ಹಂಪಿ: ಹಂಪಿ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ ಪಾಲ್ಗೊಂಡು ಮೆರುಗು ನೀಡಿದರು.
ರಾಜ್ಯದ ಜನತೆ ನಮ್ಮಂತಹ ಚಿಕ್ಕ, ಪುಟ್ಟ ನಟರನ್ನು ಬೆಳೆಸಬೇಕು. ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಬೇಕು. ಕಲಾವಿದರನ್ನು ಬೆಳೆಸುವ ಕಾರ್ಯ ನಾಡಿನ ಜನತೆ ಮಾಡಲಿ ಎಂದರು.
ನಾನು ಪಕ್ಕಾ ಲೆಕ್ಕಾಚಾರದ ಜನ. ಏಕ್ ಮಾರ್ ದೋ ತುಕ್ಡಾ, ಜಮೀರ್ ಭಾಯ್ ಕರೆದಿದ್ದಾರೆ ಎಂದು ನಾನು ಹಂಪಿ ಉತ್ಸವಕ್ಕೆ ಬಂದಿರುವೆ. ಅವರು ನಿನ್ನೆ ಕರೆದಿದ್ರೂ ಇವತ್ತು ಹೊರಟು ಬಂದು ಬಿಡುತ್ತಿದ್ದೆ. ಅವರ ಶ್ರೀರಕ್ಷೆ ನಮ್ಮ ಮೇಲಿದೆ. ಅವರು ಯಾವತ್ತೂ ಬಡವರಿಗೆ ಸಹಾಯ ಮಾಡುತ್ತಾರೆ. ಎಲ್ಲೂ ಹೇಳಿಕೊಳ್ಳುವುದಿಲ್ಲ. ಎಷ್ಟೋ ಬಡ ವಿದ್ಯಾರ್ಥಿಗಳಿಗೆ ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ. ಆಪರೇಷನ್‌ಗಳಿಗೆ ಸಹಾಯ ಮಾಡುತ್ತಾರೆ. ನಾನು ಇಂತಹವರಿಗೆ ಸಹಾಯ ಮಾಡಿ ಎಂದರೆ ಸಾಕು, ಅವರು ಸಹಾಯ ಮಾಡುತ್ತಾರೆ. ಅವರ ಪುತ್ರ ಜಾಹೀದ್ ಖಾನ್ ಕೂಡ ಸಹಾಯಹಸ್ತ ಚಾಚುತ್ತಾರೆ ಎಂದರು.ನಾನು ಬಹಳ ಜನರ ಪರ ಪ್ರಚಾರ ಮಾಡಿರುವೆ. ಅವರು ಗೆದ್ರೂ, ಸೋತ್ರೂ ನಮ್ಮತ್ತ ತಿರುಗಿಯೂ ನೋಡಲ್ಲ. ನಾನು ರಾಜಕೀಯಕ್ಕೆ ಬಳಸಲ್ಲ. ಜಮೀರ್ ಭಾಯ್ ಕೂಡ ರಾಜಕೀಯಕ್ಕೆ ಬಳಸಲ್ಲ. ಅವರು ಯಾವತ್ತಿದ್ರೂ ಜನರ ನೆರವಿಗೆ ನಮ್ಮನ್ನು ಪ್ರೇರೆಪಿಸುತ್ತಾರೆ. ಎಂದಿಗೂ ಅವರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಕರೆಯುವುದಿಲ್ಲ. ಸ್ನೇಹವನ್ನೂ ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ವಿಜಯನಗರ ಜಿಲ್ಲೆಯ ಜನತೆಗೆ ಒಳಿತಾಗಲಿ. ಸಿನಿಮಾ ನೋಡಿ, ನಮ್ಮನ್ನು ಬೆಳೆಸಿರಿ ಎಂದರು.
ಡಿ ಬಾಸ್, ಡಿ ಬಾಸ್ ಜೈ ಜೈಕಾರ: ಹಂಪಿ ಉತ್ಸವದ ಎರಡನೇ ದಿನ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ದರ್ಶನ್‌ರನ್ನು ಕಾಣುತ್ತಲೇ ಜನರು ಡಿ ಬಾಸ್, ಡಿಬಾಸ್ ಎಂದು ಜೈ ಜೈಕಾರ ಮೊಳಗಿಸಿದರು. ಮೊಬೈಲ್‌ಗಳ ಟಾರ್ಚ್‌ಗಳನ್ನು ಆನ್ ಮಾಡಿ ಅಭಿಮಾನ ತೋರ್ಪಡಿಸಿದರು.
ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಂ.ಪಿ. ಲತಾ, ಜೆ.ಎನ್. ಗಣೇಶ್, ರಾಘವೇಂದ್ರ ಹಿಟ್ನಾಳ್, ಕೃಷ್ಣ ನಾಯ್ಕ, ಮಾಜಿ ಶಾಸಕ ಭೀಮಾನಾಯ್ಕ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ ಮತ್ತಿತರರಿದ್ದರು.