ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ ಮೇಲೆ ಮತ್ತೇಕೆ ಬಿಜೆಪಿ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಇದು ರಾಜಕೀಯ ಲಾಭಕ್ಕಾಗಿಯೇ ಹೊರತು ಯಾವುದೇ ವಿಷಯವಿಲ್ಲ. ಸಮಯ ಬಂದಾಗ ಇದಕ್ಕೆ ನಾವು ಏನು ಪ್ರತ್ಯುತ್ತರ ಕೊಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ.

ಕನ್ನಡ ಪ್ರಭ ವಾರ್ತೆ ಮದ್ದೂರು

ವಾಲ್ಮೀಕಿ ನಿಗಮದ ಹಗರಣ ವಿಚಾರವಾಗಿ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ಅವರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಂಗಳವಾರ ಲೇವಡಿ ಮಾಡಿದರು.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬರಪೀಡಿತ ಪ್ರದೇಶಗಳ ಪರಿಶೀಲನೆ ಮಾಡಲು ತೆರಳುತ್ತಿದ್ದ ವೇಳೆ ಮಂಡ್ಯ ಜಿಲ್ಲೆಯ ಗಡಿ ಭಾಗ ನಿಡಘಟ್ಟ ಗ್ರಾಮದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ ಮೇಲೆ ಮತ್ತೇಕೆ ಬಿಜೆಪಿ ನಾಯಕರು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಇದು ರಾಜಕೀಯ ಲಾಭಕ್ಕಾಗಿಯೇ ಹೊರತು ಯಾವುದೇ ವಿಷಯವಿಲ್ಲ. ಸಮಯ ಬಂದಾಗ ಇದಕ್ಕೆ ನಾವು ಏನು ಪ್ರತ್ಯುತ್ತರ ಕೊಡಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಎಂದರು.

ಕೆಪಿಎಸ್ಸಿ ನೇಮಕಾತಿ ಹಗರಣದ ಬಗ್ಗೆ ಸಿಓಡಿ ತನಿಖೆ ನಡೆಯುತ್ತಿದೆ. ಇದರ ವರದಿ ಬಂದ ಮೇಲೆ ಸತ್ಯಾಸತ್ಯತೆ ಹೊರಬೀಳಲಿದೆ. ಆನಂತರ ತಪ್ಪಿತಸ್ಥರ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕೆನ್ನುವುದನ್ನು ಯೋಚನೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಡಾ.ಕುಮಾರ, ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಎಸ್ಪಿ ಡಾ.ವಿ.ಜೆ.ಶೋಭಾರಾಣಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್, ಡಿವೈಎಸ್ಪಿ ಯಶವಂತ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರಾಗಿ ಪರಿಗಣನೆ ಸಂಪುಟದಲ್ಲಿ ಚರ್ಚೆ: ಡಿಸಿಎಂ

ಕನ್ನಡಪ್ರಭ ವಾರ್ತೆ ಮದ್ದೂರು

ಕಂದಾಯ ಇಲಾಖೆಯಲ್ಲಿ ಗೌರವಧನದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರನ್ನು ಡಿ ದರ್ಜೆ ನೌಕರರೆಂದು ಪರಿಗಣಿಸುವುದು, ಕನಿಷ್ಠ ವೇತನ ನಿಗದಿ ಸಂಬಂಧ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ಆಶ್ವಾಸನೆ ನೀಡಿದರು.

ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ರಾಜ್ಯಾಧ್ಯಕ್ಷ ಪ್ರತಾಪ್ ಮದಕರಿ ನೇತೃತ್ವದಲ್ಲಿ ಸಂಘದ ನೌಕರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಬೆಂಗಳೂರಿನಲ್ಲಿ ಕಳೆದ ಆಗಸ್ಟ್ 24 ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆಯೇ ಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಮುಂದಿನ ಸೆ.4 ಅಥವಾ 5 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸಿಎಂರೊಂದಿಗೆ ಮಾತನಾಡುವುದಾಗಿ ಹೇಳಿದರು.

ಕಂದಾಯ ಇಲಾಖೆಯಲ್ಲಿ ಕನಿಷ್ಠ ವೇತನ 28 ಸಾವಿರ ಮತ್ತು ಡಿ.ದರ್ಜೆ ನೌಕರರೆಂದು ಪರಿಗಣಿಸುವಂತೆ ತಾವು ಹಕ್ಕೋತ್ತಾಯ ಮಂಡಿಸಿದ್ದಿರಿ. ನಿಮ್ಮ ಈ ಎಲ್ಲಾ ಬೇಡಿಕೆಗಳ ಬಗ್ಗೆ ಸಿಎಂ ಬಳಿ ಚರ್ಚಿಸಿ ಆದಷ್ಟು ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ವೇಳೆ ನೌಕರರ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಲಿಂಗಯ್ಯ, ಮೈಸೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಮತ್ತು ತಾಲೂಕು ಅಧ್ಯಕ್ಷ ಕೆ.ಆರ್.ಗೋವಿಂದರಾಜು, ಗೌರವಾಧ್ಯಕ್ಷ ಮಹಾಲಿಂಗಯ್ಯ, ಪದಾಧಿಕಾರಿಗಳಾದ ಶಿವಕುಮಾರ್ ಸಂಪತ್, ಆಕಾಶ್ ಮತ್ತಿತರರು ಇದ್ದರು.