ಕನ್ನಡಪ್ರಭ ವಾರ್ತೆ ಮಂಡ್ಯ
ಅಭಿವೃದ್ಧಿ ವಿಚಾರವಾಗಿ ತಮ್ಮಣ್ಣನವರು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ನಾವು ಈಗಲೇ ಸಿದ್ಧ. ಎಲ್ಲಿಗೆ ಬೇಕಾದರೂ ಕರೆಯಲಿ. ನಾವು ಬರುತ್ತೇವೆ. ಸ್ಥಳ ಮತ್ತು ದಿನಾಂಕವನ್ನು ಅವರೇ ನಿಗದಿಪಡಿಸಲಿ. ಅಭಿವೃದ್ಧಿ ಯೋಜನೆಗಳ ಕುರಿತಂತೆ ದಾಖಲೆ ಸಮೇತವಾಗಿ ಬಂದು ಚರ್ಚಿಸುತ್ತೇವೆ. ಆರೋಗ್ಯಕರ ಚರ್ಚೆಗೆ ನಾವೆಂದಿಗೂ ಸಿದ್ಧ ಎಂದು ಸುದ್ದಿಗೋಷ್ಠಿಯಲ್ಲಿ ಮುಕ್ತವಾಗಿ ಸವಾಲನ್ನು ಸ್ವೀಕರಿಸಿದರು.
ಶಾಸಕ ಕೆ.ಎಂ.ಉದಯ್ ಅವರು ಎರಡು ವರ್ಷದಲ್ಲಿ ೧೨೦೦ ಕೋಟಿ ರು. ಅನುದಾನವನ್ನು ಕ್ಷೇತ್ರಕ್ಕೆ ತಂದಿದ್ದಾರೆ. ತಮ್ಮಣ್ಣನವರ ಕಾಲದಲ್ಲಿ ಅಪೂರ್ಣಗೊಂಡಿದ್ದ ಕಾಮಗಾರಿಗಳನ್ನು ಇವರು ಪೂರ್ಣಗೊಳಿಸುತ್ತಿದ್ದಾರೆ. ಡಿ.ಸಿ.ತಮ್ಮಣ್ಣನವರ ಅವಧಿಯಲ್ಲಿ ಆರಂಭಗೊಂಡ ಕೆ.ಎಂ.ದೊಡ್ಡಿಯಿಂದ ಮದ್ದೂರು ಪಟ್ಟಣದ ನೀರು ವಿತರಣಾ ಜಾಲದ ನವೀಕರಣ ಮತ್ತು ಮನೆಗಳಿಗೆ ಸೇವಾ ಸಂಪರ್ಕವನ್ನು ಒದಗಿಸುವ ಯೋಜನೆ ಅರ್ಧಕ್ಕೇ ಸ್ಥಗಿತಗೊಂಡಿದೆ. ಇದರಲ್ಲಿ ೫.೩೦ ಕೋಟಿ ರು. ಹಣವನ್ನೂ ಯೋಜನೆ ಮುಗಿಯುವ ಮುನ್ನವೇ ಬಿಲ್ ಪಾವತಿಸಿದ್ದು ಇನ್ನೂ ೫.೫೦ ಕೋಟಿ ರು. ಹಣ ಬಿಡುಗಡೆಯಾಗಬೇಕಿದೆ. ಪೈಪ್‌ಲೈನ್‌ಗಳು ಕಳಪೆಯಿಂದ ಕೂಡಿದ್ದು, ಉಪಯೋಗಕ್ಕೆ ಯೋಗ್ಯವಿಲ್ಲವೆಂದು ವರದಿಗಳು ತಿಳಿಸಿವೆ. ತಾವು ಮಾಡಿರುವ ಕಳಪೆ ಕಾಮಗಾರಿಯನ್ನು ಶಾಸಕರ ತಲೆಗೆ ಕಟ್ಟಲು ಪ್ರಯತ್ನಿಸಿದ್ದಾರೆ ಎಂದು ದೂಷಿಸಿದರು.ಸೂಳೆಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ನೀರು ಶೇಖರಣೆ ಹೆಚ್ಚಿಸಲು ಹೂಳೆತ್ತಿಸಲಾಗುತ್ತಿದೆ. ಈ ಮಣ್ಣನ್ನು ರೈತರಿಂದ ಹಣ ಪಡೆದು ಮಾರಾಟ ಮಾಡುತ್ತಿರುವುದಾಗಿ ಸುಳ್ಳು ಹೇಳಿದ್ದಾರೆ. ಅವರೇ ಸ್ಥಳಕ್ಕೆ ಬರಲಿ. ರೈತರನ್ನು ವಿಚಾರಿಸಲಿ. ಮಣ್ಣಿಗೆ ರೈತರಿಂದ ಹಣ ವಸೂಲಿ ಮಾಡುವ ದುರ್ಬುದ್ಧಿ ನಮಗಿಲ್ಲ. ಮಣ್ಣು ಅವರಿಗೆ ಬೇಕಾದಲ್ಲಿ ಟ್ರಾಕ್ಟರೋ, ಟಿಪ್ಪರೋ ತರಲಿ. ನಾವೇ ಪುಕ್ಕಟೆಯಾಗಿ ತುಂಬಿಸಿ ಕಳುಹಿಸುತ್ತೇವೆ ಎಂದು ವ್ಯಂಗ್ಯವಾಗಿ ಹೇಳಿದರು.
ಡಿ.ಸಿ.ತಮ್ಮಣ್ಣನವರ ಅವಧಿಯಲ್ಲಿ ನಡೆದಿರುವ ಅಕ್ರಮ ಕಾಮಗಾರಿಗಳ ಕುರಿತಂತೆ ತನಿಖೆ ನಡೆಸುವಂತೆ ಶಾಸಕರ ಮೂಲಕ ಸರ್ಕಾರಕ್ಕೆ ಪತ್ರ ಬರೆಸಲು ಸಿದ್ಧರಿದ್ದೇವೆ. ಆದರೆ, ಅಂತಹ ದ್ವೇಷದ ರಾಜಕಾರಣವನ್ನು ಮಾಡುವುದಿಲ್ಲ. ನಾವು ಅವರಂತೆ ಸುಳ್ಳು ಹೇಳುವುದಿಲ್ಲ. ದಾಖಲೆಗಳನ್ನು ಜನರ ಮುಂದಿಡುತ್ತೇವೆ. ಶೇ.೪೦ರಷ್ಟು ಕಮಿಷನ್, ಶೇ.೧೦ರಷ್ಟು ಕಮಿಷನ್ ಪಡೆದಿರುವ ಬಗ್ಗೆ ಹೇಳಿದ್ದಾರಲ್ಲ ಅದನ್ನು ಮೊದಲು ಸಾಬೀತುಪಡಿಸಲಿ ಎಂದು ನೇರವಾಗಿ ಹೇಳಿದರು.
ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಬಿ.ಬಸವರಾಜು, ಎಂ.ಎಸ್.ರಾಜೀವ್, ಎಂ.ಎಸ್.ಚಿದಂಬರ್, ಅಜ್ಜಹಳ್ಳಿ ರಾಮಕೃಷ್ಣ,, ಮೋಹನ್‌ಕುಮಾರ್, ಹೊಂಬಯ್ಯ ಇದ್ದರು.