ಈಸೂರು ಸ್ಮಾರಕ ಬಳಿ ಚಲೇಜಾವ್ ಚಳವಳಿ ನೆನಪು

KannadaprabhaNewsNetwork | Published : Aug 10, 2024 1:31 AM

ಸಾರಾಂಶ

ಶಿಕಾರಿಪುರ ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಶುಕ್ರವಾರ ಚಲೇಜಾವ್ ಚಳವಳಿ ಒಂದು ನೆನಪು ಕಾರ್ಯಕ್ರಮ ನಡೆಯಿತು.

- ಧ್ವಜಾರೋಹಣ ನೆರವೇರಿಸಿ, ಹುತಾತ್ಮರ ಆದರ್ಶ ಅಳವಡಿಸಿಕೊಳ್ಳಲು ಕರೆ ನೀಡಿದ ನ್ಯಾಯಾಧೀಶ ಯಶವಂತಕುಮಾರ್‌

ಕನ್ನಡಪ್ರಭ ವಾರ್ತೆ ಶಿಕಾರಿಪುರ

ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಹಲವರು ಹುತಾತ್ಮರಾಗಿದ್ದು, ದೇಶಕ್ಕಾಗಿ ಬದುಕಿದ ಅವರ ಚಿಂತನೆಯ ಕಿಂಚಿತ್ತು ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಲ್ಲಿ ನಮ್ಮ ದೇಶ ಜಗತ್ತಿನಲ್ಲಿ ಮುಂಚೂಣಿ ರಾಷ್ಟ್ರವಾಗಲಿದೆ ಎಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಯಶವಂತ ಕುಮಾರ್ ಆರ್. ತಿಳಿಸಿದರು.

ಶುಕ್ರವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿನ ಈಸೂರು ಹುತಾತ್ಮ ಸ್ವಾತಂತ್ರ ಹೋರಾಟಗಾರರ ಸ್ಮಾರಕದ ಬಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ‘ಚಲೇಜಾವ್ ಚಳವಳಿ ಒಂದು ನೆನಪು’ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಲ್ಲಿ ದೇಶ ಭಕ್ತಿ ದೇಶಾಭಿಮಾನ ಅಗತ್ಯವಾಗಿದ್ದು, ಸಹೋದರತ್ವದ ವಿಶಾಲ ಮನೋಭಾವನೆಯಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ.ಈ ದಿಸೆಯಲ್ಲಿ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಹುತಾತ್ಮರಾದ ಸ್ವಾತಂತ್ರ ಹೋರಾಟಗಾರರ ಚಲೇಜಾವ್ ಚಳುವಳಿ ನೆನಪು ಕಾರ್ಯಕ್ರಮದಲ್ಲಿ ದೇಶದಲ್ಲಿನ ಪ್ರತಿಯೊಬ್ಬರೂ ಸಹೋದರರು ಎಂಬ ಪರಿಕಲ್ಪನೆಯ ಸಂಕಲ್ಪವನ್ನು ಕೈಗೊಳ್ಳಬೇಕು. ಇದರಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವೇ ಹೊರತು ಹೊಸ ಹೊಸ ಕಾನೂನು ರೂಪಿಸಿ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

