ಹಂಪಿ (ಎಂ.ಪಿ. ಪ್ರಕಾಶ್ ಪ್ರಧಾನ ವೇದಿಕೆ): ವಿಜಯನಗರದ ಗತವೈಭವ ಸಾರುವ ಹಂಪಿ ಉತ್ಸವಕ್ಕೆ ನಗಾರಿ ಬಾರಿಸುವ ಮೂಲಕ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ವಿಧ್ಯುಕ್ತ ಚಾಲನೆ ನೀಡಿದರು. ಈ ಮೂಲಕ ಹಂಪಿಯ ಆರು ವೇದಿಕೆಗಳಲ್ಲಿ ನಾಡಿನ ಕಲೆ, ಸಾಹಿತ್ಯ, ವಾಸ್ತುಶಿಲ್ಪ ಪರಂಪರೆ ಬಿಂಬಿಸುವ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಕಲೆ, ಸಾಹಿತ್ಯ, ಸಂಸ್ಕೃತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಈ ಹಿಂದೆ ಕೆಲವರು ತಾವೇ ಶ್ರೀಕೃಷ್ಣದೇವರಾಯರು ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಆದರೆ, ಜಮೀರ್ ಅಹಮದ್ ಖಾನ್ ಅವರು ಅಚ್ಚುಕಟ್ಟಾಗಿ ಉತ್ಸವ ಮಾಡುವ ಮೂಲಕ ಈ ನೆಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಿದ್ದಾರೆ. ಹಂಪಿ ಉತ್ಸವ, ಆನೆಗೊಂದಿ ಉತ್ಸವ, ಕನಕಗಿರಿ ಉತ್ಸವವನ್ನು ನಮ್ಮ ಸರ್ಕಾರ ಮಾಡುತ್ತಾ ಬರುತ್ತಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಚಿವ ಜಮೀರ್ ಅಹಮದ್ ಖಾನ್ ಮಾತನಾಡಿ, ವಿಜಯನಗರದ ನೆಲ ಐತಿಹಾಸಿಕ ನೆಲವಾಗಿದೆ. ಎಂ.ಪಿ. ಪ್ರಕಾಶ್ ಅವರು ಹಂಪಿ ಉತ್ಸವದ ರೂವಾರಿ ಆಗಿದ್ದಾರೆ. ಹಂಪಿ ಉತ್ಸವವನ್ನು ಪ್ರತಿ ವರ್ಷ ಆಚರಣೆ ಮಾಡುವ ಮೂಲಕ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಲಾಗುತ್ತಿದೆ. ಕಲೆಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದರು.ಚಿತ್ರನಟಿ ಪ್ರೇಮಾ ಮಾತನಾಡಿ, ಹಂಪಿ ಉತ್ಸವವನ್ನು ನಾವೆಲ್ಲರೂ ಆಸ್ವಾದಿಸೋಣ, ಗತ ವೈಭವ ಮರುಕಳಿಸೋಣ ಎಂದರು.
ಶಾಸಕ ಎಚ್.ಆರ್. ಗವಿಯಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ರಾಜಶೇಖರ್ ಹಿಟ್ನಾಳ, ಶಾಸಕರಾದ ಕೆ. ನೇಮರಾಜ್ ನಾಯ್ಕ, ಎಂ.ಪಿ. ಲತಾ, ಎನ್.ಟಿ. ಶ್ರೀನಿವಾಸ್, ಕೃಷ್ಣ ನಾಯ್ಕ, ಮುಖಂಡರಾದ ಕುರಿ ಶಿವಮೂರ್ತಿ, ಗುಜ್ಜಲ ನಾಗರಾಜ್, ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಅಧಿಕಾರಿಗಳಾದ ಧರಣಿದೇವಿ ಮಾಲಗತ್ತಿ, ನೋಂಗ್ಝಾಯ್ ಮಹಮ್ಮದ್ ಅಲಿ ಅಕ್ರಂ ಷಾ, ಎಸ್ಪಿ ಶ್ರೀಹರಿಬಾಬು, ನಟಿ ಪೂಜಾ ಗಾಂಧಿ ಮತ್ತಿತರರಿದ್ದರು. ಬಿಗ್ ಬಾಸ್ ಖ್ಯಾತಿಯ ಹನುಮಂತ ಲಮಾಣಿ ಅವರನ್ನು ಸನ್ಮಾನಿಸಲಾಯಿತು. ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೂ ವೇದಿಕೆಯಲ್ಲೇ ಚಾಲನೆ ನೀಡಲಾಯಿತು.