ಬೀದಿ ನಾಟಕಗಳ ಪಿತಾಮಹ ಸಿಜಿಕೆ:

KannadaprabhaNewsNetwork |  
Published : Jun 29, 2025, 01:32 AM IST
28ಎಚ್‌ವಿಆರ್2 | Kannada Prabha

ಸಾರಾಂಶ

ಹಾವೇರಿಯ ಹೊಸಮಠದ ಆವರಣದಲ್ಲಿ ಜರುಗಿದ 11ನೇ ವರ್ಷದ ಸಿಜಿಕೆ ಬೀದಿನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲೆಯ ಐವರು ರಂಗಭೂಮಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಾವೇರಿ: ಬೀದಿನಾಟಕಗಳು ಚಿಕ್ಕವಾದರೂ ಪರಿಣಾಮದಲ್ಲಿ ಬಲು ದೊಡ್ಡವು. ಜನಮಾನಸಕ್ಕೆ ಮುಟ್ಟುವ ಬೀದಿ ನಾಟಕ ಚಿಕ್ಕ ಚಿಕ್ಕ ಪಾತ್ರಗಳಿದ್ದರೂ ಅಭಿನಯಿಸುವಾಗ ಅರಿವು ಸ್ಫೋಟಿಸುವ ಶಕ್ತಿಕೇಂದ್ರಗಳಾಗುತ್ತವೆ. ಇದನ್ನು ಕರ್ನಾಟಕದಲ್ಲಿ ಉತ್ಕರ್ಷೆಗೆ ಕೊಂಡೊಯ್ದ ಕೀರ್ತಿ ಸಿಜಿಕೆ ಅವರದ್ದು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ನುಡಿದರು.

ಇಲ್ಲಿಯ ಹೊಸಮಠದ ಆವರಣದಲ್ಲಿ ಜರುಗಿದ 11ನೇ ವರ್ಷದ ಸಿಜಿಕೆ ಬೀದಿನಾಟಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲೆಯ ಐವರು ರಂಗಭೂಮಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಕೊಳಗೇರಿಯ ಕೊನೆಯ ಮನುಷ್ಯನನ್ನು ಮುಟ್ಟುವುದೇ ಸಿಜಿಕೆ ಅವರ ಬೀದಿನಾಟಕ ಪ್ರಯೋಗದ ಕನಸಾಗಿತ್ತು. ಕನ್ನಡ ನಾಟಕ ಪರಂಪರೆಯ ಪ್ರಜ್ಞೆಯನ್ನು, ವಿಶ್ವಪ್ರಜ್ಞೆಯಾಗಿಸಿ ಜನ ಸಾಮಾನ್ಯರ ಹೃದಯ ಗೆದ್ದವರು ಸಿಜಿಕೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಜಿಲ್ಲೆಯ ರಂಗಭೂಮಿ ಸಂಘಟಿತವಾಗಲು ಸಿಜಿಕೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರಣವಾಗಿದೆ. ಜಿಲ್ಲೆಯಲ್ಲಿಯೂ ಬೀದಿ ರಂಗಭೂಮಿ ಜೀವಂತವಾಗಿರಲು ಇಲ್ಲಿಯ ಜಿಲ್ಲಾ ಬಳಗ ಕಾರಣ ಎಂದರು.

ಕರ್ನಾಟಕ ಬೀದಿ ನಾಟಕ ಅಕಾಡೆಮಿ, ಬೆಂಗಳೂರು, ಜಿಲ್ಲಾ ಕಲಾಬಳಗ, ಹೊಸಮಠ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಈ ಬಾರಿ ರಾಮಕೃಷ್ಣ ಸುಗಂಧಿ (ಪ್ರಸಾದನ ಮತ್ತು ರಂಗ ಸಜ್ಜಿಕೆ), ಶಶಿಕಲಾ ಅಕ್ಕಿ (ರಂಗಭೂಮಿ ಮತ್ತು ಕಿರುತೆರೆ), ಶಂಕರ ತುಮ್ಮಣ್ಣವರ (ನಟ, ನಾಟಕಕಾರ), ಶೇಷಗಿರಿ ಕಲಾ ತಂಡದ ಹರೀಶ ಗುರಪ್ಪನವರ (ನಟ ರಂಗತಂತ್ರಜ್ಞ) ಹಾಗೂ ವಿನಾಯಕ ಗಂಗಾಧರ ಚಕ್ರಸಾಲಿ (ಬಾಲನಟ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯ ಅಲ್ಪ ಸಂಖ್ಯಾತರ ಆಯೋಗಕ್ಕೆ ನಾಮಕರಣಗೊಂಡ ಪರಿಮಳಾ ಜೈನ ಅವರನ್ನು ಸನ್ಮಾನಿಸಲಾಯಿತು. ಆರ್.ವಿ. ಚಿನ್ನಿಕಟ್ಟಿ, ಎಂ,ಎಸ್. ಮಾಳವಾಡ, ಎ.ಬಿ. ಗುಡ್ಡಳ್ಳಿ ಮಾತನಾಡಿದರು. ಆರ್.ಸಿ. ನಂದೀಹಳ್ಳಿ ಸಂಗಡಿಗರು ರಂಗಗೀತೆಗಳನ್ನು ಹಾಡಿದರು. ಜಿಲ್ಲಾ ಕಲಾ ಬಳಗದ ಮುಖ್ಯಸ್ಥ ಕೆ.ಆರ್. ಹಿರೇಮಠ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಘವೇಂದ್ರ ಕಬಾಡಿ ಸ್ವಾಗತಿಸಿದರು. ಮಹಾಂತೇಶ ಮರಿಗೂಳಪ್ಪನವರ ಕಾರ್ಯಕ್ರಮ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು