ಶೇ.85ಕ್ಕೂ ಅಧಿಕ ಮತದಾನ ಸಾಧಿಸಲು ಸಿಇಒ ಟಾರ್ಗೆಟ್‌

KannadaprabhaNewsNetwork | Published : Apr 4, 2024 1:04 AM

ಸಾರಾಂಶ

ಪ್ರಸ್ತುತ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಸರಾಸರಿಗಿಂತ ಕಡಿಮೆ ಮತದಾನವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.85ಕ್ಕಿಂತ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ದಾವಣಗೆರೆಯಲ್ಲಿ ಸೂಚಿಸಿದ್ದಾರೆ.

- 2019ರ ಚುನಾವಣೆಯಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ಸರಾಸರಿಗಿಂತಲೂ ಕಡಿಮೆ ಮತದಾನ

- ಜಿಪಂ ಸಭಾಂಗಣದಲ್ಲಿ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳ ಸಭೆ ನಡೆಸಿದ ಸುರೇಶ್‌ ಬಿ. ಇಟ್ನಾಳ್‌ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಪ್ರಸ್ತುತ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಸರಾಸರಿಗಿಂತ ಕಡಿಮೆ ಮತದಾನವಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ.85ಕ್ಕಿಂತ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಸುರೇಶ್ ಬಿ. ಇಟ್ನಾಳ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ದಾವಣಗೆರೆ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಶೇ.72.96ರಷ್ಟು ಮತದಾನವಾಗಿತ್ತು. ಆದರೆ, ಅತ್ಯಂತ ಕಡಿಮೆ ಮತದಾನವಾಗಿದ್ದು ದಾವಣಗೆರೆ ಉತ್ತರ ಶೇ. 65.71, ದಾವಣಗೆರೆ ದಕ್ಷಿಣ ಶೇ.65.93ರಷ್ಟು ಮತದಾನ. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಶೇ.85ಕ್ಕಿಂತಲೂ ಹೆಚ್ಚು ಮತದಾನ ಆಗಬೇಕೆಂಬುದು ಕ್ಷೇತ್ರದ ಗುರಿಯಾಗಿದೆ ಎಂದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 245 ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 217 ಮತಗಟ್ಟೆಗಳಿವೆ. 2019ರ ಚುನಾವಣೆಯ ಸರಾಸರಿ ಮತದಾನಕ್ಕಿಂತಲೂ ಶೇ.20ರಷ್ಟು ಕಡಿಮೆ 9 ಮತಗಟ್ಟೆ, ಶೇ.15ರಷ್ಟು ಕಡಿಮೆ 40 ಮತಗಟ್ಟೆ, ಶೇ. 10ರಷ್ಟು ಕಡಿಮೆ 135 ಮತಗಟ್ಟೆಗಳಲ್ಲಿ ಮತದಾನವಾಗಿದೆ. ಇವು ಜಿಲ್ಲೆಯ ಎಲ್ಲ ಮತಗಟ್ಟೆಗಳಿಗಿಂತ ಕಡಿಮೆ ಮತದಾನವಾದ ಕ್ಷೇತ್ರಗಳಾಗಿವೆ. ಈ ಕ್ಷೇತ್ರಗಳಲ್ಲಿ 2024 ರ ಚುನಾವಣೆಯಲ್ಲಿ ಹೆಚ್ಚು ಮತದಾನ ಮಾಡಿದಲ್ಲಿ ಶೇ.85ಕ್ಕಿಂತ ಹೆಚ್ಚು ಮತದಾನವಾಗಲು ಸಾಧ್ಯವಿದೆ. ಎಲ್ಲ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಬೇಕು. ಮತದಾರರ ಮಾಹಿತಿ ಸಂಗ್ರಹಿಸಿ ಚುನಾವಣೆ ನಡೆಯುವ ಮೇ 7ರಂದು ತಪ್ಪದೇ ಮತಗಟ್ಟೆಗೆ ಬಂದು ಮತದಾನ ಮಾಡುವಂತೆ ಮತಗಟ್ಟೆ ಅಧಿಕಾರಿಗಳು ಮನವರಿಕೆ ಮಾಡಬೇಕಾಗಿದೆ ಎಂದರು.

