ಕನ್ನಡಪ್ರಭ ವಾರ್ತೆ ಮೈಸೂರು
ಈ ಬಾರಿಯ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರವು ಆಹ್ವಾನಿಸಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಪರವಾಗಿ ದಲಿತ ಮಹಾಸಭಾವು ಮಂಗಳವಾರ ಹಮ್ಮಿಕೊಂಡಿದ್ದ ಚಾಮುಂಡಿಬೆಟ್ಟ ಚಲೋ- ಪಾದಯಾತ್ರೆಯನ್ನು ಪೊಲೀಸರು ದಿಗ್ಭಂಧನದಿಂದ ವಿಫಲಗೊಳಿಸಿದರು.ಧರ್ಮ, ಸಂಸ್ಕೃತಿ ಟೀಕಿಸಿರುವ ಬಾನು ಮುಷ್ತಾಕ್ ಅವರಿಗೆ ದಸರಾ ಉದ್ಘಾಟಿಸಲು ಅವಕಾಶ ನೀಡಿದ್ದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯು ಕುರುಬಾರಹಳ್ಳಿಯ ವೃತ್ತದಿಂದ ಚಾಮುಂಡಿಬೆಟ್ಟಕ್ಕೆ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದನ್ನು ವಿರೋಧಿಸಿ ಚಾಮುಂಡಿ ತಾಯಿಯನ್ನು ರಾಜಕೀಯ ಗೊಳಿಸದಿರಿ ಹಾಗೂ ಕೋಮುಗಲಭೆ ಸೃಷ್ಟಿಸದಿರಿ ಎಂಬ ಘೋಷವಾಕ್ಯದಡಿ ದಲಿತ ಮಹಾಸಭಾವು ಅದೇ ಸ್ಥಳದಿಂದ ಚಾಮುಂಡಿ ನಡಿಗೆಗೆ ಕರೆ ನೀಡಿತ್ತು. ಎರಡು ಸಂಘಟನೆಗಳು ಕರೆ ನೀಡಿದ್ದ ಪಾದಯಾತ್ರೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು.
ಇಷ್ಟಾದರೂ ಎರಡು ಸಂಘಟನೆಯವರು ಚಾಮುಂಡಿಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುವುದಾಗಿ ಕುರುಬಾರಹಳ್ಳಿ ವೃತ್ತಕ್ಕೆ ಆಗಮಿಸಿದ್ದರು. ಈ ವೇಳೆ ಎರಡು ಸಂಘಟನೆಗಳ ಮುಖಂಡರು ಹಾಗೂ ಪೊಲೀಸರು ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಲಕ್ಷಣ ಅರಿತ ಪೊಲೀಸರು, ಸ್ಥಳಕ್ಕೆ ಆಗಮಿಸುತ್ತಿದ್ದ ಹಿಂದೂಪರ ಮುಖಂಡರನ್ನು ಬಂಧಿಸಿದರು.ದಕ್ಷಿಣ ಕನ್ನಡ, ಕೊಡಗು, ಮೈಸೂರು ಭಾಗದ ಹಿಂದುತ್ವದ ಕಾರ್ಯಕರ್ತರು ತಂಡೋಪ ತಂಡವಾಗಿ ಆಗಮಿಸಿ, ಚಾಮುಂಡಿಬೆಟ್ಟಕ್ಕೆ ಶಾಂತಿಯುತ ಪಾದಯಾತ್ರೆ ನಡೆಸಿ, ದೇವರ ದರ್ಶನ ಮಾಡಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ವಿವಿಧ ತಂಡಗಳೊಂದಿಗೆ ಆಗಮಿಸಿದ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಮೇಯರ್ ಗಳಾದ ಸಂದೇಶ್ ಸ್ವಾಮಿ, ಶಿವಕುಮಾರ್ ಅವರನ್ನು ಪೊಲೀಸರು ತಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಹೀಗಾಗಿ, ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.ಈ ವೇಳೆ ಪ್ರತಾಪ್ ಸಿಂಹ ಮಾತನಾಡಿ, ಬಾನು ಮುಷ್ತಾಕ್ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಬುದ್ಧಿವಾದ ಹೇಳಿ ಕ್ಷಮೆ ಕೇಳುವಂತೆ ಮಾಡಿಲ್ಲ. ಬದಲಾಗಿ ಅವರ ರಕ್ಷಣೆ ಮಾಡುತ್ತಿದ್ದಾರೆ. ಪ್ರತಿಭಟನಾ ಜಾಥಾಕ್ಕೆ ಬಂದವರನ್ನು ಅಟ್ಟಾಡಿಸಿ ಬಂಧಿಸುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ಚಾಮುಂಡಿ ಪಾದದ ಬಳಿಯೂ ಹಿಂದುತ್ವದ ಕಾರ್ಯಕರ್ತರು ಆಗಮಿಸಿ ಬೆಟ್ಟಕ್ಕೆ ತೆರಳಲು ಯತ್ನಿಸಿದರು. ಎಲ್ಲರನ್ನೂ ತಡೆದ ಪೊಲೀಸರು, ಅವರನ್ನು ವಶಕ್ಕೆ ಪಡೆದು ಸಿಎಆರ್ ಮೈದಾನ ಹಾಗೂ ಆಲನಹಳ್ಳಿ ಠಾಣೆಗೆ ಕರೆದೊಯ್ದರು. ಠಾಣೆಯ ಮುಂದೆ ಹಿಂದೂ ಕಾರ್ಯಕರ್ತರು ಭಜನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮಧ್ಯಾಹ್ನ ಊಟ ನೀಡಲಿಲ್ಲ ಎಂದು ಪ್ರತಿಭಟಿಸಿದರು.ಚಾಮುಂಡಿಬೆಟ್ಟ ನಡಿಗೆಗೂ ಅಡ್ಡಿ
ದಲಿತ ಮಹಾಸಭಾ ಕರೆ ನೀಡಿದ್ದ ಚಾಮುಂಡಿ ನಡಿಗೆಗೆ ಆಗಮಿಸಿದ್ದ ಮುಖಂಡರನ್ನು ಸಹ ಪೊಲೀಸರು ರಸ್ತೆಯಲ್ಲೇ ತಡೆದು, ವಾಪಸ್ ಕಳುಹಿಸಿದರು. ಅಧ್ಯಕ್ಷ ಎಸ್. ರಾಜೇಶ್ ವೃತ್ತದ ಬಳಿ ಘೋಷಣಾ ಫಲಕಗಳೊಂದಿಗೆ ಬಂದಾಗ ಅವರನ್ನು ಪೊಲೀಸರು ವಶಕ್ಕೆ ಪಡೆದರು.ಈ ವೇಳೆ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ನೇತೃತ್ವದ ತಂಡವು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ, ರಾಜೇಶನನ್ನು ಪೊಲೀಸರಿಂದ ಬಿಡಿಸಿಕೊಂಡು, ನಡಿಗೆಗೆ ಅವಕಾಶ ನೀಡದಿದ್ದಾಗ ಹಿಂದಿರುಗಿದರು.
