- ಸಿಜಿಕೆ ಪ್ರಶಸ್ತಿ ಪ್ರದಾನ- ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ.ರಾಮಚಂದ್ರಪ್ಪ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಿಜಿಕೆ ಅವರ ಹೆಸರಿನಲ್ಲಿಂದು ಹೆಚ್ಚು ರಂಗ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಆದರೆ ಸಾಣೇಹಳ್ಳಿಯ ಶ್ರೀಮಠ ಮತ್ತು ಶ್ರೀಗಳು ಸಿಜಿಕೆ ಅವರ ಕನಸನ್ನು ಸದಾ ಜೀವಂತವಾಗಿ ಇಟ್ಟಿರುವುದು ಸಂತೋಷದ ವಿಚಾರ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ. ಎ.ಬಿ. ರಾಮಚಂದ್ರಪ್ಪ ಹೇಳಿದರು.ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಬೆಂಗಳೂರಿನ ಕರ್ನಾಟಕ ರಂಗ ಪರಿಷತ್ತು, ಕೂಲಂಬಿಯ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಿಜಿಕೆ ಪ್ರಶಸ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬಸವಣ್ಣ ಅವರನ್ನು ಸರ್ಕಾರ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದಾಗ ರಾಜ್ಯದಲ್ಲಿ ಹೆಚ್ಚು ಚರ್ಚೆಗಳಾಗಲಿ, ಸಂತೋಷವಾಗಲಿ ಕೇಳಿಬರಲಿಲ್ಲ. ಆದರೆ, ಬಸವಣ್ಣನವರನ್ನು ನಿಜವಾಗಿಯೂ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಂಡು ಅವರನ್ನು ಪಾಲಿಸಿದ್ದೇ ಆಗಿದ್ದಲ್ಲಿ ಕರ್ನಾಟಕದಲ್ಲಿ ಕೋಮುಭಾವನೆ ಕೆರಳುತ್ತಿರಲಿಲ್ಲ. ಜಾತಿರಹಿತವಾದ ಅಂಥ ವ್ಯಕ್ತಿಯನ್ನು ಈ ನಾಡಿನ ಸಾಂಸ್ಕೃತಿಕ ನಾಯಕ ಎಂದು ಒಪ್ಪಿಕೊಳ್ಳುವಲ್ಲಿ ನಾವು ಎಡವಿದ್ದೇವೆ ಎಂದು ವಿಷಾದಿಸಿದರು.ಮಾನವ ಬಂಧುತ್ವ ವೇದಿಕೆಯಿಂದ ಮುಂದಿನ ತಿಂಗಳು ನಾಗಪಂಚಮಿಯ ಬದಲಿಗೆ ಬಸವಪಂಚಮಿಯನ್ನು ರಾಜ್ಯದ 2 ಸಾವಿರ ಹಳ್ಳಿಗಳಲ್ಲಿ ಆಚರಿಸಲಾಗುತ್ತಿದೆ. ಪೌಷ್ಟಿಕವಾದ ಹಾಲನ್ನು ಕಲ್ಲು ನಾಗರಕೆ ಹಾಕುವ ಬದಲು, ಮಕ್ಕಳಿಗೆ ಕೊಡುವ ಮತ್ತು ಮೌಢ್ಯಾಚರಣೆ ನೆಪದಲ್ಲಿ ಹಾಲನ್ನು ನೆಲಕ್ಕೆ ಹಾಕುವುದು ಬೇಡ ಎನ್ನುವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ರಂಗಕರ್ಮಿ ಎಚ್.ಎಸ್. ದ್ಯಾಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕ ಎನ್ನುವ ಪದಕ್ಕೆ ಅತ್ಯಂತ ವಿಶಾಲವಾದ ಅರ್ಥವಿದೆ. ಹಾಗಾಗಿಯೇ, ಸರ್ಕಾರ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಸಿಜಿಕೆ ನಮ್ಮನ್ನಗಲಿ 18 ವರ್ಷ ತುಂಬಿವೆ. ಆದರೂ ಅವರ ಹೆಸರಿನಲ್ಲಿ ದಾವಣಗೆರೆಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.ರೇವಣ ಸಿದ್ದೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಎಸ್. ನಾಗರಾಜಪ್ಪ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಸಿಜಿಕೆ ಪ್ರಶಸ್ತಿಯನ್ನು ಚಿಕ್ಕಬೆನ್ನೂರಿನ ರಂಗಕರ್ಮಿ ಜಿ.ಎಚ್. ರುದ್ರೇಶ್ ಅವರಿಗೆ ಹಾಗೂ ಬಸವಜ್ಯೋತಿ ಪ್ರಶಸ್ತಿಯನ್ನು ವಿಭೂತಿ ಬಸವಾನಂದರಿಗೆ ಪ್ರದಾನ ಮಾಡಲಾಯಿತು.
ಈ ಸಂದರ್ಭ ಹಿರಿಯ ರಂಗಕರ್ಮಿ ಎನ್.ಎಸ್. ರಾಜು, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಜಿ.ಎಸ್. ಲಿಂಗರಾಜು, ಜಿಲ್ಲಾ ವರದಿಗಾರರ ಕೂಟ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಉಪಸ್ಥಿತರಿದ್ದರು.ಅನಂತರ ವಿವಿಧ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
- - -ಬಾಕ್ಸ್ "ಪ್ರಶಸ್ತಿಗೆ ರಾಜಕೀಯ ಲಾಬಿ ಸಲ್ಲ " ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿ, ನಿಜವಾದ ಕಲಾವಿದರಿಗೆ ಪ್ರಶಸ್ತಿ, ಸನ್ಮಾನಗಳು ಸಿಗುತ್ತಿಲ್ಲ. ಬದಲಿಗೆ ರಾಜಕೀಯ ಲಾಬಿ ಮಾಡಿ ಪ್ರಶಸ್ತಿಗಳನ್ನು ಪಡೆಯುವ ವಾತಾವರಣ ನಿರ್ಮಾಣ ಆಗಿರುವುದು ಖೇದಕರ. ನಾಡಿನ ನಿಜವಾದ ಕಲೆ, ಕಲಾವಿದರು ನಶಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಕಲಾಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದರು.
- - --20ಕೆಡಿವಿಜಿ41ಃ:
ದಾವಣಗೆರೆಯಲ್ಲಿ ಸಿಜಿಕೆ ಪ್ರಶಸ್ತಿಯನ್ನು ರಂಗಕರ್ಮಿ ಜಿ.ಎಚ್. ರುದ್ರೇಶ್ ಅವರಿಗೆ ಹಾಗೂ ಬಸವಜ್ಯೋತಿ ಪ್ರಶಸ್ತಿಯನ್ನು ವಿಭೂತಿ ಬಸವಾನಂದರಿಗೆ ಪ್ರದಾನ ಮಾಡಲಾಯಿತು.