ಒಂದು ಶತಮಾನಕ್ಕೂ ಹೆಚ್ಚು ಕಾಲ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವ ಹಳೇಹುಬ್ಬಳ್ಳಿ ಇಂಡಿಪಂಪ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 19 ಇದೀಗ ಆಧುನಿಕ ಕಟ್ಟಡದೊಂದಿಗೆ ಹೊಸ ರೂಪ ಪಡೆಯಲು ಸಜ್ಜಾಗಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:
ಒಂದು ಶತಮಾನಕ್ಕೂ ಹೆಚ್ಚು ಕಾಲ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವ ಹಳೇಹುಬ್ಬಳ್ಳಿ ಇಂಡಿಪಂಪ್‌ನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 19 ಇದೀಗ ಆಧುನಿಕ ಕಟ್ಟಡದೊಂದಿಗೆ ಹೊಸ ರೂಪ ಪಡೆಯಲು ಸಜ್ಜಾಗಿದೆ. 115 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯ ಹಳೆ ಕಟ್ಟಡವನ್ನು ಈಗಾಗಲೇ ಕೆಡವಲಾಗುತ್ತಿದ್ದು, ಶೀಘ್ರದಲ್ಲೇ ₹2.50 ಕೋಟಿ ವೆಚ್ಚದಲ್ಲಿ ನೂತನ ಜಿ+2 ಮಾದರಿಯ ಕಟ್ಟಡ ನಿರ್ಮಾಣ ಆರಂಭವಾಗಲಿದೆ.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಈ ಕಾಮಗಾರಿ ಕೈಗೆತ್ತಿಕೊಂಡಿದೆ. ಹೊಸ ಕಟ್ಟಡದಲ್ಲಿ ಒಟ್ಟು 12 ವಿಶಾಲ ಕೊಠಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ಹೊಂದಿ ಸ್ಮಾರ್ಟ್ ಶಾಲೆಯಾಗಿ ಕಂಗೊಳಿಸಲಿದೆ.
ಸಿದ್ಧಾರೂಢರಿಂದ ಅಡಿಗಲ್ಲು:
1909ರಲ್ಲಿ ಈ ಶಾಲೆ ಸ್ಥಾಪನೆಯಾಗಿದ್ದು, ಸದ್ಗುರು ಶ್ರೀಸಿದ್ಧಾರೂಢರು ಈ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿದ್ದರು. ಆರಂಭದಲ್ಲಿ ಕೇವಲ 13 ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಆರಂಭಿಸಿದ ಈ ಶಾಲೆ ಇಂದು ಸಾವಿರಾರು ಕುಟುಂಬಗಳ ನೆನಪುಗಳ ಕೇಂದ್ರವಾಗಿದೆ. ಕೃಷ್ಣಾಪುರ ಓಣಿ, ನವ ಅಯೋಧ್ಯಾ ನಗರ, ಹೆಗ್ಗೇರಿ ಸೇರಿದಂತೆ ಹಳೆ ಹುಬ್ಬಳ್ಳಿಯ ಬಡಾವಣೆಗಳ ಬಡ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.
ಒಂದೇ ಕೊಠಡಿಯಲ್ಲಿ ಪ್ರಾರಂಭ:
ಆರಂಭದಲ್ಲಿ ಒಂದೇ ಕೊಠಡಿಯಲ್ಲಿದ್ದ ಶಾಲೆ, 1930ರಲ್ಲಿ ಬಾಂಬೆ ಸರ್ಕಾರದ ಅವಧಿಯಲ್ಲಿ 6 ಕೊಠಡಿಗಳ ಸುಸಜ್ಜಿತ ಕಟ್ಟಡವಾಗಿ ವಿಸ್ತರಿಸಿತು. ನಂತರದ 5-6 ದಶಕಗಳ ಕಾಲ ಈ ಶಾಲೆಯಲ್ಲಿ ಪ್ರತಿ ವರ್ಷ ಸರಾಸರಿ 700ರಿಂದ 900 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.
