ಬಸವರಾಜ ಸರೂರ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು ರಾಜ್ಯ ಸರ್ಕಾರ ಇತ್ತೀಚಿಗೆ ಹಾವೇರಿಯಲ್ಲಿ ನಡೆಸಿದ ಭೂ ಗ್ಯಾರಂಟಿ ಸಮಾವೇಶದ ನಂತರ ಸರ್ಕಾರದ ಜಾಗಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಕಂಡ ಕಂಡ ಜಾಗದಲ್ಲಿ ಟೆಂಟ್ ಹಾಕಿಕೊಂಡು ಅಕ್ರಮವಾಗಿ ಅತಿಕ್ರಮಣ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಒಟ್ಟು 27.5 ಎಕರೆ ಜಾಗೆ ಗೋಮಾಳಕ್ಕೆ ಸೇರಿದ್ದು ಅದರಲ್ಲಿ 5 ಎಕರೆಯನ್ನು ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರಕ್ಕೆ ಹಾಗೂ 1 ಎಕರೆಯನ್ನು ಶಿವಾಜಿ ನಗರ ಸ್ಮಶಾನಕ್ಕೆ ನೀಡಲಾಗಿದೆ. ಇದೀಗ 19.11 ಎಕರೆ ಗೋಮಾಳ ಜಾಗೆ ಖಾಲಿ ಇದೆ. ವಸತಿ ಇಲ್ಲದವರಿಗೆ ಸರ್ಕಾರ ಜಾಗೆ ಮಂಜೂರು ಮಾಡಲಿದೆ ಎಂಬ ಪುಕಾರು ನಂಬಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಆರೇಮಲ್ಲಾಪುರ ಗ್ರಾಮದ ಜನರು ಹೆಸ್ಕಾಂ ವಿದ್ಯುತ್ ವಿತರಣಾ ಕೇಂದ್ರದ ಹತ್ತಿರ ಇರುವ ಸರ್ಕಾರಿ ಗೋಮಾಳದಲ್ಲಿ ಜೆಸಿಬಿ ತಂದು ಅತೀಕ್ರಮಣ ಮಾಡಿಕೊಂಡು ಕಂಬಗಳನ್ನು ನೆಟ್ಟಿದ್ದಾರೆ. ಅಕ್ಕಪಕ್ಕದ ಊರಿನ ಜನರು ಸಹ ಅಲ್ಲಿಗೆ ಬಂದು ಜಾಗವನ್ನ ಅತೀಕ್ರಮಣ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ತೆರವು ಕಾರ್ಯಾಚರಣೆ: ಗ್ರಾಮಸ್ಥರು ಅತಿಕ್ರಮಣ ಮಾಡುತ್ತಿರುವ ಮಾಹಿತಿ ದೊರೆಯುತ್ತಿದ್ದಂತೆ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದನ್ನು ತೆರವುಗೊಳಿಸುತ್ತಿದ್ದಾರೆ. 2018ಕ್ಕಿಂತ ಮೊದಲು ಸರ್ಕಾರಿ ಜಾಗೆಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮಾತ್ರ ಭೂ ಗ್ಯಾರಂಟಿ ಯೋಜನೆಯಡಿ ಹಕ್ಕುಪತ್ರ ನೀಡಲಾಗಿದೆ. ಆದರೆ ಆರೇಮಲ್ಲಾಪುರ ಗ್ರಾಮದ ಕೆಲವರು ದುರಾಸೆಯಿಂದ ಕಳೆದ ಒಂದೆರಡು ದಿನಗಳಿಂದ ಗೋಮಾಳ ಜಾಗೆಯಲ್ಲಿ ನಿರ್ಮಾಣ ಕಾರ್ಯ ಕೈಗೊಂಡಿರುವುದು ತಿಳಿದು ಬಂದಿದೆ. ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಹಸೀಲ್ದಾರ್‌ ಆರ್.ಎಚ್. ಭಾಗವಾನಹೇಳಿದರು.