ದೇಶಕ್ಕೇ ಮಾದರಿಯಾದ : ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ : ಸೂರಜ್ ಎಂ.ಎನ್. ಹೆಗಡೆ

KannadaprabhaNewsNetwork |  
Published : Mar 01, 2025, 01:04 AM ISTUpdated : Mar 01, 2025, 12:55 PM IST
ಸಿಕೆಬಿ-4  ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ಸಭೆಯಲ್ಲಿ  ಸೂರಜ್ ಎ.ಎನ್.ಹೆಗ್ಗಡೆ ಮಾತನಾಡಿದರು | Kannada Prabha

ಸಾರಾಂಶ

  ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರುಪಾಯಿಗಳಷ್ಟು ಮೀಸಲಿಟ್ಟಿದ್ದು, ಈವರೆಗೆ 36 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಕರ್ನಾಟಕದ ಬಳಿಕ ಗ್ಯಾರಂಟಿ ಯೋಜನೆಗಳನ್ನು ಬೇರೆ ರಾಜ್ಯಗಳಲ್ಲೂ ಜಾರಿಗೊಳಿಸಿದ್ದಾರೆ.

  ಚಿಕ್ಕಬಳ್ಳಾಪುರ : ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಮಾದರಿಯಾಗಿ ಪರಿಗಣಿಸಿ ಇತರ ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿವೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್. ಹೆಗಡೆ ತಿಳಿಸಿದರು.

 ಜಿಲ್ಲಾಡಳಿತ ಭವನದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಿದೆ ಎಂದರು.

ಗ್ಯಾರಂಟಿಗೆ ₹52 ಸಾವಿರ ಕೋಟಿ

ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರುಪಾಯಿಗಳಷ್ಟು ಮೀಸಲಿಟ್ಟಿದ್ದು, ಈವರೆಗೆ 36 ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಕರ್ನಾಟಕದ ಬಳಿಕ ಗ್ಯಾರಂಟಿ ಯೋಜನೆಗಳನ್ನು ಮಧ್ಯಪ್ರದೇಶ, ಜಾರ್ಖಂಡ್, ಮಹಾರಾಷ್ಟ್ರ, ರಾಜಾಸ್ಥಾನ, ದೆಹಲಿ, ಒರಿಸ್ಸಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಜಾರಿ ಮಾಡಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಯೋಜನೆಗಳ ಅನುಷ್ಠಾನದಲ್ಲಿ ಏನಾದರೂ ಸಣ್ಣ ಪುಟ್ಟ ತೊಂದರೆಗಳು, ದೋಷಗಳು ಮತ್ತು ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಸರ್ಕಾರದ ಗಮ‌ನಕ್ಕೆ ತಂದಲ್ಲಿ ಪರಿಶೀಲಿಸಿ ಸೂಕ್ತವೆನಿಸಿದಲ್ಲಿ ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. ಒಟ್ಟಾರೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಗೃಹಲಕ್ಷ್ಮಿ ಹಣ ನವೆಂಬರ್ ತಿಂಗಳವರೆಗೆ ಬಿಡುಗಡೆಯಾಗಿದ್ದು, ಎಲ್ಲಾ ಗ್ಯಾರಂಟಿ ಯೋಜನೆಗಳ ಬಾಕಿ ಹಣ ಶೀಘ್ರದಲ್ಲೇ ಬಿಡುಗಡೆಯಾಗಿ ಫಲಾನುಭವಿಗಳಿಗೆ ತಲುಪಲಿದೆ ಎಂದರು.

ವಾರ್ತಾ ಇಲಾಖೆಯಿಂದ ಪ್ರಚಾರ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಲು ಜಾಗೃತಿ ಸಂಚಾರಿ ವಾಹನಗಳ ಮೂಲಕ ಅರಿವು ಮೂಡಿಸಲು ಉದ್ದೇಶಿಸಲಾಗಿದೆ. ಈ ವಾಹನಗಳು ಪ್ರತಿ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ವರೆಗೆ ರಾಜ್ಯಾದ್ಯಂತ ವಿವಿಧ ವಾರ್ಡ್ ಗಳು, ಗ್ರಾಮಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಿವೆ. ಪಂಚ ಗ್ಯಾರಂಟಿ ಯೋಜನೆಗಳು ಈಗಾಗಲೇ ಬಹುತೇಕ ಎಲ್ಲರನ್ನು ತಲುಪಿವೆ.

ಈ ಸಂಚಾರಿ ವಾಹನದಲ್ಲಿ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವ ಬಗ್ಗೆ ಮಾಹಿತಿಗಳನ್ನು ಬಿತ್ತಿ ಪತ್ರದ ರೂಪದಲ್ಲಿ ಅಳವಡಿಸಲಾಗಿದೆ. 5 ಜನರ ಕಲಾವಿದರ ತಂಡ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾರೆ. ಈ ಉಪಯೋಗವನ್ನು ಎಲ್ಲ ಸಾರ್ವಜನಿಕರು ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಜಾಗೃತಿ ಮೂಡಿಸಲು ಪ್ರಚಾರ

ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆಗಳ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುವ ಸಂಚಾರಿ ವಾಹನ ಈಗಾಗಲೇ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಈ ವಾಹನವು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅರಿವು ಮೂಡಿಸಿ ಮುಂದಿನ ಜಿಲ್ಲೆಗೆ ತೆರಳಲಿದೆ ಎಂದರು.

ಜಾಗೃತಿ ವಾಹನಕ್ಕೆ ಚಾಲನೆ

ಪತ್ರಿಕಾಗೋಷ್ಠಿಯ ನಂತರ ಜಿಲ್ಲಾಡಳಿತ ಭವನದ ಮುಂಭಾಗದಿಂದ ಜಾಗೃತಿ ವಾಹನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಉಪಾಧ್ಯಕ್ಷರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಳುವಳ್ಳಿ ರಮೇಶ್, ಉಪಾಧ್ಯಕ್ಷರುಗಳಾದ ರಾಮಕೃಷ್ಣಪ್ಪ, ಜಿ.ಸುಬ್ಬಾರೆಡ್ಡಿ, ಆದಿರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಜಿಪಂ ಉಪಕಾರ್ಯದರ್ಶಿ ಅತಿಕ್ ಪಾಷ, ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರಿದ ಅಧ್ಯಕ್ಷರುಗಳು ಮತ್ತಿತರರು ಇದ್ದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''