ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳು ಅವಶ್ಯಕ: ಎಂ.ಎಸ್. ದಿವಾಕರ್‌

KannadaprabhaNewsNetwork |  
Published : Jan 22, 2025, 12:30 AM IST
21ಎಚ್‌ಪಿಟಿ3- ಹೊಸಪೇಟೆಯಲ್ಲಿ ಮಂಗಳವಾರ ನಡೆದ ಸಾವಯವ ಮೇಳದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ನಡಿಗೆಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಚಾಲನೆ ನೀಡಿದರು. | Kannada Prabha

ಸಾರಾಂಶ

ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳು ಅವಶ್ಯಕವಾಗಿದ್ದು, ಪ್ರತಿಯೊಬ್ಬರು ಸಿರಿಧಾನ್ಯಗಳ ಬಳಕೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.

ಹೊಸಪೇಟೆ: ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳು ಅವಶ್ಯಕವಾಗಿದ್ದು, ಪ್ರತಿಯೊಬ್ಬರು ಸಿರಿಧಾನ್ಯಗಳ ಬಳಕೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.

ಕೃಷಿ ಇಲಾಖೆಯಿಂದ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯ ನ್ಯೂಟ್ರಿ ಸಿರಿಧಾನ್ಯಗಳ ಕಾರ್ಯಕ್ರಮದಡಿ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳದ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಸಿರಿಧಾನ್ಯ ನಡಿಗೆಗೆ ನಗರದ ಎಪಿಎಂಸಿ ವೃತ್ತದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕೃಷಿ ಇಲಾಖೆಯಿಂದ ರಾಷ್ಟ್ರೀಯ ಸಿರಿಧಾನ್ಯ ಮೇಳ ಹಮ್ಮಿಕೊಳ್ಳುತ್ತಿರುವ ಅಂಗವಾಗಿ ಸಿರಿಧಾನ್ಯ ನಡಿಗೆ ಆಯೋಜಿಸಿದ್ದು, ನಾವೆಲ್ಲರೂ ಸಿರಿಧಾನ್ಯಗಳನ್ನು ಬಳಸುವುದು ಕಡಿಮೆಯಾಗಿದೆ. ಕೆಲವರು ಇದನ್ನು ಉಪಯೋಗ ಮಾಡುವುದನ್ನು ಬಿಟ್ಟಿದ್ದಾರೆ. ಮತ್ತೆ ಪುನಃ ಸಿರಿಧಾನ್ಯ ಬಳಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಆರೋಗ್ಯಕ್ಕಾಗಿ ಸಿರಿಧಾನ್ಯ ಅತಿ ಅವಶ್ಯಕವಾಗಿದೆ. ನಮ್ಮ ಆರೋಗ್ಯಕ್ಕೆ ಸಿರಿಧಾನ್ಯದಲ್ಲಿರುವ ಅಂಶಗಳು ಮತ್ತು ಇದರಿಂದ ಆರೋಗ್ಯದ ಅನುಕೂಲಗಳ ಬಗ್ಗೆ ಮತ್ತು ಹಿಂದಿನ ಕಾಲದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಸಲಾಗುತ್ತಿತ್ತು. ಸಿರಿಧಾನ್ಯಗಳ ಆಹಾರದಿಂದ ವಿವಿಧ ರೀತಿಯ ಕಾಯಿಲೆಗಳನ್ನು ತಡೆಯಬಹುದು. ಈ ಕುರಿತು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಜಾಥಾ ಮತ್ತು ಅಂತಾರಾಷ್ಟ್ರೀಯ ಮೇಳಗಳನ್ನು ಆಯೋಜಿಸಲಾಗುತ್ತಿದೆ. ಇದರ ಜತೆಗೆ ಸಿರಿಧಾನ್ಯಗಳನ್ನು ಬೆಳೆಯುವವರಿಗೂ ಪ್ರೋತ್ಸಾಹ ಕೊಡಬೇಕಿದೆ. ಬೆಳೆಯುವುದರ ಜತೆಗೆ ಸಿರಿಧಾನ್ಯಗಳನ್ನು ಸಾರ್ವಜನಿಕರು ಬಳಕೆಗೆ ಮುಂದಾಗಬೇಕು. ಎಲ್ಲರೂ ಸಿರಿಧಾನ್ಯ ಬಳಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಸಿರಿಧಾನ್ಯಗಳ ಬಳಕೆ ಕುರಿತು ಹೆಚ್ಚಿನ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಮುಖ ಉದ್ದೇಶದಿಂದ ಜಾಥಾ ಹಮ್ಮಿಕೊಂಡಿದ್ದೇವೆ. ರೈತರು ಹೆಚ್ಚಿನ ಮಟ್ಟದಲ್ಲಿ ಸಿರಿಧಾನ್ಯಗಳ ಬೆಳೆಯಲು ಮತ್ತು ಬಳಕೆಗೆ ಮುಂದಾಗಬೇಕು. ಈ ಬಗ್ಗೆ ಇಲಾಖೆಯಿಂದ ಹೆಚ್ಚಿನದಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದರಿಂದ ರೈತರಿಗೂ ಅನುಕೂಲ ಆಗಲಿ ಎಂಬ ಉದ್ದೇಶ ನಮ್ಮದಾಗಿದೆ ಎಂದರು.

ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಹಾಗೂ ವಿಶಿಷ್ಟ ಕೃಷಿಯಾಗಿದೆ. ಕಡಿಮೆ ಮಳೆ ಇದ್ದರೂ ಈ ಬೆಳೆಗಳನ್ನು ಬೆಳೆಯಬಹುದು. ಇವುಗಳ ಬೆಳವಣಿಗೆಗೆ ರಾಸಾಯನಿಕ ಗೊಬ್ಬರಗಳ ಬಳಕೆ ಅವಶ್ಯಕತೆ ತೀರಾ ಕಡಿಮೆ ಇದೆ ಎಂದರು.

ನಡಿಗೆ ಮಾರ್ಗ

ಎಪಿಎಂಸಿ ವೃತ್ತದಿಂದ ಆರಂಭವಾದ ಸಿರಿಧಾನ್ಯ ನಡಿಗೆ ವಾಲ್ಮೀಕಿ ವೃತ್ತ, ಮದಕರಿ ನಾಯಕ ವೃತ್ತ, ನಗರಸಭೆ, ಕೇಂದ್ರ ಬಸ್ ನಿಲ್ದಾಣ, ಡಾ.ಪುನೀತ್ ರಾಜಕುಮಾರ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಕಾಲೇಜು ರಸ್ತೆ ಮಾರ್ಗವಾಗಿ ಜಿಲ್ಲಾ ಒಳಕ್ರೀಡಾಂಗಣಕ್ಕೆ ತಲುಪಿ ಕೊನೆಗೊಂಡಿತು.

ಜಿಪಂ., ಸಿಇಒ ಅಕ್ರಂ ಶಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಿದಾನಂದ ಪಿ.ಜಿ., ಕೃಷಿ ಉಪನಿರ್ದೇಶಕ ಡಾ. ನಯೀಂ ಪಾಷಾ, ಸಹಾಯಕ ಕೃಷಿ ನಿರ್ದೇಶಕ ವಾಮದೇವ್ ಕೊಳ್ಳಿ, ರೋಟರಿ ಕ್ಲಬ್ ಅಧ್ಯಕ್ಷ ದೀಪಕ್ ಕೊಳಗದ್ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