ಶೇ.10ರಿಂದ 30ರಷ್ಟು ಮತದಾರರ ಸಂಪರ್ಕವಿಲ್ಲ:

ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಡಿಮೆ ಮತದಾನ ಮಾಡಲಾದ 22 ಮತಗಟ್ಟೆಗಳು ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಡಿಮೆ ಮತದಾನವಾದ 21 ಮತಗಟ್ಟೆಗಳ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಾಯಿತು. ಆಗ ಶೇ.10 ರಿಂದ ಶೇ.30ರಷ್ಟು ಮತದಾರರ ಸಂಪರ್ಕ ಸಿಕ್ಕಿಲ್ಲ ಎಂಬ ಮಾಹಿತಿ ಮತಗಟ್ಟೆ ಅಧಿಕಾರಿಗಳು ಅಂಕಿ ಅಂಶದೊಂದಿಗೆ ತಿಳಿಸಿದರು. ಕೆಲವು ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಕರಾರುವಕ್ಕಾಗಿ ಸಮೀಕ್ಷೆ ನಡೆಸಿ, ಬೇರೆ ಕಡೆ ವರ್ಗಾವಣೆ, ಮರಣ ಹೊಂದಿದವರ ವಿವರ ಸಂಗ್ರಹಿಸಿರುವರು ಎಂಬ ಮಾಹಿತಿ ನೀಡಿದರು.

ಮತಗಟ್ಟೆ ಅಧಿಕಾರಿಗಳು ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರ ವಿವರ ಸಿಕ್ಕಿಲ್ಲ. ಕೆಲವರು ಬಾಡಿಗೆದಾರರಾಗಿದ್ದು, ಬೇರೆ ಕಡೆ ವಾಸವಾಗಿದ್ದಾರೆ. ಇನ್ನೂ ಕೆಲವು ಕಡೆ ಒಂದೇ ವಾರ್ಡ್ ವಾಸಿ ಆಗಿದ್ದರೂ ಅಕ್ಕಪಕ್ಕದ ಮತಗಟ್ಟೆಯಲ್ಲಿ ಹಂಚಿಕೆಯಾಗಿದೆ. ಪಿ ಅಂಡ್‌ ಟಿ ಕ್ವಾರ್ಟಸ್, ಕೆಎಸ್‌ಆರ್‌ಟಿಸಿ ವಸತಿಗೃಹ ಸೇರಿದಂತೆ ಅನೇಕ ವಸತಿಗೃಹದಲ್ಲಿ ವಾಸವಿದ್ದವರ ಹೆಸರಿದೆ. ಆದರೆ, ಅವರು ಇಲ್ಲಿಲ್ಲ ಎಂಬ ಮಾಹಿತಿ ಮತಗಟ್ಟೆ ಅಧಿಕಾರಿಗಳು ನೀಡಿದರು.

ಹೋಂ ವರ್ಕ್ ಮಾಡಲು ಸೂಚನೆ:

ಕಡಿಮೆ ಮತದಾನ ಮಾಡಿದ ಮತಗಟ್ಟೆಗಳಲ್ಲಿ ಮತದಾನ ಮಾಡದೇ ಉಳಿಯಲು ಕಾರಣವೇನು, ಅವರನ್ನು ಸಂಪರ್ಕಿಸಲಾಗಿದೆಯೇ, ಎಲ್ಲಿ ವಾಸಿಸುವರು, ಎಷ್ಟು ವರ್ಷದಿಂದ ಇಲ್ಲಿ ವಾಸಿಸುತ್ತಿಲ್ಲ ಎಂಬ ಮಾಹಿತಿಯನ್ನು ಕೆಲವು ಮತಗಟ್ಟೆ ಅಧಿಕಾರಿಗಳು ಸರಿಯಾಗಿ ನೀಡಲಿಲ್ಲ. ಆಗ ಜಿಪಂ ಸಿಇಒ ಅವರು, ನೀವು ಸರಿಯಾಗಿ ಹೋಂ ವರ್ಕ್ ಮಾಡಿಲ್ಲ. ನಿಮ್ಮ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ, ಅಲ್ಲಿನ ಸ್ಥಳೀಯ ನಿವಾಸಿಗಳು, ಬಾಡಿಗೆದಾರರಾಗಿದ್ದಲ್ಲಿ ಮಾಲೀಕರ ಬಳಿ ಅವರ ಕರಾರು ಪತ್ರಗಳ ಪ್ರತಿಗಳಿಂದ ಮಾಹಿತಿ ಸಂಗ್ರಹಿಸಬೇಕು. ಆಗ ಅನ್ಯಸ್ಥಳದ ಮತದಾರರ ವಿವರ ಲಭ್ಯವಾಗುತ್ತದೆ. ಆದರೆ, ಕೆಲಸದಲ್ಲಿ ನಿರ್ಲಕ್ಷ್ಯತೆ ಇದ್ದಲ್ಲಿ ಮಾಹಿತಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದು ಬಾರಿ ಸಭೆ ಕರೆದು ಪರಿಶೀಲನೆ ನಡೆಸಲಾಗುತ್ತದೆ. ಆ ನಂತರವೂ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿದಿದ್ದಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರುವ ಬಿ.ಎಲ್.ಒ.ಗಳ ಮೇಲೆ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಮತಗಟ್ಟೆ ಅಧಿಕಾರಿಗಳಿಗೆ ಮತದಾನ ಹೆಚ್ಚಿಸಲು ಗುರಿ:

