- ಕೈಗಾರಿಕೆ ಸ್ಥಾಪನೆ ಕುರಿತು ಸಚಿವ ಎಂ.ಬಿ.ಪಾಟೀಲ್ ಕರೆದ ಸಭೆಗೆ ಬರಲಿಲ್ಲವೇಕೆ?
- ಏಕವಚನ ಪದ ಪ್ರಯೋಗಿಸಿದರೆ ಕಾರ್ಯಕರ್ತರಿಂದ ಅದೇ ಪ್ರಯೋಗ ಮಾಡಿಸಬೇಕಾಗುತ್ತೆ
- ಎಚ್‌ಡಿಕೆ ಕಾಲದ ಅಭಿವೃದ್ಧಿಯನ್ನು ಕಣ್ಬಿಟ್ಟು ಸರಿಯಾಗಿ ನೋಡಿದರೆ ತಿಳಿಯುತ್ತೆಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯಲ್ಲಿ ಕೈಗಾರಿಕೆ ಅಭಿವೃದ್ಧಿಯಾಗುವ ಬಗ್ಗೆ ಸಚಿವ ಚಲುವರಾಯಸ್ವಾಮಿಗೆ ಬದ್ಧತೆಯೇ ಇಲ್ಲ. ಬದ್ಧತೆ ಇದ್ದಿದ್ದರೆ ಕೈಗಾರಿಕೆ ಸ್ಥಾಪನೆ ಕುರಿತು ರಾಜ್ಯ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಗೆ ಬರಲಿಲ್ಲವೇಕೆ. ಸರ್ಕಾರದ ಜೊತೆ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡಬೇಕಾದವರು ದೂರ ಉಳಿದಿದ್ದೇಕೆ. ಹಾಗಾದರೆ ಜಿಲ್ಲೆಗೆ ಕೈಗಾರಿಕೆ ಬರುವುದು ಇವರಿಗೆ ಇಷ್ಟವಿಲ್ಲ. ಕುಮಾರಸ್ವಾಮಿ ಅವರೊಂದಿಗೆ ದ್ವೇಷದ ರಾಜಕಾರಣ ಮಾಡುವುದಕ್ಕಷ್ಟೇ ಸೀಮಿತವಾಗಿ ಉಳಿದಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಟೀಕಿಸಿದರು.
ಎಆರ್‌ಎಐ ಸಂಸ್ಥೆಗೆ ಜಿಲ್ಲಾಡಳಿತ ಗುರುತಿಸಿರುವ ಭೂಮಿ ಹೇಗಿದೆ ಅಂತ ಚಲುವರಾಯಸ್ವಾಮಿ ಅವರು ಪರಿಶೀಲನೆ ನಡೆಸಿದ್ದಾರಾ. ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಅಧ್ಯಯನವನ್ನೇ ನಡೆಸದೆ ಭೂಮಿ ಹಸ್ತಾಂತರ ಪ್ರಕ್ರಿಯೆ ನಡೆಸಿ ಜಿಲ್ಲಾಡಳಿತದ ಹಂತದ ಕೆಲಸ ಪೂರ್ಣಗೊಂಡಿದೆ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ. ಇದು ಚಲುವರಾಯಸ್ವಾಮಿಗೆ ಅಭಿವೃದ್ಧಿ ಬಗ್ಗೆ ಇರುವ ಆಸಕ್ತಿ ಎಂದು ವ್ಯಂಗ್ಯವಾಡಿದರು.
