಟ್ಟಿಯಲ್ಲಿ ಭದ್ರಾ ಮೇಲ್ದಂಡೆ ಸೇರ್ಪಡೆಯಾಗಿಲ್ಲ.ಹಾಲಿ ನಡೆಯುತ್ತಿರುವ ಸಂಸತ್ ಅಧಿವೇಶದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಸುಧಾಕರ್ ಅವರು ಕೃಷಿ ಸಂಚಾಯಿನಿ ಯೋಜನೆಯಡಿ ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾದ ಯೋಜನೆಗಳ ನೀಡಲಾದ ಮಾಹಿತಿಯಲ್ಲಿ ಭದ್ರಾ ಮೇಲ್ದಂಡೆ ಇರಲಿಲ್ಲ. ಅಪ್ಪರ್ ತುಂಗಾ, ರಾಮೇಶ್ವರ, ಭೀಮ ಏತ ನೀರಾವರಿ, ಕಾರಂಜ ಯೋಜನೆ ಹಾಗೂ ನಾರಾಯಣಪುರ ಲೆಫ್ಟ್ ಬ್ಯಾಂಕ್ ಕಾಲುವೆ ಯೋಜನೆಗಳು ಮಾತ್ರ ಯೋಜನೆ ಪಟ್ಟಿಯಲ್ಲಿವೆ ಎಂದು ಲಿಂಗಾರೆಡ್ಡಿ ದಾಖಲಾತಿ ಪ್ರದರ್ಶಿಸಿದರು.
ಕೃಷಿ ಸಂಚಾಯಿನಿ ಯೋಜನೆಯಡಿ ಅನುಮೋದನೆ ಪಡೆಯಬೇಕಾದರೆ ಮೊದಲು ಅಂದಾಜು ಪಟ್ಟಿ ಸಲ್ಲಿಕೆಯಾಗಬೇಕು, ಇದನ್ನು ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಬೇಕು. ಇದಾದ ತರುವಾಯ ಮತ್ತೊಂದು ಮರು ಪ್ರಸ್ತಾವನೆ ಜಲಶಕ್ತಿ ಸಚಿವಾಲಯದ ಮುಂದೆ ಹೋಗುತ್ತದೆ. ಬಳಿಕ ಅಲ್ಲಿಂದ ಒಪ್ಪಿಗೆ ಪಡೆದು ಸಾರ್ವಜನಿಕ ಬಂಡವಾಳ ಹೂಡಿಗೆ ಸಮಿತಿ ಒಪ್ಪಿಗೆ ಪಡೆಯಬೇಕು. ಅದು ಅಂಗೀಕಾರ ಮಾಡಿದ ನಂತರ ಕೇಂದ್ರ ಸಂಪುಟದ ಒಪ್ಪಿಗೆ ಪಡೆಯಬೇಕು. ಇಷ್ಟೆಲ್ಲ ಹಂತಗಳು ಮುಗಿದ ನಂತರವೇ ಹಣಕಾಸು ಇಲಾಖೆ ಮುಂದೆ ಹೋಗಿ ಅನುದಾನ ಬಿಡುಗಡೆಯಾಗುತ್ತದೆ.
ರಾಜ್ಯ ಸರ್ಕಾರ ಅನುದಾನ ಬಿಡುಗಡೆಗೆ ತಾರತಮ್ಯ ನೀತಿ ಅನುಸರಿಸುತ್ತಿದೆ. ಚಿತ್ರದುರ್ಗ ಶಾಖಾ ಕಾಲುವೆಯ ಅಲ್ಪ ಸ್ವಲ್ಪ ಕಾಮಗಾರಿ ಪೂರ್ಣಗೊಳಿಸಲು ಬೇಕಾಗಿರುವ 200 ಕೋಟಿ ರು. ಅನುದಾನ ಬಿಡುಗಡೆ ಮಾಡಲು ಮೀನ ಮೇಷ ಎಣಿಸುತ್ತಿದೆ. ಕೇಂದ್ರದ ಮೇಲೆ ಆರೋಪ ಮಾಡುತ್ತಿದೆ. ರಾಜ್ಯದ ಈ ನಡೆ ಜನವಿರೋಧಿಯಾಗಿದ್ದು ಕೇಂದ್ರದ ಅನುದಾನ ಕಾಯದೆ ತನ್ನ ಪಾಲಿನ ಹಣಕಾಸು ಜವಾಬ್ದಾರಿಯ ಸಿಎಂ ಸಿದ್ದರಾಮಯ್ಯ ನಿರ್ವಹಣೆ ಮಾಡಬೇಕೆಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಆಗ್ರಹಿಸಿದರು.