ಮತದಾನ ಜಾಗೃತಿ ಕಾರ್ಯಕ್ರಮದ ಜೊತೆಗೆ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರನ್ನು ಸಂಪರ್ಕಿಸುವ ಕೆಲಸ ಆಗಬೇಕಾಗಿದೆ. ಈ ಮೂಲಕ ಶೇ.85ಕ್ಕಿಂತ ಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಬೇಕು. ಮತದಾರರಿಗೆ ಮತದಾರ ಚೀಟಿ, ವೋಟರ್‌ ಗೈಡ್, ಸಂಕಲ್ಪ ಪತ್ರ ತಲುಪಿಸುವ ಕೆಲಸ ಮಾಡಬೇಕು. ಈ ಬಾರಿಯ ಚುನಾವಣೆಯಲ್ಲಿ 3 ಮತ್ತು ಅದಕ್ಕಿಂತ ಹೆಚ್ಚು ಒಂದೇ ಸ್ಥಳದಲ್ಲಿ ಮತಗಟ್ಟೆ ಇರುವ ಕೇಂದ್ರಗಳಲ್ಲಿ ಮತದಾರರ ಸಹಾಯಮೇಜು ಸ್ಥಾಪಿಸಲಾಗುತ್ತದೆ/ ಹಾಗೂ ಸ್ವಯಂ ಸೇವಕರನ್ನು ನೇಮಕ ಮಾಡಲಾಗುತ್ತದೆ. ಮತದಾರರ ಚೀಟಿಯಲ್ಲಿ ಕ್ಯೂ.ಆರ್. ಕೋಡ್ ಸಹ ನೀಡಲಾಗುತ್ತಿದ್ದು, ಆನ್‌ ಮಾಡಿಕೊಂಡಲ್ಲಿ ಮತಗಟ್ಟೆಗೆ ಹೋಗಬಹುದು. ಆದರೂ ಇಂತಹ ಮತಗಟ್ಟೆಗಳಲ್ಲಿ ಗೊಂದಲ ಆಗದಂತೆ ಎಚ್ಚರ ವಹಿಸಲಾಗುತ್ತದೆ ಎಂದರು.

ಮತಗಟ್ಟೆ ಅಧಿಕಾರಿಗಳು ಸಂಪರ್ಕಕ್ಕೆ ಸಿಗದಿರುವ ಮತದಾರರ ಬಗ್ಗೆ ಅವರ ಸಂಪರ್ಕ ಸಾಧಿಸುವ ಮೂಲಕ ಮತದಾನ ಮಾಡಲು ತಿಳಿಸಲಾಗುತ್ತದೆ. ವಸತಿ ಗೃಹಗಳಲ್ಲಿ ವಾಸಿಸುತ್ತಿದ್ದ ಮತದಾರರಾಗಿದ್ದಲ್ಲಿ ಅಂತಹ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತಂದು ಅವರ ಸಂಪರ್ಕ ಸಾಧಿಸಲಾಗುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಅಗತ್ಯ ಸೇವಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅವರು ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರದಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅವರಿಗೆ 12ಡಿ ಕೊಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ್, ಬಿಎಲ್‌ಒಗಳು ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

