ಅಂಗನವಾಡಿ ಮುಂಭಾಗದಲ್ಲಿ ಅಸ್ವಚ್ಛತೆ, ಸಿಇಒ ಕಿಡಿ

KannadaprabhaNewsNetwork |  
Published : Sep 18, 2026, 02:45 AM IST
 (ಫೋಟೊಬಿಕೆಟಿ1, ಜಿ.ಪಂ ಸಿಇಓ ಗಜಾನನ ಬಾಲೆ ಅವರು ನಗರದ ವಿವಿಧ ಸರಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ಸಾರ್ವಜನಿಕ ಆರೋಗ್ಯ, ನೈರ್ಮಲ್ಯ ಪರಿಶೀಲಿಸುವ ಸಂದರ್ಭದಲ್ಲಿ ಅಂಗನವಾಡಿ ಮುಂಭಾಗದಲ್ಲಿ ಅಸ್ವಚ್ಚತೆ ಕಂಡುಬಂದಿತು.) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ನಗರದ ವಿವಿಧೆಡೆ ಜಿಪಂ ಸಿಇಒ ಗಜಾನನ ಬಾಲೆ ಅವರು ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾತ್ರವಲ್ಲ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಖಡಕ್‌ ಕ್ಲಾಸ್‌ ಕೂಡ ತೆಗೆದುಕೊಂಡರು. ಅಸ್ವಚ್ಛತೆಯ ವಿರುದ್ಧ ಕಿಡಿಕಾರಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಗರದ ವಿವಿಧೆಡೆ ಜಿಪಂ ಸಿಇಒ ಗಜಾನನ ಬಾಲೆ ಅವರು ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾತ್ರವಲ್ಲ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಖಡಕ್‌ ಕ್ಲಾಸ್‌ ಕೂಡ ತೆಗೆದುಕೊಂಡರು. ಅಸ್ವಚ್ಛತೆಯ ವಿರುದ್ಧ ಕಿಡಿಕಾರಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಗರದ ವಾಂಬೆ ಕಾಲೋನಿಯ ಅಂಗನವಾಡಿ ಕೇಂದ್ರ ಸಂಖ್ಯೆ-2ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರದ ಮುಂಭಾಗದಲ್ಲಿ ಚರಂಡಿ ಕಟ್ಟಿಕೊಂಡು ಕೊಳಚೆ ನೀರು ನಿಂತಿರುವುದು ಹಾಗೂ ತೀವ್ರ ಅಸ್ವಚ್ಛತೆ ಕಂಡಿತು. ಸಣ್ಣ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಇದು ಗಂಭೀರ ನಿರ್ಲಕ್ಷ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಸಿಇಒ ಗಜಾನನ ಬಾಲೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಶೋಕಾಸ್ ನೋಟಿಸ್ ಜಾರಿಗೊಳಿಸಿದರು.

ನಗರದ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದರು. ಈ ವೇಳೆ ಸಾರ್ವಜನಿಕ ಆರೋಗ್ಯ, ನೈರ್ಮಲ್ಯ, ಶಿಕ್ಷಣ ಹಾಗೂ ಮೂಲಸೌಕರ್ಯ ವ್ಯವಸ್ಥೆಗಳನ್ನು ಪರಿಶೀಲಿಸುವ ವೇಳೆ ಅಂಗನವಾಡಿ ಮುಂಭಾಗದಲ್ಲಿ ಅಸ್ವಚ್ಛತೆ ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಬಾಗಲಕೋಟೆ ಸಿಡಿಪಿಒ, ವೃತ್ತ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅಲ್ಲದೆ, ಚರಂಡಿ ತಡೆಯನ್ನು ತಕ್ಷಣ ತೆರವುಗೊಳಿಸಿ, ಅಂಗನವಾಡಿ ಸುತ್ತಮುತ್ತಲಿನ ಸ್ವಚ್ಛತೆ ಹಾಗೂ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಂತರ ವಾಂಬೆ ಕಾಲೋನಿ ಹಾಗೂ ಸೆಟಲ್ಮೆಂಟ್ ಕಾಲೋನಿಯ ನಮ್ಮ ಕ್ಲಿನಿಕ್‌ಗಳಿಗೆ ಭೇಟಿ ನೀಡಿದ ಸಿಇಒ, ಔಷಧಗಳ ದಾಸ್ತಾನು ಮತ್ತು ಲಭ್ಯತೆ, ರೋಗಿಗಳ ನೋಂದಣಿ, ಚಿಕಿತ್ಸಾ ಸೌಲಭ್ಯ ಹಾಗೂ ನೈರ್ಮಲ್ಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆರೋಗ್ಯ ಸೇವೆ ನಿರಂತರವಾಗಿ ಒದಗಿಸುವಂತೆ ವೈದ್ಯಕೀಯ ಸಿಬ್ಬಂದಿಗೆ ಸೂಚಿಸಿದರು.

ಬಳಿಕ ನವನಗರದ ಸೆಕ್ಟರ್ 41ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್‌-10ಕ್ಕೆ ಭೇಟಿ ನೀಡಿದರು. ಈ ವೇಳೆ ಮಕ್ಕಳೊಂದಿಗೆ ನೇರವಾಗಿ ಸಂವಾದ ನಡೆಸಿದರು. ಮಕ್ಕಳ ಕಲಿಕಾ ಮಟ್ಟ ಅರಿಯಲು ಸರಳ ಗಣಿತ ಲೆಕ್ಕಗಳನ್ನು ನೀಡಿ ಪರಿಶೀಲಿಸಿದ ಸಿಇಒ, ಶಾಲಾ ಕಟ್ಟಡದ ಬಲ ಹಾಗೂ ಸ್ಥಿರತೆಯನ್ನೂ ಸ್ಥಳದಲ್ಲೇ ಪರಿಶೀಲಿಸಿದರು. ಸರ್ಕಾರಿ ಸಂಸ್ಥೆಗಳಲ್ಲಿ ಸೇವಾ ಗುಣಮಟ್ಟ, ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ದೊರೆಯುವಂತೆ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು
ಬರದ ಸುಳಿಯಲ್ಲಿ ಬೆಳಗಾವಿಯ 9 ತಾಲೂಕುಗಳು