ವಿಜಯಪುರ ಜಿಲ್ಲೆಯಲ್ಲಿ ವಿವಿಧ ರಾಸಾಯನಿಕ ಬೆರೆಸಿದ ಕಲಬೆರೆಕೆ ಹಾಲು ಪೂರೈಕೆಯಾಗುತ್ತಿರುವ ಆತಂಕ ಎದುರಾಗಿದ್ದು, ಜನರ ಆರೋಗ್ಯ ಹಿತದೃಷ್ಟಿಯಿಂದ ಕೂಡಲೇ ಹಾಲಿನ ಗುಣಮಟ್ಟ ಪರೀಕ್ಷೆ ಕಾರ್ಯ ಪರಿಣಾಮಕಾರಿಯಾಗಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯಲ್ಲಿ ವಿವಿಧ ರಾಸಾಯನಿಕ ಬೆರೆಸಿದ ಕಲಬೆರೆಕೆ ಹಾಲು ಪೂರೈಕೆಯಾಗುತ್ತಿರುವ ಆತಂಕ ಎದುರಾಗಿದ್ದು, ಜನರ ಆರೋಗ್ಯ ಹಿತದೃಷ್ಟಿಯಿಂದ ಕೂಡಲೇ ಹಾಲಿನ ಗುಣಮಟ್ಟ ಪರೀಕ್ಷೆ ಕಾರ್ಯ ಪರಿಣಾಮಕಾರಿಯಾಗಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಈ ಗಂಭೀರ ವಿಷಯ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಅವರು, ಹಾಲು ಪರಿಪೂರ್ಣ ಆಹಾರ. ಚಿಕ್ಕಮಕ್ಕಳು ಸೇರಿ ಎಲ್ಲರೂ ಹಾಲು ಪ್ರತಿನಿತ್ಯ ಸೇವನೆ ಮಾಡುವುದುಂಟು. ಆದರೆ ಈ ಹಾಲಿಗೆ ಕೆಲವು ವ್ಯಕ್ತಿಗಳು ಸ್ವಾರ್ಥ, ಲಾಭಕ್ಕಾಗಿ ರಾಸಾಯನಿಕ ಮಿಶ್ರಣ ಮಾಡಿ ಪೂರೈಕೆ ಮಾಡುತ್ತಿರುವ ಆತಂಕ ಕಾಡುತ್ತಿದೆ. ಇದು ಜನರ ಜೀವ ಹಾಗೂ ಆರೋಗ್ಯ ಪ್ರಶ್ನೆಯಾಗಿದೆ. ನಮ್ಮ ಜಿಲ್ಲೆ ನೆರೆಯ ಮಹಾರಾಷ್ಟ್ರದ ಗಡಿ ಹಂಚಿಕೊಂಡಿದ್ದು, ಗಡಿಭಾಗದಿಂದ ಹಲವಾರು ತಿಂಗಳಿಂದ ಜಿಲ್ಲೆಯಾದ್ಯಂತ ನೆರೆಯ ಮಹಾರಾಷ್ಟ್ರ ಮತ್ತು ಬೇರೆ ತಾಲೂಕುಗಳಿಂದ ಕೆಮಿಕಲ್ ನಿಂದ ತಯಾರಿಸಿದ ಹಾಲು ಪೂರೈಕೆಯಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಯಾವುದೇ ಕಂಪನಿಯ ಪ್ಯಾಕೇಟ್ ಇಲ್ಲದೆ ಕ್ಯಾನ್‌ಗಳಲ್ಲಿ ಇದನ್ನು ತಂದು ಜನಸಾಮಾನ್ಯರ ಮನೆಗಳಿಗೆ ಹಾಲು ವಿತರಿಸುತ್ತಿದ್ದಾರೆ. ಇದನ್ನು ತಡೆಗಟ್ಟಲು ವಿಜಯಪುರ ನಗರ ಹಾಗೂ ಸುತ್ತಮುತ್ತಲಿನ ತಾಲೂಕುಗಳಲ್ಲಿ ಹಾಲು ಪರೀಕ್ಷಾ ಕೇಂದ್ರ ಸ್ಥಾಪಿಸಬೇಕು. ಹಾಲನ್ನು ವಿತರಿಸುವವರು ಕಡ್ಡಾಯವಾಗಿ ಇಲ್ಲಿ ಪರೀಕ್ಷಿಸಿ ನಂತರ ವಿತರಿಸಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.ಪ್ರಮುಖರಾದ ಜಗದೀಶ ಮುಚ್ಚಂಡಿ, ಸಿದ್ಧು ಮಲ್ಲಿಕಾರ್ಜುನಮಠ, ವಿನಾಯಕ ದಹಿಂಡೆ, ವಿವೇಕ ತಾವರಗೇರಿ, ಕಾಂತು ಶಿಂಧೆ ಪಾಲ್ಗೊಂಡಿದ್ದರು.