- - -

ಬಾಕ್ಸ್‌-1 ಮತಗಟ್ಟೆ ಅಧಿಕಾರಿಗಳಿಗೆ ನೋಟಿಸ್ ಮತಗಟ್ಟೆ ಅಧಿಕಾರಿಗಳು ಕೆಲವು ಕಡೆ ಅತ್ಯುತ್ತಮವಾಗಿ ಕೆಲಸ ಮಾಡಿರುವರು. ಮತ್ತು ಇನ್ನು ಕೆಲವರು ಕರ್ತವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಭೆ ಕರೆದಿದ್ದರೂ ಸರಿಯಾದ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಗೈರುಹಾಜರಾಗಿದ್ದಾರೆ. ಅಂತಹ ಬಿ.ಎಲ್.ಒ.ಗಳಿಗೆ ನೋಟಿಸ್ ನೀಡಲು ಸಿಇಒ ಸುರೇಶ್‌ ಇಟ್ನಾಳ್‌ ಸೂಚಿಸಿದರು.

ಮತಗಟ್ಟೆ ಅಧಿಕಾರಿಗಳಾಗಿ ಬಹುತೇಕ ಶಿಕ್ಷಕರಿದ್ದು ಮುಂದಿನ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಉಪನಿರ್ದೇಶಕರನ್ನು ಸಭೆಗೆ ಆಹ್ವಾನಿಸಲಾಗುತ್ತದೆ. ಬಿ.ಎಲ್.ಒ. ಕೆಲಸ ಮಾಡುತ್ತಿರುವುದರಿಂದ ನಮಗೆ ಸಕಾಲದಲ್ಲಿ ಗಳಿಕೆ ರಜೆ ನೀಡಬೇಕಾಗಿದ್ದು, ಅದನ್ನು ನೀಡಿಲ್ಲ ಎಂದರು. ಆಗ ಈ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಚುನಾವಣಾಧಿಕಾರಿ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.

- - -

ಬಾಕ್ಸ್‌-2 ಬಿಎಲ್‌ಒಗಳ ಕರ್ತವ್ಯ ಪರಿಶೀಲಿಸಿ ಕ್ರಮಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ, ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಮತದಾರರಿಗೂ ಮತಚೀಟಿ, ಮಾರ್ಗದರ್ಶಿ, ಸಂಕಲ್ಪ ಪತ್ರವನ್ನು ಎಲ್ಲ ಮತದಾರರಿಗೂ ತಲುಪಿಸುವ ಕೆಲಸ ಮಾಡಲಾಗುತ್ತದೆ. ಈ ಕೆಲಸಕ್ಕಾಗಿ ಎಲ್ಲ ಬಿಎಲ್‌ಒಗಳ ಜೊತೆಗೆ ಪಾಲಿಕೆ ನೀರುಗಂಟಿ, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು ಸೇರಿದಂತೆ ಎಲ್ಲ ಬಿಲ್ ಕಲೆಕ್ಟರ್‌ಗಳನ್ನು ಮತಗಟ್ಟೆ ಅಧಿಕಾರಿಗಳೊಂದಿಗೆ ನೇಮಿಸಲಾಗುತ್ತದೆ. ಕೆಲವು ಕಡೆ ಬಿಎಲ್‌ಒಗಳು ಸರಿಯಾಗಿ ಕೆಲಸ ಮಾಡದಿರುವುದು ಕಂಡುಬಂದಿದೆ. ಅಂಥವರ ಕಾರ್ಯವನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

- - - -3ಕೆಡಿವಿಜಿ31ಃ:

ದಾವಣಗೆರೆಯಲ್ಲಿ ಜಿಪಂ ಸಿಇಒ, ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ. ಇಟ್ನಾಳ್ ಅಧ್ಯಕ್ಷತೆಯಲ್ಲಿ ಉತ್ತರ, ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. -3ಕೆಡಿವಿಜಿ32ಃ:

ದಾವಣಗೆರೆ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ದಾವಣಗೆರೆ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳು ಭಾಗವಹಿಸಿದ್ದರು.

Share this article