ಶಿಥಿಲಗೊಂಡ ಕಟ್ಟಡಕ್ಕೆ ಮುಕ್ತಿ:
ಪ್ರಸ್ತುತ ಎಲ್‌ಕೆಜಿ, ಯುಕೆಜಿ ಸೇರಿದಂತೆ 225 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಕಾಲಕ್ರಮೇಣ ಶಾಲೆಯ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದರಿಂದ ವಿದ್ಯಾರ್ಥಿಗಳ ಸುರಕ್ಷತೆ ಪ್ರಶ್ನೆಯಾಗಿತ್ತು. 2023ರಲ್ಲಿ ಎಚ್.ಎಂ. ಕುಂದರಗಿ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಹಳೆಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಹಲವು ಬಾರಿ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹೊಸ ಕಟ್ಟಡಕ್ಕಾಗಿ ಮನವಿ ಮಾಡಲಾಗಿತ್ತು. ಅದರ ಫಲವಾಗಿ ಇದೀಗ ಮಾದರಿ ಶಾಲಾ ಕಟ್ಟಡಕ್ಕೆ ₹2.50 ಕೋಟಿ ಅನುದಾನ ಮಂಜೂರಾಗಿದೆ.
ಸಾಧಕರನ್ನು ರೂಪಿಸಿದ ಶಾಲೆ:
ಈ ಶಾಲೆಯಲ್ಲಿ ಶಿಕ್ಷಣ ಪಡೆದ ಅನೇಕರು ವೈದ್ಯರು, ವಕೀಲರು, ಸರ್ಕಾರಿ ಅಧಿಕಾರಿಗಳು ಹಾಗೂ ಸಶಸ್ತ್ರ ಪಡೆಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಶಿವಾನಂದ ಗಾಮನಗಟ್ಟಿ, ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ರಾಜೇಂದ್ರ ಗಾರವಾಡ ಹಾಗೂ ಸುಬೇದಾರ್ ಶಿವಾಜಿ ಗಾಂವ್ಕರ್ ಸೇರಿದಂತೆ ಹಲವರು ಈ ಶಾಲೆಯ ಹಳೆಯ ವಿದ್ಯಾರ್ಥಿಗಳು.
ವರ್ಷದೊಳಗೆ ಕಾಮಗಾರಿ ಪೂರ್ಣ
ಈಗಾಗಲೇ ಹಳೆಯ ಕಟ್ಟಡ ತೆರವು ಕಾರ್ಯ ಆರಂಭವಾಗಿದ್ದು, ಇನ್ನೂ 8-10 ದಿನಗಳಲ್ಲಿ ಅದು ಪೂರ್ಣಗೊಳ್ಳಲಿದೆ. ಬಳಿಕ ಹೊಸ ಕಟ್ಟಡ ನಿರ್ಮಾಣ ಆರಂಭವಾಗಲಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶ ಹೊಂದಿದೆ. ಸದ್ಯ ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯ ವಿದ್ಯುತ್ ನಗರದಲ್ಲಿರುವ ಸರ್ಕಾರಿ ಶಾಲೆ ನಂ.9ಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಫಡ್ನೇಶಿ "ಕನ್ನಡಪ್ರಭ "ಕ್ಕೆ ತಿಳಿಸಿದರು.
ಸಿರಿಗೇರಿ ಕುಟುಂಬವು ಶಾಲೆಯ ನಿರ್ಮಾಣಕ್ಕೆ ಜಾಗವನ್ನು ದಾನ ಮಾಡಿತ್ತು. ಆರಂಭದಲ್ಲಿ 1ರಿಂದ 5ನೇ ತರಗತಿ ವರೆಗಿದ್ದ ಶಾಲೆಯಲ್ಲಿ ಬಳಿಕ 7ನೇ ತರಗತಿ ವರೆಗೆ ಶಿಕ್ಷಣ ನೀಡಲಾಗುತ್ತಿತ್ತು. ಒಂದೇ ಶೈಕ್ಷಣಿಕ ವರ್ಷದಲ್ಲಿ ಸುಮಾರು 850 ವಿದ್ಯಾರ್ಥಿಗಳು ಓದಿದ ದಾಖಲೆಗಳಿವೆ.
ಎಚ್.ಎಂ. ಕುಂದರಗಿ, ಶಾಲೆಯ ಮುಖ್ಯೋಪಾಧ್ಯಾಯ
ರಾಜ್ಯ ಸರ್ಕಾರ ಕನ್ನಡ ಶಾಲೆಗಳ ಉಳಿವಿಗೆ ಆದ್ಯತೆ ನೀಡಿದೆ. ಈ ಶಾಲೆಯ ಸ್ಥಿತಿ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ₹2.5 ಕೋಟಿ ವಿಶೇಷ ಅನುದಾನ ಬಿಡುಗಡೆಗೊಳಿಸಲಾಗಿದೆ. ವರ್ಷದೊಳಗೆ ಸುಸಜ್ಜಿತ ಮಾದರಿ ಕಟ್ಟಡ ನಿರ್ಮಾಣವಾಗಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.