ಪೊಲೀಸರಿಂದ ಬಿಗಿ ಭದ್ರತೆಪ್ರತಿಭಟನಾಕಾರರನ್ನು ತಡೆಯಲು ಕುರುಬಾರಹಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ತಾವರೆಕೆರೆಯಲ್ಲಿ 500 ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಿವಿಲ್, ಸಿಎಆರ್, ಕಮಾಂಡೋ, ಚಾಮುಂಡಿ ಪಡೆಯ ಸಿಬ್ಬಂದಿ ಮುಂಜಾನೆಯಿಂದ ದಿನವಿಡೀ ಭದ್ರತೆ ಕೈಗೊಂಡಿದ್ದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಡಿಸಿಪಿಗಳಾದ ಆರ್.ಎನ್. ಬಿಂದು ಮಣಿ, ಕೆ.ಎಸ್. ಸುಂದರ್ ರಾಜ್ ನೇತೃತ್ವದಲ್ಲಿ ಎಸಿಪಿಗಳು, ಇನ್ಸ್ ಪೆಕ್ಟರ್ ಗಳು ಮತ್ತು ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.-----
ಬಾಕ್ಸ್...ಬೆಟ್ಟಕ್ಕೆ ಹೋಗುತ್ತಿದ್ದ ಮಹಿಳೆ ವಶಕ್ಕೆ!
ಚಾಮುಂಡಿಬೆಟ್ಟಕ್ಕೆ ಪೂಜೆ ಸಲ್ಲಿಸಲು ತೆರಳುತ್ತಿದ್ದ ಮಹಿಳೆಯೊಬ್ಬರನ್ನು ಮಹಿಳಾ ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದ ಪ್ರಸಂಗ ಸಹ ಮೈಸೂರಿನ ಕುರುಬಾರಹಳ್ಳಿ ವೃತ್ತದಲ್ಲಿ ನಡೆಯಿತು.ನಾನು ಪತಿಯೊಂದಿಗೆ ಬಂದಿದ್ದೇನೆ. ದೇವಸ್ಥಾನಕ್ಕೆ ತೆರಳಲು ಯಾಕೆ ಬಿಡುತ್ತಿಲ್ಲ ಎಂದು ಮಹಿಳೆ ಪ್ರಶ್ನಿಸಿದರು. ಇದರಿಂದ ಸಿಡಿಮಿಡಿಗೊಂಡ ಮಹಿಳಾ ಪೊಲೀಸರು, ಅವರನ್ನು ವಿಚಾರಣೆ ಮಾಡದೆ ಪೊಲೀಸ್ ವಾಹನಕ್ಕೆ ಹತ್ತಿಸಲು ಯತ್ನಿಸಿದರು. ಈ ವೇಳೆ ಮಗಳು ಉದ್ಯೋಗದ ಸಂದರ್ಶನಕ್ಕಾಗಿ ತೆರಳಿದ್ದಾಳೆ. ಅವಳಿಗೆ ಒಳಿತಾಗಲೆಂದು ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳುತ್ತಿದ್ದರೆ ನನ್ನನ್ನು ಜೈಲಿಗೆ ಕಳಿಸುತ್ತಿದ್ದೀರಾ ಎಂದು ಮಹಿಳೆ ಪ್ರಶ್ನಿಸಿ ಕಣ್ಣೀರು ಹಾಕಿದರು. ನಂತರ ಪೊಲೀಸರು, ದಂಪತಿಯನ್ನು ದೇವಸ್ಥಾನಕ್ಕೆ ಹೋಗಲು ಅವಕಾಶ ನೀಡಿದರು.
ಚಾಮುಂಡಿಬೆಟ್ಟಕ್ಕೆ ಹಾಗೂ ಕುರುಬಾರಹಳ್ಳಿ ವೃತ್ತಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಸುತ್ತಮುತ್ತಲಿನ ಬಡಾವಣೆಗಳ ನಿವಾಸಿಗಳು, ದೂರದ ಊರುಗಳಿಂದ ಆಗಮಿಸಿದವರು ತೊಂದರೆ ಅನುಭವಿಸಿದರು.