ಶೋಷಿತ ಸಮುದಾಯಗಳ ವೇದಿಕೆ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ಅನ್ನು ಸಂಘಟಿಸುತ್ತಿರುವ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಅವರಿಗೆ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು.

ಮದ್ದೂರು:

ಶೋಷಿತ ಸಮುದಾಯಗಳ ವೇದಿಕೆ ಹೆಸರಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ಅನ್ನು ಸಂಘಟಿಸುತ್ತಿರುವ

ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಅವರಿಗೆ ನಿಗಮ ಮಂಡಳಿಯಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

ಸುರೇಶ್ ಕಂಠಿಗೆ ನಿಗಮ, ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದರಿಂದ ಮುಂಬರುವ ಸ್ಥಳೀಯ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ದಲಿತ ಜನಾಂಗ ಕಾಂಗ್ರೆಸ್ ಅನ್ನು ಬೆಂಬಲಿಸಿ ಅಧಿಕಾರಕ್ಕೆ ಬರುವುದಕ್ಕೆ ಸಹಕಾರಿಯಾಗಲಿದೆ ಎಂದು ಮುಖಂಡರು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಜಿ.ಪರಮೇಶ್ವರ್ ಸುರೇಶ್ ಕಂಠಿ ಅವರು ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿಯುತ್ತಿರುವುದು ನನ್ನ ಗಮನದಲ್ಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ರಾಜೇಂದ್ರ, ಗ್ರಾಪಂ ಅಧ್ಯಕ್ಷ ರವಿಕುಮಾರ್ ಮುಖಂಡರಾದ ದೊರೆಸ್ವಾಮಿ, ಮಡೇನಹಳ್ಳಿ ತಿಮ್ಮಯ್ಯ, ಕಾಡುಕೊತ್ತನಹಳ್ಳಿ ಮರಿಸ್ವಾಮಿ, ರುದ್ರಯ್ಯ, ಕರಡಕೆರೆ ಯೋಗೇಶ್, ಸುಂಡಹಳ್ಳಿ ಸಿದ್ದರಾಜು, ಪ್ರಾಣೇಶ್ ಮತ್ತಿತರರು ಇದ್ದರು.

ಇದೇ ವೇಳೆ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮಾಲಾರ್ಪಣೆ ಮಾಡಿ ಡಿಸಿಎಂ ಅವರನ್ನು ಅಭಿನಂದಿಸಿದರು. ಬಳಿಕ ಸಮೀಪದ ಮದ್ದೂರು ಟಿಫಾನಿಸ್ ಹೋಟೆಲ್ ಗೆ ಭೇಟಿ ನೀಡಿದ ಡಾ.ಪರಮೇಶ್ವರ್ ಅಧಿಕಾರಿಗಳೊಂದಿಗೆ ಮದ್ದೂರು ವಡೆ ತಿಂದು ಉಪಾಹಾರ ಸೇವಿಸಿದರು.

ಕದಲೂರು ರಾಮಕೃಷ್ಣ ಗೆ ಸೂಕ್ತ ಸ್ಥಾನಮಾನ: ಪರಮೇಶ್ವರ್ ಇಂಗಿತ

ಮದ್ದೂರು: ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ದುಡಿದಿರುವ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರಿಗೆ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂಗಿತ ವ್ಯಕ್ತಪಡಿಸಿದರು.

ತಾಲೂಕಿನ ನಿಡಘಟ್ಟ ಬಳಿ ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಸಿಎಂ ಎಸ್.ಎಂ.ಕೃಷ್ಣರ ಅವಧಿಯಲ್ಲಿ ನಾನು ಸಚಿವನಾಗಿದ್ದಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕದಲೂರು ರಾಮಕೃಷ್ಣ ಅವರು ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ. ಇಂತಹವರಿಗೆ ನಿಗಮ, ಮಂಡಳಿಗಳಲ್ಲಿ ಸ್ಥಾನ ಮಾನ ನೀಡುವುದರಿಂದ ಪಕ್ಷಕ್ಕೆ ಹೆಚ್ಚಿನ ಗೌರವ ಸಿಗಲಿದೆ. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಆಶ್ವಾಸನೆ ನೀಡಿದರು.