ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಸೆಸ್ಕಾಂ ಉಪ ವಿಭಾಗೀಯ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರೈತ ಮುಖಂಡರು ಇಲಾಖೆ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಣ ಮತ್ತು ಅಧಿಕಾರ ಬಲ ಇರುವವರಿಗೆ ನಿಯಮ ಮೀರಿ ವಿದ್ಯುತ್ ಪರಿವರ್ತಕ (ಟಿ.ಸಿ) ನೀಡುತ್ತಿರಾ. ಸಾಮಾನ್ಯ ರೈತರಿಗೆ ವರ್ಷಗಳು ಕಳೆದರೂ ಟಿ.ಸಿ ನೀಡದೆ ಅಲೆದಾಡಿಸುತ್ತಿದ್ದಾರೆ ಎಂದು ದೂರಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಸೆಸ್ಕ್ ರೈತರಿಗೆ ಸಮರ್ಪಕ ಸೇವೆ ನೀಡದೆ ಕಿರುಕುಳ ನೀಡುತ್ತಿದೆ. ಹಣ ಕಟ್ಟಿ ಟಿಸಿಗಾಗಿ ಕಾಯುತ್ತಿದ್ದರೂ ನಿಯಮಾನುಸಾರ ಟಿ.ಸಿ.ನೀಡುತ್ತಿಲ್ಲ. ಹಣ ಮತ್ತು ಅಧಿಕಾರ ಬಲ ಹೊಂದಿರುವವರಿಗೆ ಟಿಸಿ ವ್ಯವಸ್ಥೆ ಬೇಗ ಮಾಡಿಕೊಡಲಾಗುತ್ತಿದೆ. ಟಿ.ಸಿ ಅಳವಡಿಕೆಯಲ್ಲಿ ಜೇಷ್ಠತೆ ನಿಯಮ ಪಾಲಿಸಿ ಎಂದು ಆಗ್ರಹಿಸಿದರು.ತಾಲೂಕಿನ ಗೋವಿಂದೇಗೌಡನ ಕೊಪ್ಪಲು ಗ್ರಾಮದ ರೈತ ಲೋಕೇಶ್ ಹೊಸ ಟಿ.ಸಿ. ಸಂಪರ್ಕಕ್ಕೆ 2012 ರಲ್ಲಿಯೇ 15 ಸಾವಿರ ರೂ ಹಣ ಕಟ್ಟಿದ್ದಾರೆ. ಇದುವರೆಗೂ ಟಿ.ಸಿ.ನೀಡಿಲ್ಲ. ಕೆಲವು ಕಡೆ ಗುತ್ತಿಗೆದಾರರು ಟಿ.ಸಿ ಅಳವಡಿಸಿಲು ರೈತರಿಂದ 1.5 ಲಕ್ಷ ರು ಹಣ ಪಡೆದಿದ್ದರೂ ಟಿ.ಸಿ ಮಾತ್ರ ಅಳವಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಾದ್ಯಂತ ನೂರಾರು ತೋಟದ ಮನೆಗಳಿವೆ. ಇಲ್ಲಿ ವಾಸಿಸುತ್ತಿರುವ ರೈತ ಕುಟುಂಬಗಳಿಗೆ ನಿರಂತರ ವಿದ್ಯುತ್ ಸಂಪರ್ಕ ನೀಡಿಲ್ಲ. ಐಪಿ ಸೆಟ್ ವಿದ್ಯುತ್ ಸಂಪರ್ಕವನ್ನೆ ಮನೆಗಳಿಗೆ ಬಳಕೆ ಮಾಡಲಾಗುತ್ತಿದೆ. ನಿತ್ಯ 7 ಗಂಟೆ ಕಾಲ ಮಾತ್ರ ವಿದ್ಯುತ್ ನೀಡುವುದರಿಂದ ನಿವಾಸಿಗಳು ರಾತ್ರಿ ವೇಳೆ ಕತ್ತಲಿನಲ್ಲಿಯೇ ವಾಸಿಸಬೇಕಾಗಿದೆ ಎಂದರು.
ಸೆಸ್ಕಾಂ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮಾತನಾಡಿ, ಅನಧಿಕೃತ ವಿದ್ಯುತ್ ಸಂಪರ್ಕದಿಂದಾಗಿ ಕೆಲವು ಕಡೆ ಓವರ್ ಲೋಡ್ ಆಗಿ ಟಿ.ಸಿ ಗಳು ಸುಟ್ಟು ಹೋಗುತ್ತಿವೆ. ಅನುದಾನ ಕೊರತೆಯಿಂದ ಹೊಸ ಟಿ.ಸಿ ಅಳವಡಿಕೆ ಮಾಡಿಲ್ಲ. ಎನ್.ಜೆ.ವೈ ಯೋಜನೆ ಮೂಲಕ 24 ಘಂಟೆಗಳ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಲಾಗುತ್ತಿದೆ. ವಿದ್ಯುತ್ ಸಂಪರ್ಕ ಪಡೆಯಲು ರೈತರು ಇಲಾಖೆ ನಿಯಮಗಳಿಗೆ ವಿರುದ್ದವಾಗಿ ಒಪ್ಪಂದ ಮಾಡಿಕೊಂಡಿದ್ದರೆ ಅದಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ರೈತರು ಇಲಾಖೆ ಜೊತೆ ಸಹಕರಿಸಿದರೆ ಇಲಾಖೆ ಜವಾಬ್ದಾರಿಯುತವಾಗಿ ಕೆಲಸ ಮಾಡಲಿದೆ ಎಂದರು.