ಕನ್ನಡಪ್ರಭ ವಾರ್ತೆ ಬೀದರ್
ತಾಲೂಕಿನ ಕಮಠಾಣ, ಬಗದಲ್ ಹಾಗೂ ಚಟ್ನಳ್ಳಿ ಗ್ರಾಮಗಳಿಗೆ ಮಂಗಳವಾರ ಬೆಳಿಗ್ಗೆ 6.30 ಗಂಟೆಯಿಂದಲೇ ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿಟ್ಟೆ ಮಾಧವ ವಿಠ್ಠಲರಾವ್ ದಿಢೀರ್ ಭೇಟಿ ನೀಡಿ, ಹಲವು ಕಡೆ ಪರಿಶೀಲನೆ ನಡೆಸಿ ಬಿಸಿ ಮುಟ್ಟಿಸಿದರು.
ಸಿಇಒ ಅವರು ಮೊದಲು ಕಮಠಾಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಆಸ್ಪತ್ರೆಯ ಪ್ರತಿಯೊಂದು ಮೂಲೆಗೂ ಹೋಗಿ ಸ್ವಚ್ಛತೆ ಸೇರಿ ಹಲವು ತಪಾಸಣೆ ನಡೆಸಿದರು. ಪ್ರಮುಖವಾಗಿ ರೋಗಿಗಳಿಗೆ ಕೊಡುವ ಮಾತ್ರೆಗಳು ಹಾಗೂ ಔಷಧಗಳ ದಾಸ್ತಾನು ಸರಿಯಾಗಿದೆಯಾ ಎಂದು ಫಾರ್ಮಸಿಯಲ್ಲಿ ಪರಿಶೀಲನೆ ನಡೆಸಿದರು. ಬಳಿಕ ಲ್ಯಾಬೋರೇಟರಿಗೆ ಭೇಟಿ ನೀಡಿ, ಅಲ್ಲಿಯ ತಪಾಸಣಾ ವ್ಯವಸ್ಥೆಯನ್ನು ವೀಕ್ಷಿಸಿದರು.ಅಲ್ಲಿಂದ ನೇರವಾಗಿ ಕಮಠಾಣ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಸ್ಥಳದಲ್ಲಿದ್ದ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಜನರು ಅಳಲು ತೋಡಿಕೊಂಡರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಸಿಇಒ ಅವರು ಗ್ರಾಮದ ನೀರಿನ ಸಮಸ್ಯೆ ಯನ್ನು ಆದಷ್ಟು ಬೇಗ ಬಗೆಹರಿಸಲಾಗುವುದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕಮಠಾಣ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಇದೇ ವೇಳೆ ಮಕ್ಕಳ ಜೊತೆ ಸಂವಾದ ನಡೆಸಿದ ಅವರು, ಮುಂದಿನ SSLC ಪರೀಕ್ಷೆಯಲ್ಲಿ ಬಗದಲ್ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಬೇಕು. ಪ್ರತಿಯೊಬ್ಬರೂ ಶಿಸ್ತನ್ನು ಅಳವಡಿಸಿಕೊಂಡು ಚೆನ್ನಾಗಿ ಓದಬೇಕು ಎಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ತದನಂತರ ಅಲ್ಲಿನ ಚೆಸ್ ಪಾರ್ಕ್ ಹಾಗೂ ಮ್ಯಾಥ್ಸ್ ಪಾರ್ಕ್ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು ಹಾಗೂ ಇತರೆ ಸಂಬಂಧಪಟ್ಟ ಅಧಿಕಾರಿ ಸಿಬ್ಬಂದಿ ಇದ್ದರು.