ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಬೀಳಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಭೇಟಿ ನೀಡಿ ಪರಿಶೀಲಿಸಿದರು.ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದಲ್ಲಿ ಕೈಗೊಂಡ ನೀರು ಶುದ್ಧೀಕರಣ ಘಟಕದ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ವಿವರ ಪಡೆದು ಜನರಿಗೆ ಶುದ್ಧ ಕುಡಿಯುವ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದ್ದು, ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡುವ ಮೂಲಕ ನಿಗದಿತ ಅವಧಿಯಲ್ಲಿ ಯೋಜನೆಯ ಕಾರ್ಯ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಲು ಸೂಚಿಸಿದರು.
ನಂತರ ಹಳೆಯ ಮುತ್ತಲ ದಿನ್ನಿ ಗ್ರಾಮದಲ್ಲಿ ಕೈಗೊಂಡ ಜಾಕ್‌ವೆಲ್ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿ ಗಿರಿಸಾಗರ ಗ್ರಾಪಂ ಕಚೇರಿಗೆ ಭೇಟಿ ನೀಡಿ ಕಚೇರಿಯ ದಾಖಲೆ ನಿರ್ವಹಣೆ, ಸಾರ್ವಜನಿಕರಿಗೆ ನೀಡಲಾಗುತ್ತಿರುವ ಸೇವೆಗಳು ಮತ್ತು ಸ್ವಚ್ಛತೆ ಕುರಿತು ಸಿಬ್ಬಂದಿಗಳೊಂದಿಗೆ ಚರ್ಚಿದರು. ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಗೆ ಭೇಟಿ ನೀಡಿ ಲಭ್ಯವಿರುವ ಚಿಕಿತ್ಸೆ, ಔಷಧಿ ಹಾಗೂ ಸೌಲಭ್ಯಗಳ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಪಶು ಸಂಗೋಪನೆ ಗ್ರಾಮೀಣ ಆರ್ಥಿಕತೆಯ ಪ್ರಮುಖ ಭಾಗವಾಗಿರುವುದರಿಂದ ಈ ಕ್ಷೇತ್ರ ಇನ್ನಷ್ಟು ಬಲಪಡಿಸುವ ಅಗತ್ಯವಿದೆ ಎಂದರು. ಗಿರಿಸಾಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ, ಆರೋಗ್ಯಸೇವಾ ಸೌಲಭ್ಯ, ಲಭ್ಯವಿರುವ ಮೂಲಸೌಕರ್ಯ, ಔಷಧ ಸಂಗ್ರಹ ಹಾಗೂ ತುರ್ತು ಸೇವೆಗಳ ಬಗ್ಗೆ ಮಾಹಿತಿ ಪಡೆದರು. ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಸುಧಾರಣೆಗಾಗಿ ಅಗತ್ಯ ಸೂಚನೆ ನೀಡಿದರು. ನಂತರ ರೋಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಪೋಷಣಾ ಯೋಜನೆ, ಶಿಕ್ಷಣ ಚಟುವಟಿಕೆಗಳು ಹಾಗೂ ಪೌಷ್ಟಿಕ ಆಹಾರ ವಿತರಣೆ ಬಗ್ಗೆ ಪರಿಶೀಲಿಸಿದರು. ಅಂಗನವಾಡಿ ಕೇಂದ್ರದಲ್ಲಿರುವ ಮಕ್ಕಳ ಆರೋಗ್ಯ ಮತ್ತು ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲು ತಿಳಿಸಿದರು.ರೋಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸರ್ಕಾರಿ ಮಾದ್ಯಮಿಕ ಶಾಲಾ ಕಟ್ಟಡ ಪರಿಶೀಲಿಸಿದರು. ಶಾಲೆಯ ಕಟ್ಟಡದ ಗುಣಮಟ್ಟ, ಮೂಲಸೌಕರ್ಯ, ತರಗತಿ ಕೊಠಡಿಗಳು, ಶೌಚಾಲಯಗಳು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ವ್ಯವಸ್ಥೆಗಳ ಬಗ್ಗೆ ತಪಾಸಣೆ ನಡೆಸಿದರು.
ಭೇಟಿ ವೇಳೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆಕಾಶ ವಂದೆ, ಬೀಳಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ ಸೇರಿದಂತೆ ಗ್ರಾಮ ಪಂಚರ್ತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.