ಸಂತೋಷಕುಮಾರ್ ಮೆಹೆಂದಳೆ, ಡಾ. ಶಾಂತಲಾರಿಗೆ ‘ಚಡಗ ಕಾದಂಬರಿ ಪ್ರಶಸ್ತಿ’

KannadaprabhaNewsNetwork |  
Published : Oct 31, 2024, 12:54 AM IST
30ಚಡಗ | Kannada Prabha

ಸಾರಾಂಶ

ವೈಜಯಂತಿಪುರ ಮತ್ತು ದೇವರಾಗಲು ಮೂರೇ ಕಣ್ಣು ಕಾದಂಬರಿಗಳು ಚಡಗ ಕಾದಂಬರಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಡಿಸೆಂಬರ್‌ನಲ್ಲಿ ಆಯೋಜಿಸುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಕೋಟೇಶ್ವರದ ಎನ್.ಆರ್.ಎ.ಎಂ.ಎಚ್ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕನ್ನಡದ ಹೆಸರಾಂತ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ನೀಡಲಾಗುವ ‘ಚಡಗ ಕಾದಂಬರಿ ಪ್ರಶಸ್ತಿ’ಯ 2024ರ ಸಾಲಿನ ಪುರಸ್ಕಾರಕ್ಕೆ ಸಂತೋಷಕುಮಾರ ಮೆಹೆಂದಳೆಯವರ ‘ವೈಜಯಂತಿಪುರ’ ಮತ್ತು ಡಾ. ಶಾಂತಲರವರ ‘ದೇವರಾಗಲು ಮೂರೇ ಗೇಣು’ ಕಾದಂಬರಿಗಳು ಆಯ್ಕೆಯಾಗಿವೆ.

‘ವೈಜಯಂತಿಪುರ’ ಕಾದಂಬರಿಯು ಕದಂಬ ಅರಸು ಮನೆತನದ ಸ್ಥಾಪಕ ಮಯೂರ ಶರ್ಮನ ಜೀವಿತಕ್ಕೆ ಸಂಬಂಧಿಸಿದ ವಿವಿಧ ಆಕರಗಳನ್ನು ಕಲೆಹಾಕಿ ರಚಿಸಿದ ವಿಶಿಷ್ಟ ಐತಿಹಾಸಿಕ ಕಾದಂಬರಿಯಾಗಿದೆ.

‘ದೇವರಾಗಲು ಮೂರೇ ಗೇಣು’ ಕಾದಂಬರಿಯು ವೈದ್ಯಕೀಯ ರಂಗದಲ್ಲಿ ಐವಿಎಫ್ ತಂತ್ರಜ್ಞಾನವು ಆಗುಮಾಡಿಕೊಟ್ಟ ಸಾಧ್ಯತೆ ಮತ್ತು ಸಮಸ್ಯೆಗಳನ್ನು ಚಿತ್ರಿಸುವ ಮೆಡಿಕೋ-ಸೋಶಿಯಲ್ ಕಾದಂಬರಿಯಾಗಿದೆ.

ಈ ಎರಡೂ ಕಾದಂಬರಿಗಳು ತಮ್ಮ ಪ್ರಕಾರಗಳಲ್ಲಿ ಗಮನಾರ್ಹವಾದ ಪ್ರಯತ್ನಗಳೆಂದು ಮೂವರು ತೀರ್ಪುಗಾರರ ಸಮಿತಿಯು ನಿರ್ಣಯಿಸಿರುವುದರಿಂದ ಈ ಎರಡೂ ಕಾದಂಬರಿಗಳನ್ನು ಈ ವರ್ಷದ ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸ್ಪರ್ಧೆಯ ಸಂಚಾಲಕರಾದ ಪ್ರೊ. ಉಪೇಂದ್ರ ಸೋಮಯಾಜಿ ಅವರು ತಿಳಿಸಿರುತ್ತಾರೆ.

ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು 10 ಸಾವಿರ ರು. ನಗದು ಬಹುಮಾನಗಳನ್ನು ಒಳಗೊಂಡ ಈ ಪ್ರಶಸ್ತಿಯನ್ನು ಕಾದಂಬರಿಕಾರರಾದ ಸಂತೋಷಕುಮಾರ ಮೆಹೆಂದಳೆ ಮತ್ತು ಡಾ. ಶಾಂತಲರವರಿಗೆ ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲಾಗುವ ಸಾರ್ವಜನಿಕ ಸಮಾರಂಭದಲ್ಲಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಎನ್. ಭಾಸ್ಕರಚಾರ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