-ಶಾಸಕ ಹೆಚ್.ಡಿ. ತಮ್ಮಯ್ಯ ಮಾಹಿತಿ । 26 ರಿಂದ 28 ರವರೆಗೆ ನೇತಾಜಿ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಆಯೋಜನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಸಾರ್ವಜನಿಕರ ಸಹಭಾಗಿತ್ವದೊಂದಿಗೆ ರಾಷ್ಟ್ರೀಯ ಹಬ್ಬಗಳ ಆಚರಣೆಯಾದರೆ ಅದಕ್ಕೆ ಗೌರವ ತಂದಂತಾಗುತ್ತದೆ. ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಗಣರಾಜ್ಯೋತ್ಸವದ ಅಂಗವಾಗಿ ಚೈತ್ರೋತ್ಸವ, ಫಲಪುಷ್ಪ ಪ್ರದರ್ಶನವನ್ನು ಜ.26 ರಿಂದ 28 ರವರೆಗೆ ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದರು.
ಮೈಸೂರು ದಸರಾ ಉತ್ಸವದಲ್ಲಿ ಪ್ರಶಸ್ತಿ ಪಡೆದ ಮುಖ್ಯ ಆಕರ್ಷಣೆಯಾಗಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವಿಸ್ಮಯ ಪ್ರಪಂಚ ಪುಷ್ಪ ಕಲಾಕೃತಿಗಳ ಪ್ರದರ್ಶನ, ಹೂಗಳಿಂದ ಅಲಂಕೃತಗೊಂಡ ತೇಜಸ್ವಿ ಪ್ರತಿಷ್ಠಾನ, ಸ್ಕೂಟರ್, ಇತರೆ ಕಲಾಕೃತಿಗಳ ನಿರ್ಮಾಣ, ಸಿರಿ ಧಾನ್ಯಗಳಿಂದ ಅಲಂಕೃತಗೊಂಡ ತೇಜಸ್ವಿ, ಕುವೆಂಪು ಕಲಾಕೃತಿಗಳು ಜನರ ಅಚ್ಚರಿಗೆ ಕಾರಣವಾಗಲಿದೆ ಎಂದರು.
ತೆಂಗಿನ ಗರಿಗಳಿಂದ ಅಲಂಕೃತಗೊಂಡ ಜಾನೂರು ಆರ್ಟ್, ಬಾಳೇಕಂದು ಮತ್ತು ಕೃಷಿ ತ್ಯಾಜ್ಯ ಬಳಸಿ ಥಾಯ್ ಆರ್ಟ್ ನಿರ್ಮಾಣ, ಜಿಲ್ಲೆಯ ಎಲ್ಲಾ ರೈತರು ಬೆಳೆದಿರುವ ಬಾಳೆ, ಹಲಸು, ಸುವರ್ಣಗೆಡ್ಡೆ, ಗೆಣಸು, ಕಲರ್ ಕ್ಯಾಪ್ಸಿಕಂ, ಕುಂಬಳಕಾಯಿ ವಿವಿಧ ತರಕಾರಿ, ಅಡಿಕೆ, ತಾಳೆ ಮತ್ತಿತರ ಸಾಂಬಾರ ಪದಾರ್ಥಗಳ ಪ್ರದರ್ಶನವಿರುತ್ತದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯಿಂದ ಸಿರಿಧಾನ್ಯ ಬಳಸಿ ಅಂಬೇಡ್ಕರ್ ಪುತ್ಥಳಿ, ತರಕಾರಿ ಬಳಸಿ ಸಂಸತ್ ಭವನ ಕಲಾಕೃತಿ, ಆರೋಗ್ಯ ಇಲಾಖೆಯಿಂದ ತಾಯಿ ಮಗು ಪರಿಕಲ್ಪನೆಯ ಸಿರಿಧಾನ್ಯ ಕಲಾಕೃತಿ, ಕೃಷಿ ಇಲಾಖೆಯಿಂದ ಸಿರಿಧಾನ್ಯ ರಾಶಿ, ರಂಗೋಲಿ ಪ್ರದರ್ಶನ, ಮೀನುಗಾರಿಕೆ ಇಲಾಖೆಯಿಂದ ಅಕ್ವೇರಿಯಂ ಅಲಂಕಾರಿ ಮೀನು ಪ್ರದರ್ಶನ, ಮಾರಾಟ ಏರ್ಪಡಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್, ಜಿ.ಪಂ ಸಿಇಓ ಹೆಚ್.ಎಸ್. ಕೀರ್ತನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮ ಉಪಸ್ಥಿತರಿದ್ದರು.-----
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿದರು.