ಸಿರಿಧಾನ್ಯ ಉಳಿವಿಗಾಗಿ ಪಣ

KannadaprabhaNewsNetwork | Published : Jun 24, 2024 1:34 AM

ಸಾರಾಂಶ

ತಾಲೂಕಿನ ಮೂರು ಗ್ರಾಮಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಸಿ ಉಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದೆ.

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ಮೂರು ಗ್ರಾಮಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಸಿ ಉಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದೆ.

ಯೋಜನೆಯಡಿ ರಾಜ್ಯದಾದ್ಯಂತ ಸುಮಾರು 91 ತಾಲೂಕುಗಳನ್ನು ಆಯ್ಕೆ ಮಾಡಿಕೊಂಡಿದ್ದು ಅದರಲ್ಲಿ ಕುಷ್ಟಗಿ ತಾಲೂಕು ಒಂದಾಗಿದೆ. ಈ ತಾಲೂಕಿನ ಮೂರು ಹಳ್ಳಿಗಳನ್ನು ಆಯ್ಕೆಮಾಡಿಕೊಂಡು ಆಯಾ ಗ್ರಾಮಗಳಿಗೆ ತೆರಳುವ ಮೂಲಕ ಸಿರಿಧಾನ್ಯ ಬೆಳೆಗಳ ಬಗ್ಗೆ ಮಾಹಿತಿ ಹಾಗೂ ಬೀಜಗಳನ್ನು ವಿತರಣೆ ಮಾಡುವ ಮೂಲಕ ಸದೃಢ ಸಮಾಜದ ನಿರ್ಮಾಣಕ್ಕೆ ಸಜ್ಜಾಗಿದೆ.

ಸಂಪ್ರದಾಯ ಬೆಳೆಗಳನ್ನು ಪರಿಚಯಿಸುವ ಮತ್ತು ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದಲ್ಲಿ ಸಿರಿಧಾನ್ಯ ಬೆಳೆ ಉತ್ತೇಜಿಸಲು ಮುಂದಾಗಿದೆ.

ಆಯ್ಕೆಯಾದ ಮೂರು ಗ್ರಾಮಗಳು:

ಸಿರಿಧಾನ್ಯಗಳನ್ನು ಬೆಳೆಸಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ತಾಲೂಕಿನ ಮೂರು ಗ್ರಾಮಗಳಾದ ಹಿರೇಬನ್ನಿಗೋಳ, ಕೆ. ಗೋನಾಳ, ಜಾಲಿಹಾಳ ಗ್ರಾಮಗಳನ್ನು ಆಯ್ಕೆ ಮಾಡಿದ್ದು ಈ ಮೂರು ಗ್ರಾಮಗಳ ರೈತರ ಮೂಲಕ ಸಿರಿಧಾನ್ಯಗಳ ಬೆಳೆ ಬೆಳೆಯಲು ಮುಂದಾಗಿದೆ.

ಮಾಹಿತಿ ಮತ್ತು ವಿತರಣೆ:

ಕುಷ್ಟಗಿ ತಾಲೂಕಿನ ಮೂರು ಗ್ರಾಮಗಳ ರೈತರಿಗೆ ಸಿರಿಧಾನ್ಯದ ಬೀಜಗಳಾದ ನವಣೆ, ಊದಲು, ಕೊರಲೆ, ಬರಗು, ಅರಕ ಬೀಜಗಳನ್ನು ಉಚಿತವಾಗಿ ನೀಡುವ ಮೂಲಕ ಹಾಗೂ ಮಾಹಿತಿ ತಿಳಿಸಿ ಸಿರಿಧಾನ್ಯ ಬೆಳೆಯಲು ಉತ್ತೇಜಿಸಲಾಗುತ್ತಿದೆ.

ತಾಲೂಕಿನ ಮೂರು ಗ್ರಾಮಗಳಿಂದ ಒಟ್ಟು 350 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಸಿರಿಧಾನ್ಯಗಳಾದ ನವಣೆ, ಸಜ್ಜೆ, ಜೋಳ, ರಾಗಿ, ಬರಗು, ಸಾಮೆ, ಊದಲು, ಅರಕ, ಕೊರಲೆ ಗುರಿ ಹೊಂದಿದ್ದು, ಬಿತ್ತನೆ ಕಾರ್ಯ ನಡೆದಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಪ್ರಾದೇಶಿಕ ನಿರ್ದೇಶಕ, ಸಿರಿಧಾನ್ಯ ಯೋಜನಾಧಿಕಾರಿ, ಕೃಷಿ ವಿಭಾಗ, ತಾಲೂಕು ಕೃಷಿ ಮೇಲ್ವಿಚಾರಕ, ವಲಯ ಮೇಲ್ವಿಚಾರಕ ಹಾಗೂ ಸೇವಾ ಪ್ರತಿನಿಧಿಗಳು ಜಾಲಿಹಾಳ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲಿಸಿ ರೈತರಿಗೆ ಆರೋಗ್ಯ ವರ್ಧಕ ಬೇಸಾಯದ ಕ್ರಮ ಮತ್ತು ಅನುಪಾಲನೆ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ.

ಸಿರಿಧಾನ್ಯ ಬೆಳೆಸಿ, ಉಳಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಂದಾಗಿದೆ. ಅದರಲ್ಲಿ ಕುಷ್ಟಗಿ ತಾಲೂಕು ಆಯ್ಕೆಯಾಗಿರುವುದರಿಂದ ಈ ಭಾಗದ ರೈತರಿಗೆ ವರದಾನವಾಗಲಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ಎಂ.ರವಿಚಂದ್ರ ತಿಳಿಸಿದ್ದಾರೆ.

Share this article