ಗಿಡ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಮೀಸಲಾಗಬಾರದು. ನೀವು ನೆಟ್ಟ ಆ ಗಿಡವನ್ನು ಪೋಷಿಸುವ ಮತ್ತು ರಕ್ಷಿಸುವ ಹೊಣೆ ಹೊತ್ತು ಅದರ ಜವಾಬ್ದಾರಿಯನ್ನು ತೆಗೆದುಕೊಂಡಾಗ ಮಾತ್ರ ನಿಮ್ಮ ಈ ಕಾರ್ಯ ಶ್ಲಾಘನೀಯವಾಗುತ್ತದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಐಕ್ಯೂಎಸಿ, ಐಐಸಿ, ಸಾಮಾಜಿಕ ಅರಣ್ಯ ವಲಯ ಹಾಗೂ ಶ್ರೀರಾಮಯೋಗೇಶ್ವರ ಮಠ ಬೇಬಿ ಬೆಟ್ಟ ಆಶ್ರಯದಲ್ಲಿ ಒಂದು ದಿನದ ಶ್ರಮದಾನದ ಕಾರ್ಯಕ್ರಮ ನಡೆಯಿತು.

ಬೇಬಿ ಬೆಟ್ಟ ಹಾಗೂ ಬೇಬಿ ಗ್ರಾಮದ ಸುತ್ತ ಮುತ್ತ ಸುಮಾರು 250ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಹಾಗೂ ಬೇಬಿ ಬೆಟ್ಟವನ್ನು ಸ್ವಚ್ಛಗೊಳಿಸುವ ಮೂಲಕ 60 ಎನ್‌ಎಸ್‌ಎಸ್ ವಿದ್ಯಾರ್ಥಿಗಳು ರಾಷ್ಟ್ರೀಯ ಸೇವೆ ಮುಖಾಂತರ ಶ್ರಮದಾನ ಮಾಡಿದರು.

ಬೇಬಿ ಮಠದ ಶ್ರೀಶಿವಬಸವ ಸ್ವಾಮೀಜಿ ಅವರು, ಬಿಲ್ವಪತ್ರೆ ಸಸಿಯನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಗಿಡ ನೆಡುವ ಕಾರ್ಯಕ್ರಮ ಒಂದು ದಿನಕ್ಕೆ ಮೀಸಲಾಗಬಾರದು. ನೀವು ನೆಟ್ಟ ಆ ಗಿಡವನ್ನು ಪೋಷಿಸುವ ಮತ್ತು ರಕ್ಷಿಸುವ ಹೊಣೆ ಹೊತ್ತು ಅದರ ಜವಾಬ್ದಾರಿಯನ್ನು ತೆಗೆದುಕೊಂಡಾಗ ಮಾತ್ರ ನಿಮ್ಮ ಈ ಕಾರ್ಯ ಶ್ಲಾಘನೀಯವಾಗುತ್ತದೆ ಎಂದರು.

ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ರಾಷ್ಟ್ರೀಯ ಸೇವಾ ಯುವಕರು ಕೈಗೊಂಡಿರುವ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನೆಟ್ಟ ಗಿಡಗಳನ್ನು ಪೋಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ದನಗಳ ಜಾತ್ರೆಗೆ ಆಗಮಿಸುವ ಜನಗಳಿಗೆ ನೆರಳು ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಸಂಪೂರ್ಣ ಬೆಂಬಲ ನೀಡುವ ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಅವರಿಗೆ ಹಾಗೂ ಸಂಸ್ಥೆ ಕಾರ್ಯದರ್ಶಿ ಸಿ.ಪಿ.ಶಿವರಾಜು ಅವರಿಗೆ ಕೃತಜ್ಞತೆಯನ್ನು ಸೂಚಿಸಿದರು.

ಇದೇ ವೇಳೆ ಸೋಮ ಎಸ್ ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಎನ್‌ಎಸ್‌ಎಸ್ ಘಟಕಾಧಿಕಾರಿಗಳಾದ ಡಾ.ವಿ.ಶ್ರೀಧರ್, ಸಹಾಯಕ ಪ್ರಾಧ್ಯಾಪಕ ಓಂಕಾರ್ ಇದ್ದರು.