ಸಂವಿಧಾನವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶ ನೀಡಿದೆ: ಡಾ.ಡಿ.ತಿಮ್ಮಯ್ಯ

KannadaprabhaNewsNetwork | Published : Mar 1, 2025 1:04 AM

ಸಾರಾಂಶ

ದಲಿತರಿಗೆ ಸಂವಿಧಾನದಿಂದ ಎಷ್ಟು ಉಪಯೋಗ ಆಗಿದೆ ಎಂಬುದಕ್ಕೆ ಇವತ್ತು ನಾವು- ನೀವು ಸಾಕ್ಷಿಯಾಗಿದ್ದೇವೆ. ಶಿಕ್ಷಣ, ಅಭಿವೃದ್ಧಿ, ವೈಜ್ಞಾನಿಕ ಕ್ಷೇತ್ರಗಳಿಗೂ ಸಂವಿಧಾನ ಅವಕಾಶಗಳನ್ನು ನೀಡಿದೆ. ದಲಿತರು ಹಾಗೂ ಅಸ್ಪೃಶ್ಯರಿಗೆ ಸಮಾನತೆ ಸಿಗುವುದಕ್ಕೆ ಮುಖ್ಯವಾಗಿ ಸಂವಿಧಾನ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತದ ಸಂವಿಧಾನವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಅವಕಾಶಗಳನ್ನು ನೀಡಿದ್ದು, ಅವರು ಮುಖ್ಯವಾಹಿನಿಗೆ ಬರಲು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ ಎಂದು ವಿಧಾನ ಪರಿಷತ್ತು ಸದಸ್ಯ ಡಾ.ಡಿ.ತಿಮ್ಮಯ್ಯ ತಿಳಿಸಿದರು.

ನಗರದ ಮಹಾರಾಜ ಕಾಲೇಜಿನ ಶತಮಾನತ್ಸೋವ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾರಾಜ ಕಾಲೇಜು ಕನ್ನಡ ವಿಭಾಗ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಓದು ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ದಲಿತರಿಗೆ ಅದರಿಂದ ಎಷ್ಟು ಉಪಯೋಗ ಆಗಿದೆ ಎಂಬುದಕ್ಕೆ ಇವತ್ತು ನಾವು- ನೀವು ಸಾಕ್ಷಿಯಾಗಿದ್ದೇವೆ. ಶಿಕ್ಷಣ, ಅಭಿವೃದ್ಧಿ, ವೈಜ್ಞಾನಿಕ ಕ್ಷೇತ್ರಗಳಿಗೂ ಸಂವಿಧಾನ ಅವಕಾಶಗಳನ್ನು ನೀಡಿದೆ. ದಲಿತರು ಹಾಗೂ ಅಸ್ಪೃಶ್ಯರಿಗೆ ಸಮಾನತೆ ಸಿಗುವುದಕ್ಕೆ ಮುಖ್ಯವಾಗಿ ಸಂವಿಧಾನ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಯುವಕರು ಇಂತಹ ಮಹಾನ್ ವ್ಯಕ್ತಿಗಳ ಚರಿತ್ರೆಯ ಬಗ್ಗೆ ಹಾಗೂ ಪುಸ್ತಕಗಳನ್ನು ಓದಿ ಹೆಚ್ಚಾಗಿ ಅವರ ಬಗ್ಗೆ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಆದರಿಂದ ಪ್ರೇರೇಪಿತರಾಗಿ ಮುಂದಿನ ಭವಿಷ್ಯಗಳಿಗೆ ಉತ್ತೇಜನವನ್ನು ನೀಡಬೇಕು ಎಂದು ಅವರು ಸಲಹೆ ನೀಡಿದರು.

ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ಮಾತನಾಡಿ, ಬಾಬಾ ಸಾಹೇಬರ ಬಗ್ಗೆ ಎಷ್ಟೋ ಪುಸ್ತಕಗಳು ಇದೆ. ಅದನ್ನು ಯುವಕರು ಅತಿ ಹೆಚ್ಚಾಗಿ ಓದಿ ತಿಳಿದುಕೊಳ್ಳಬೇಕು. ಅವರ ದಾರಿಯಲ್ಲಿ ನಡೆಯಬೇಕು. ಡಾ. ಅಂಬೇಡ್ಕರ್ ಹೋರಾಟದಿಂದ ಶತಶತಮಾನಗಳಿಗೂ ಕೊಡುಗೆಗಳನ್ನು ಕೊಟ್ಟಿದ್ದಾರೆ. ಹೀಗಾಗಿ, ಯುವಕರು ಅತಿ ಹೆಚ್ಚಾಗಿ ಇಂತಹ ಮಹಾನ್ ವ್ಯಕ್ತಿಗಳ ಚರಿತ್ರೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್ ಮಾತನಾಡಿ, ಡಾ. ಅಂಬೇಡ್ಕರ್ ಅವರು ಮಹದ್ ಸತ್ಯಾಗ್ರಹ ಚಳವಳಿಯ ನಾಯಕರಾಗಿದ್ದರು. ಈ ಚಳವಳಿಯು ದಲಿತ ಸಮುದಾಯಕ್ಕೆ ಮೂಲಭೂತ ಮಾನವ ಹಕ್ಕುಗಳನ್ನು ಪಡೆಯುವ ಹೋರಾಟವಾಗಿತ್ತು. ಮಹದ್ ಚಳವಳಿಯ ಮೂಲಕ ಅಂಬೇಡ್ಕರ್ ಅವರು ದಲಿತರ ವಿರುದ್ಧದ ಸಾಮಾಜಿಕ ತಾರತಮ್ಯವನ್ನು ಕೊನೆಗೊಳಿಸಲು ಬಯಸಿದ್ದರು. ನಿರಂತರ ಹೋರಾಟದಲ್ಲಿ ಮಹದ್ ಪುರಸಭೆಯು ಸಾಮಾಜಿಕ ಜಾತಿಯನ್ನು ಲೆಕ್ಕಿಸದೆ ಎಲ್ಲಾ ಜನರು ಟ್ಯಾಂಕ್‌ ನೀರನ್ನು ಬಳಸಲು ಅವಕಾಶ ನೀಡುವ ನಿರ್ಣಯವನ್ನು ಅಂಗೀಕರಿಸುವಂತೆ ಮಾಡಿತು. ಭಾರತದಾದ್ಯಂತ ವರ್ಗ ಚಳವಳಿಯನ್ನು ಕ್ರಾಂತಿಕಾರಿ ಚಳವಳಿಯಾಗಿ ಪರಿವರ್ತಿಸುವಲ್ಲಿ ಅಂಬೇಡ್ಕರ್ ಯಶಸ್ವಿಯಾದರು ಎಂದು ವಿವರಿಸಿದರು.

ಮಹಾರಾಜ ಕಾಲೇಜಿನ ಆಡಳತಾಧಿಕಾರಿ ಡಾ.ಕೆ. ತಿಮ್ಮಯ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ. ವಿಜಯಲಕ್ಷ್ಮಿ, ಕನ್ನಡ ಸಂಘದ ಸಂಚಾಲಕ ಪ್ರೊ.ಸಿ.ಕೆ. ಪುಟ್ಟಸೋಮಾಚರ್, ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎನ್. ವಸಂತರಾಜು, ಸಹಾಯಕ ಪ್ರಾಧ್ಯಾಪಕರಾದ ಡಿ. ಅಂಬಿಕಾ, ಎಚ್.ಎಲ್. ದಿವ್ಯಾ, ಕೆ. ಶ್ರುತಿ, ಎಸ್. ರಾಜಶೇಖರ್ ಮೊದಲಾದವರು ಇದ್ದರು.

Share this article