ಕನ್ನಡಪ್ರಭ ವಾರ್ತೆ ಬಾದಾಮಿ
ಚಾಲುಕ್ಯರ ಕಾಲದ ಗತವೈಭವ ಸಾರುವ ಚಾಲುಕ್ಯ ಉತ್ಸವವನ್ನು ಮೇಘಮೈತ್ರಿ ಸಂಘಟನೆ ಆಯೋಜನೆ ಮಾಡಿರುವುದು ಶ್ಲಾಘನೀಯ. ಪ್ರತಿವರ್ಷ ಸರ್ಕಾರದ ವತಿಯಿಂದ ಉತ್ಸವ ಆಚರಿಸಬೇಕು ಎಂದು ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹೇಶ ಹೊಸಗೌಡ್ರ ಹೇಳಿದರು.ಪಟ್ಟಣದ ಜಯನಗರದ ಎಸ್.ಎಫ್. ಹೊಸಗೌಡ್ರ ವರ್ಲ್ಡ ಸ್ಕೂಲ್‌ನಲ್ಲಿ ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಬಾದಾಮಿ ಚಾಲುಕ್ಯ ಉತ್ಸವ-2024 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರದ ವತಿಯಿಂದ ಪ್ರತಿ ವರ್ಷ ಈ ಹಿಂದೆ ಚಾಲುಕ್ಯ ಉತ್ಸವ ಆಯೋಜನೆ ಮಾಡಲಾಗುತ್ತಿತ್ತು. ಅನಿವಾರ್ಯ ಕಾರಣಗಳಿಂದ ಈಗ ಸ್ಥಗಿತಗೊಂಡಿದೆ. ಪುನಃ ಚಾಲುಕ್ಯ ಉತ್ಸವ ಆಯೋಜನೆ ಮಾಡುವ ಮೂಲಕ ಚಾಲುಕ್ಯರ ಕಾಲದ ಕಲೆ, ವಾಸ್ತುಶಿಲ್ಪ ಇಂದಿನ ಜನಾಂಗಕ್ಕೆ ಪರಿಚಯಿಸುವ ಅಗತ್ಯವಿದೆ. ಸರ್ಕಾರದ ಜೊತೆಗೆ ಸಂಘ-ಸಂಸ್ಥೆಗಳು ಕಲೆಗಳ ಉಳಿವಿಗೆ ಶ್ರಮಿಸಬೇಕಿದೆ ಎಂದು ಹೇಳಿದರು.
ಡಾ.ಶಿವಾನಂದ ಕುಬಸದ ಮಾತನಾಡಿ, ಪ್ರತಿಯೊಬ್ಬರೂ ಕನ್ನಡ ಉಳಿಸಿ ಬೆಳಸಲು ಪ್ರಯತ್ನಿಸಬೇಕು. ಅನಕ್ಷರಸ್ಥರಾದ ಗ್ರಾಮೀಣ ಪ್ರದೇಶದವರು ಕನ್ನಡ ಉಳಿಸುತ್ತಿದ್ದಾರೆ. ಸುಶಿಕ್ಷಿತರಾದ ನಾವು ಕನ್ನಡ ಬೆಳೆಸಬೇಕಿದೆ ಎಂದರು.ಖ್ಯಾತ ವೈದ್ಯ ಡಾ.ಕರವೀರಪ್ರಭು ಕ್ಯಾಲಕೊಂಡ ಮಾತನಾಡಿ, ಸರ್ಕಾರ ಪ್ರತಿವರ್ಷ ಚಾಲುಕ್ಯ ಉತ್ಸವ ಮಾಡುತ್ತೇವೆಂದು ಹೇಳಿತ್ತು. ನಾಡಿನ ಖ್ಯಾತ ಸಾಹಿತಿ, ಕಲಾವಿದರನ್ನು ಕರೆಸಿ ವಿಜ್ರಂಭಣೆಯಿಂದ ಮಾಡಲಾಗುವುದು ಎಂದು ಆಶ್ವಾಸನೆ ನೀಡಿತ್ತು. ಆದರೆ, ಕೆಲವು ವರ್ಷಗಳಿಂದ ಉತ್ಸವ ಆಚರಣೆ ಬಂದ್ ಮಾಡಿರುವುದು ವಿಷಾದಕರ ಸಂಗತಿ ಎಂದರು.
ಮೆರವಣಿಗೆ: ಬೆಳಗ್ಗೆ ಪಿಕಾರ್ಡ್ ಬ್ಯಾಂಕ್ ಆವರಣದಿಂದ ಪ್ರಾರಂಭವಾದ ಮೆರವಣಿಗೆಗೆ ಪಿ.ಎಸ್.ಐ ನಿಂಗಪ್ಪ ಪೂಜಾರಿ ಚಾಲನೆ ನೀಡಿದರು. ಮುಖ್ಯರಸ್ಥೆಯ ಮೂಲಕ ವಿವಿಧ ಸಂಗೀತ ವಾದ್ಯಗಳೊಂದಿಗೆ ಎಸ್.ಎಫ್.ಹೊಸಗೌಡ್ರ ಶಾಲೆಗೆ ತಲುಪಿತು. ತಾಲೂಕು ಕಸಾಪ ಅದ್ಯಕ್ಷ ಬಿ.ಎಫ್. ಹೊರಕೇರಿ ಧ್ವಜಾರೋಹಣ ನೆರವೇರಿಸಿದರು, ಬಾಗಲಕೋಟೆ ಜಿಲ್ಲೆಗೆ 25 ವರ್ಷ ತುಂಬಿದ ಸವಿನೆನಪಿಗಾಗಿ 25 ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಬಿ.ಎಫ್. ಹೊರಕೇರಿ, ಸಾಹಿತಿ ರವಿ ಕಂಗಳ, ಕಮತಗಿಯ ಶಿವಕುಮಾರ ಸ್ವಾಮೀಜಿ, ಸಾಹಿತಿ ರವಿ ತಿರಕನ್ನವರ, ಬಸವರಾಜ ಸಿಂದಗಿಮಠ, ಸಂಚಾಲಕರಾದ ಚನ್ನಬಸಪ್ಪ ಎಸ್.ಲೆಕ್ಕಿಹಾಳ, ರಮೇಶ ಕೊಕಾಟಿ, ಶ್ರೀನಿವಾಸ ಮಾರಾ, ಮುತ್ತು ಬಳ್ಳಾ, ಸದಾಶಿವ ಮರಡಿ ಇದ್ದರು.