ಕನ್ನಡಪ್ರಭ ವಾರ್ತೆ ನಾಗಮಂಗಲ ಕಳೆದ ಲೋಕಸಭೆ ಚುನಾವಣೆಯಲ್ಲಿ ತಂದೆ ಸ್ಥಾನದಲ್ಲಿ ನಿಂತು ಸಚಿವ ಎನ್.ಚಲುವರಾಯಸ್ವಾಮಿ ನಮಗೆ ಸಹಕಾರ ಕೊಟ್ಟಿದ್ದರು. ಅದರ ಋಣ ತೀರಿಸಲು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಮಾಡುತ್ತಿರುವುದಾಗಿ ನಟ ದರ್ಶನ್ ಹೇಳಿದರು.ತಾಲೂಕಿನ ಬೆಳ್ಳೂರು ಸೇರಿದಂತೆ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಣೇಗೌಡ (ಸ್ಟಾರ್ ಚಂದ್ರು) ಪರ ರೋಡ್ ಶೋ ನಡೆಸಿ ಮಾತನಾಡಿ, ಸುಮಲತಾ ಪರ ಕಾಂಗ್ರೆಸ್ ನ ಕೆಲವು ನಾಯಕರು ಜಿಲ್ಲೆಯಾದ್ಯಂತ ಸಹಕಾರ ಮಾಡಿದರು. ಸುಮಲತಾ ಗೆಲುವಿಗೆ ಸಚಿವ ಎನ್.ಚಲುವರಾಯಸ್ವಾಮಿ ಸಹಕಾರವೂ ಇತ್ತು. ಅದಕ್ಕಾಗಿ ಅದಕ್ಕಾಗಿ ಕಾಂಗ್ರೆಸ್ ಪರ ಮತಯಾಚನೆ ಮಾಡುತ್ತಿರುವುದಾಗಿ ತಿಳಿಸಿದರು.ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ತಾಲೂಕಿನ ಕನ್ನಾಘಟ ಗ್ರಾಮದ ವೆಂಕಟರಮಣೇಗೌಡ(ಸ್ಟಾರ್ ಚಂದ್ರು) ಉದ್ಯಮಿಯಾಗಿ ರಾಜ್ಯದಲ್ಲಿ ಬೆಳೆದು ಸಮಾಜ ಸೇವೆ ಮಾಡಬೇಕೆಂದು ರಾಜಕೀಯ ಕ್ಷೇತ್ರಕ್ಕೆ ಬಂದಿದ್ದಾರೆ. ಇದೇ ತಾಲೂಕಿನ ಮಗ ಚಂದ್ರುಗೆ ತಾಲೂಕಿನ ಜನತೆ ಅತೀ ಹೆಚ್ಚು ಮತಗಳನ್ನು ನೀಡಿ ಆಶೀರ್ವಾದ ಮಾಡಬೇಕು ಎಂದು ಹೇಳಿದರು.
ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ನಾನು ನಿಮ್ಮೂರಿನ ಮಗ. ಜಿಲ್ಲೆಯ ಎಲ್ಲ ಜನರ ಸೇವೆ ಮಾಡಲು ಬಂದಿದ್ದೇನೆ. ದಯಮಾಡಿ ಮತ ಕೊಟ್ಟು ಆಶೀರ್ವದಿಸಬೇಕು. ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ಕೊಟ್ಟು ನನ್ನನ್ನು ಗೆಲ್ಲಿಸಬೇಕು ಎಂದು ಮತಯಾಚಿಸಿದರು. ತಾಲೂಕಿನ ಬೆಳ್ಳೂರು, ಬೆಳ್ಳೂರು ಕ್ರಾಸ್, ಕದಬಹಳ್ಳಿ, ಲಾಳನಕೆರೆ, ಬಿಂಡಿಗನವಿಲೆ, ಮಾಯಿಗೋನಹಳ್ಳಿ, ಶಿಕಾರಿಪುರ, ಟಿ.ಬಿ.ಬಡಾವಣೆ, ನಾಗಮಂಗಲ ಟೌನ್, ದೇವಲಾಪುರ, ಬ್ರಹ್ಮದೇವರಹಳ್ಳಿ ಹಾಗೂ ಚಿಣ್ಯ ಗ್ರಾಮಗಳಲ್ಲಿ ಭರ್ಜರಿ ರೋಡ್‌ಶೋ ನಡೆಸುವ ಮೂಲಕ ಮತಯಾಚಿಸಿದರು.ರೋಡ್‌ಶೋ ನಡೆಸಿದ ದರ್ಶನ್‌ಗೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಡಿ.ಬಾಸ್ ಅಭಿಮಾನಿಗಳು ಸಾಥ್ ನೀಡಿದರೆ, ದಾರಿಯುದ್ದಕ್ಕೂ ಸಾವಿರಾರು ಅಭಿಮಾನಿಗಳು ನೆರೆದು, ಪಟಾಕಿ ಸಿಡಿಸಿ, ಕ್ರೇನ್ ಯಂತ್ರದ ಮೂಲಕ ಬೃಹತ್ ಗಾತ್ರದ ಗುಲಾಬಿಹೂ, ಸೇಬು ಹಾಗೂ ಕಿತ್ತಳೆ ಹಣ್ಣಿನ ಹಾರಗಳನ್ನು ಹಾಕಿ ಸ್ವಾಗತ ಕೋರಿದರು. ಡಿ ಬಾಸ್ ಡಿ ಬಾಸ್ ಘೋಷಣೆಗಳು ಮೊಳಗಿದವು. ಮಹಿಳೆಯರು, ಹಿರಿಯರು, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಪುಟಾಣಿ ಮಕ್ಕಳೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೋಡಲು ಮುಗಿ ಬಿದ್ದರು. ನಟ ದರ್ಶನ್ ಎಲ್ಲಾ ಜನರತ್ತ ಕೈ ಬೀಸಿ, ಪ್ಲೇಯಿಂಗ್ ಕಿಸ್ ಮಾಡಿ ಖುಷಿಪಟ್ಟರು.