ಈಗ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ನೀವೇ ಸಭೆ ಕರೆಯಿರಿ. ಜೆಡಿಎಸ್‌ನವರಾಗಿ ನಾವೇ ಬರುತ್ತೇವೆ. ಒಟ್ಟಿಗೆ ಸ್ಥಳ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸೋಣ. ಜಿಲ್ಲೆಯ ಅಭಿವೃದ್ಧಿಗೆ ಪರಸ್ಪರ ಇಬ್ಬರೂ ಕೈಜೋಡಿಸೋಣ. ಇದಕ್ಕೆ ನೀವೇ ಸಭೆಯ ದಿನಾಂಕ ನಿಗದಿಪಡಿಸುವಂತೆ ಸಚಿವ ಎನ್.ಚಲುವರಾಯಸ್ವಾಮಿ ಅವರಲ್ಲಿ ಮನವಿ ಮಾಡಿದರು.
ಎಚ್‌ಡಿಕೆ ಕಾಲದ ಅಭಿವೃದ್ಧಿಯನ್ನು ಸರಿಯಾಗಿ ಕಣ್ಬಿಟ್ಟು ನೋಡಿದರೆ ತಿಳಿಯುತ್ತೆ. ಜಿಲ್ಲೆಯೊಳಗೆ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆ, ಪದವಿ ಪೂರ್ವ, ಪದವಿ, ಪಾಲಿಟೆಕ್ನಿಕ್ ಕಾಲೇಜುಗಳು, ಕಾವೇರಿ ಭವನ, ಕಂದಾಯ ಭವನ, ಸಾರಿಗೆ ಬಸ್ ನಿಲ್ದಾಣಗಳ ಮೇಲ್ದರ್ಜೆಗೇರಿಸಿದ್ದು ಕುಮಾರಸ್ವಾಮಿ. ಕಾಂಗ್ರೆಸ್-ಜೆಡಿಎಸ್ ಮತ್ತು ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಯ ಕೊಡುಗೆ ನೀಡಿದ್ದಾರೆ. ಅದೆಲ್ಲವನ್ನೂ ತಮ್ಮದೆಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ಲವೇ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಮಾಜಿ ಶಾಸಕ ಡಾ.ಕೆ.ಅನ್ನದಾನಿ, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಬಿ.ಆರ್.ರಾಮಚಂದ್ರ, ಮುದ್ದನಘಟ್ಟ ಮಹಾಲಿಂಗೇಗೌಡ ಇದ್ದರು.ಅಭಿವೃದ್ಧಿಗೆ ಪಕ್ಷಬೇಧ ಮರೆಯಿರಿ: ಡಿ.ಸಿ.ತಮ್ಮಣ್ಣ
ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆಯಬೇಕು. ಅಭಿವೃದ್ಧಿ ಇಚ್ಛಾಶಕ್ತಿ ಇದ್ದರೆ ಬಹಿರಂಗವಾಗಿ ಸಭೆ ಕರೆಯಿರಿ. ನಾವೇ ಬರುತ್ತೇವೆ. ಎಲ್ಲರೂ ಸೇರಿ ಜಿಲ್ಲೆಯ ಜನರ ಹಿತದೃಷ್ಟಿಯಿಂದ ಕೈಗಾರಿಕೆ ತರೋಣ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕುಮಾರಸ್ವಾಮಿ ಆಸಕ್ತರಾಗಿದ್ದಾರೆ. ಅವರು ಕೇಂದ್ರ ಮಂತ್ರಿಯಾಗಿರುವಾಗಲೇ ಶಾಶ್ವತವಾಗಿ ಸಿಗಬಹುದಾದ ಕೊಡುಗೆಯನ್ನು ಪಡೆದುಕೊಳ್ಳಬೇಕಿದೆ. ನಾನು ಈ ವಿಚಾರವಾಗಿ ಶಾಸಕ ಪಿ.