160 ಕೋಟಿ ಜನಸಂಖ್ಯೆಯ ಭಾರತದಲ್ಲಿ ಮಾನವ ಸಂಪನ್ಮೂಲ ಬಹು ದೊಡ್ಡ ಶಕ್ತಿಯಾಗಿದ್ದು, ದುರಾಲೋಚನೆ ಬಿಟ್ಟು ದೇಶಕ್ಕಾಗಿ ಬದುಕುವುದನ್ನು ರೂಢಿಸಿಕೊಳ್ಳುವಂತೆ ತಿಳಿಸಿದ ಅವರು, ಪರ್ತಕರ್ತರು ದೇಶ ಒಡೆಯುವ ರಾಜಕಾರಣಿಗಳ ಹೇಳಿಕೆ ಬಗ್ಗೆ ಹೆಚ್ಚಿನ ಮಹತ್ವ ನೀಡದೆ ದೇಶ ಕಟ್ಟುವ ಉತ್ತಮ ಕಾರ್ಯಗಳ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಪರ್ತಕರ್ತರ ಸಂಘದ ಉಪಾಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ ಮಾತನಾಡಿ, ಸ್ವಾತಂತ್ರ ಹೋರಾಟದ ಇತಿಹಾಸದ ಪುಟದಲ್ಲಿ ಈಸೂರು ಹೋರಾಟಗಾರರ ಬಲಿದಾನ ಶಾಶ್ವತವಾಗಿ ದಾಖಲಾಗಿದೆ ಸ್ವಾತಂತ್ರ ಪೂರ್ವದಲ್ಲಿಯೇ ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡ ದೇಶದ ಏಕೈಕ ಗ್ರಾಮ ಎಂಬ ಹೆಗ್ಗಳಿಕೆ ಈಸೂರು ಹೊಂದಿದೆ ಎಂದ ಅವರು, ಬ್ರಿಟೀಷ್ ಆಡಳಿತ ವ್ಯವಸ್ಥೆ ವಿರುದ್ಧ ನಡೆದ ಹೋರಾಟ, ಲಾಠಿ ಚಾರ್ಜ್‌ನಲ್ಲಿ ಈಸೂರು ಗ್ರಾಮಸ್ಥರು ಅಂದಿನ ತಹಸೀಲ್ದಾರ್ ಹಾಗೂ ಪಿಎಸ್ಸೈ ರನ್ನು ಹತ್ಯೆಗೈದ ಘಟನೆಯಲ್ಲಿ ಬಂಧಿತರಾದ 22-23 ಗ್ರಾಮಸ್ಥರಲ್ಲಿ, ಕೆಲವರು ಮೈಸೂರು ಮಹಾರಾಜರ ಕ್ಷಮಾದಾನದಿಂದ ಬಿಡುಗಡೆಯಾಗಿ, ಐದು ಗ್ರಾಮಸ್ಥರು ಮರಣದಂಡನೆ ಮೂಲಕ ಹುತಾತ್ಮರಾಗಿದ್ದಾರೆ ಎಂದು ಇತಿಹಾಸ ನೆನೆದರು.

ಬ್ರಿಟೀಷರ 1 ಕಾಸು ದಂಡ ಪಾವತಿಸದೆ ಪರ್ಯಾಯವಾಗಿ ಈಸೂರು ಸಾಹುಕಾರ್ ವೀರಪ್ಪ ನಿರ್ಮಿಸಿದ ಬೆಲೆ ಕಟ್ಟಲಾಗದ ಭವನ ಹಲವು ವರ್ಷ ಟೌನ್ ಹಾಲ್,ಪುರಸಭೆ,ಗ್ರಂಥಾಲಯವಾಗಿ ಇದೀಗ ಹಾಳು ಬಿದ್ದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನ್ಯಾಯಾಧೀಶ ಯಶವಂತ ಕುಮಾರ್, ದೈಹಿಕ ಶಿಕ್ಷಕ ಕಾಂತರಾಜ್, ಸ್ವಚ್ಚತಾ ಸಿಬ್ಬಂದಿ ರತ್ನಮ್ಮರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಲ್ ರಾಜು ವಹಿಸಿ ಮಾತನಾಡಿದರು.ಸಂಘದ ಸಂಸ್ಥಾಪಕ ಅಧ್ಯಕ್ಷ ವೇಣುಗೋಪಾಲ್,ಉಪಾದ್ಯಕ್ಷ ಕೋಟೇಶ್ವರ,ನವೀನ್ ಕುಮಾರ್,ಎಸ್.ಬಿ ಅರುಣ್ ಕುಮಾರ್ ವಕೀಲರ ಸಂಘದ ಅಧ್ಯಕ್ಷ ಸಂತೋಷ ಕುಮಾರ್, ಪಿಎಸ್ಸೈ ಶರತ್ ಕುಮಾರ್, ಕೋಮಲಾಚಾರ್ ನ್ಯಾಯವಾದಿ ಕೋಡ್ಯಪ್ಪ, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಪಾಪಯ್ಯ, ಸುದರ್ಶನ್, ಮಹದೇವಾಚಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಸಿಸಿ ಕೆಡೆಟ್ ಮೈನಾ ತಂಡ, ಪುರಸಭೆ ಹಿರಿಯ ಆರೋಗ್ಯಾಧಿಕಾರಿ ರಾಜಕುಮಾರ್, ರಿಯಾಜ್,ಪ್ರೆಸ್ ಟ್ರಸ್ಟ್ ಅಧ್ಯಕ್ಷ ವೈಭವ ಬಸವರಾಜ್, ರಘು, ಚಂದ್ರು ಮಠದ್, ರಾಘವೇಂದ್ರ, ಪ್ರಕಾಶ್, ರಾಜಾರಾವ್ ಜಾಧವ್, ಡಾ.ಮಳಗಿ, ಕಾಳಿಂಗರಾವ್, ದೀಪು ದೀಕ್ಷಿತ್ ಮತ್ತಿತರಿದ್ದರು.

Share this article