ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಜಮೀನಿಗೆ ರಸ್ತೆ ಬಿಡಿಸಬೇಕು, ಸಾಗುವಳಿ ನೀಡಬೇಕು, ನಕಲು ಸಾಗುವಳಿ ರದ್ದು ಮಾಡಬೇಕು, ವಾಸದ ಮನೆಗೆ ಹಕ್ಕು ಪತ್ರ ನೀಡಬೇಕು, ಸಾಗುವಳಿ ಪಡೆಯಲು ಕಿಮತ್ತು ಕಟ್ಟಿದರು ಹಕ್ಕುಪತ್ರ ನೀಡಿಲ್ಲ, ಕುಡಿಯಲು ನೀರು ಕೊಡಬೇಕು ಎಂದು ಮಂಗಳವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.ಮೊದಲಿಗೆ ನಾಗನಹಳ್ಳಿ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ ರೈತರು ಜಮೀನಿಗೆ ತೆರಳುತ್ತಿದ್ದ ರಾಜ ಕಾಲುವೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಜಮೀನಿಗೆ ತೆರಳಲು ತೊಂದರೆ ಆಗಿದೆ ಈ ಬಗ್ಗೆ ಹಲವಾರು ಬಾರಿ ತಹಶಿಲ್ದಾರ್ ಅವರಿಗೆ ದೂರು ನೀಡಿದ್ದರು ಕೂಡ ಯಾವುದೇ ಕ್ರಮ ಆಗಿಲ್ಲ, ಹಾಗಾಗಿ ನಮಗೆ ರಸ್ತೆ ಸರ್ವೆ ಮಾಡಿ ಬಿಡಿಸಿಕೊಡಬೇಕು ಎಂದು ಮನವಿ ಮಾಡಿದರು.ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ವೆಯರ್ ಶಂಭುಲಿಂಗಸ್ವಾಮಿ ಮಾತನಾಡಿ, ರಾಜ ಕಾಲುವೆ ಒಂದು ಮುಕ್ಕಾಲು ಕಿ.ಮೀ. ದೂರ ಇದ್ದು, ಇದನ್ನು ಅಳತೆ ಮಾಡಲು ಹೆಚ್ಚು ಸರ್ವೆಯರು ಬೇಕಾಗಿದ್ದು, ಹಾಗಾಗಿ ಅಳತೆ ಮಾಡಲು ಸಾಧ್ಯ ಆಗಿಲ್ಲ ಎಂದು ಸಭೆ ಗಮನಕ್ಕೆ ತಂದರು. ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು ನಾಲ್ಕು ವರ್ಷದಿಂದ ಸಾರ್ವಜನಿಕರು ದೂರು ನೀಡುತ್ತಿದ್ದರು ಕೂಡ ಸಮಸ್ಯೆ ಬಗೆಹರಿದಿಲ್ಲ ಎಂದರೆ ಏನು ಎಂದು ತಾಲೂಕು ಅಧಿಕಾರಿಗಳನ್ನು ಪ್ರಶ್ನಿಸಿದರು.ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ವಿಎ ಮತ್ತು ಆರ್ಐ ಗಳ ವರದಿ ಆಧಾರದ ಮೇಲೆ ಸಾಗುವಳಿ ಮಂಜೂರು ಮಾಡಿದ್ದೇವೆ, ನೀವು ಮಂಜೂರಾತಿ ಮಾಡಬಹುದು ಎಂದು ಹೇಳಿದ ನಂತರ ಸಾಗುವಳಿ ವಿತರಣೆ ಮಾಡಲಾಗಿದೆ. ಆದರೆ ಖಾತೆ ಮಾಡುವ ಬದಲು ನೀವು ಅರಣ್ಯ ಇಲಾಖೆಗೆ ಅನುಮತಿಗೆ ಯಾಕೆ ಕಳಿಸಬೇಕು. ನಾವು ನೀಡಿರುವ ಸಾಗುವಳಿಗಳನ್ನು ಖಾತೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಸಾಗುವಳಿ ಮಂಜೂರು ಮಾಡಿರುವ ಜಮೀನು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಎಂಬುದನ್ನು ವರದಿ ನೀಡಬೇಕು. ಇದನ್ನು ತಹಸೀಲ್ದಾರ್ ಸೂಕ್ತ ಸಮಯದಲ್ಲಿ ಖಾತೆ ಮಾಡಬೇಕು ಎಂದು ತಿಳಿಸಿದರು.ಆನಗಟ್ಟಿ ಗ್ರಾಮಕ್ಕೆ ಎರಡು ವರ್ಷದ ಹಿಂದೆ ಸ್ಮಶಾನಕ್ಕೆ ಭೂಮಿ ಮಂಜೂರು ಆಗಿದ್ದು, ಜಾಗ ಗುರುತು ಮಾಡಿಲ್ಲ ಎಂದು ಗ್ರಾಪಂ ಸದಸ್ಯ ದೇವಯ್ಯ ತಿಳಿಸಿದರು.ಸರ್ಕಾರದ ನಿಯಮದ ಪ್ರಕಾರ ಪ್ರತಿ ಗ್ರಾಮದಲ್ಲಿ ಸ್ಮಶಾನ ಇರಬೇಕು ಎಂಬ ಆದೇಶ ಇದ್ದು ಅದರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಆದಿವಾಸಿ ಮುಖಂಡ ವಿಜಯಕುಮಾರ್ ಮಾತನಾಡಿ, ಮುಜಫರ್ ಅಸಾಧಿ ವರದಿ ಜಾರಿ ಆಗದೆ ಇರುವುದರಿಂದ ಆದಿವಾಸಿಗಳು ಹಲವಾರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ ಎಂದು ದೂರಿದರು.ತಹಸೀಲ್ದಾರ್ ಶ್ರೀನಿವಾಸ್, ಉಪ ಸಂರಕ್ಷಣಾಧಿಕಾರಿ ಸೀಮಾ, ಉಪ ನಿರ್ದೇಶಕರು ಶಿಕ್ಷಣ ಇಲಾಖೆ ಜವರೇಗೌಡ, ಎಸಿಎಫ್ ಗಳಾದ ಬಸವರಾಜ್, ಅಭಿಷೇಕ್, ಜಿಲ್ಲಾ ಭೂಮಾಪನ ಅಧಿಕಾರಿ ರಮ್ಯ, ಹೆಚ್ಚುವರಿ ಎಸ್ಪಿ ನಾಗೇಶ್, ಜಿಲ್ಲಾ ಕಾರ್ಮಿಕ ಅಧಿಕಾರಿ ಜೀವನ್ ಕುಮಾರ್, ಜಿಲ್ಲಾ ಆರೋಗ್ಯ ಅಧಿಕಾರಿ ಕುಮಾರಸ್ವಾಮಿ, ಇಓ ಧರಣೇಶ್ ಇದ್ದರು.