ರವಿಕುಮಾರ್ ಬಳಿಯೂ ಮಾತನಾಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷಬೇಧ ಮರೆದು ಒಂದಾಗಿ ಹೋಗೋಣ ಎಂದು ಹೇಳಿರುವುದಾಗಿ ಸ್ಪಷ್ಟಪಡಿಸಿದರು.ಪ್ರಿಯಾಂಕ್ ಖರ್ಗೆ ಶಾಸಕನಾಗುವುದಕ್ಕೂ ನಾಲಾಯಕ್: ಡಾ.ಕೆ.ಅನ್ನದಾನಿ
ಕನ್ನಡಪ್ರಭ ವಾರ್ತೆ, ಮಂಡ್ಯಅಪ್ಪನ ನೆರಳಿನಲ್ಲಿ ಮಂತ್ರಿಯಾಗಿರುವ ಪ್ರಿಯಾಂಕ್ ಖರ್ಗೆ ಶಾಸಕನಾಗುವುದಕ್ಕೂ ನಾಲಾಯಕ್. ಅವರದು ಪಿಯುಸಿ ನಾಲೆಡ್ಜ್. ಅವರ ಬಾಯಿಂದ ಇನ್ನೆಂತಹ ಮಾತುಗಳನ್ನು ನಿರೀಕ್ಷಿಸಲು ಸಾಧ್ಯ. ಕೂಡಲೇ ಕುಮಾರಸ್ವಾಮಿ ವಿಚಾರವಾಗಿ ಹಳ್ಳಿ ಗುಗ್ಗು ಎಂದು ಹೇಳಿರುವ ಮಾತನ್ನು ವಾಪಸ್ ಪಡೆಯಬೇಕು ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಒತ್ತಾಯಿಸಿದರು.
ಪ್ರಿಯಾಂಕ್ ಖರ್ಗೆ ಪ್ರಕಾರ ಹಳ್ಳಿಯಲ್ಲಿರುವವರೆಲ್ಲಾ ಗುಗ್ಗುಗಳಾ. ಮಹನೀಯರುಗಳೆಲ್ಲಾ ಹುಟ್ಟಿರುವುದು, ಬೆಳೆದು ಬಂದಿರುವುದು ಹಳ್ಳಿಗಳಿಂದಲೇ. ಇಷ್ಟು ತಿಳಿವಳಿಕೆಯಿಲ್ಲದ ನೀವು ಒಬ್ಬ ಗೃಹಮಂತ್ರಿ. ದೇವೇಗೌಡರ ಜಾತ್ಯತೀತ ತತ್ವಕ್ಕೆ ಬೆಂಕಿ ಇಟ್ಟವರು ನೀವು. ನಿಮ್ಮಪ್ಪನ ನೆರಳು ಬಿಟ್ಟು ಹೊರಬಂದರೆ ಶಾಸಕರಾಗುವುದಕ್ಕೂ ನೀವು ಯೋಗ್ಯರಾಗುವುದಿಲ್ಲ ಎಂದು ಛೇಡಿಸಿದರು.ಪ್ರಿಯಾಂಕ್ ಖರ್ಗೆ ವಂಶಸ್ಥರು ಕರ್ನಾಟಕದವರೇ ಅಲ್ಲ. ಅವರು ಮೂಲತಃ ಆಂಧ್ರದವರು. ನೀವೇನ್ರಿ ನಮಗೆ ಪಾಠ ಮಾಡೋದು. ಮೊದಲು ಕೆಪಿಎಸ್ಸಿ ಹಗರಣದಲ್ಲಿ ನಿಮ್ಮ ಬಗ್ಗೆ ಕುಮಾರಸ್ವಾಮಿ ಅವರು ಎತ್ತಿರುವ ಪ್ರಶ್ನೆಗೆ ಮೊದಲು ಉತ್ತರ ಕೊಡ್ರೀ. ನೀವು ತಪ್ಪೇ ಮಾಡಿಲ್ಲವೆಂದ ಮೇಲೆ ಸುಪ್ರೀಂಕೋರ್ಟ್‌ಗೆ ಹೋಗಿ ತಡೆಯಾಜ್ಞೆ ಕೋರಿರುವುದೇಕೆ ಎಂದು ಖಾರವಾಗಿ ಪ್ರಶ್ನಿಸಿದರು.