ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ವತಿಯಿಂದ ರೈತ ದಸರಾ, ಫಲಪುಷ್ಪ ಪ್ರದರ್ಶನ, ಶ್ವಾನದಳ ಪ್ರದರ್ಶನ, ಹಾಲು ಕರೆಯುವ ಸ್ಪರ್ಧೆ, ಹೆಲಿ ರೈಡ್ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಪುಟ್ಟರಂಗಶೆಟ್ಟಿ ಮೊದಲಿಗೆ ರೈತ ದಸರಾ ಅಂಗವಾಗಿ ಪಶುಪಾಲನಾ ಇಲಾಖೆ ಹಾಗೂ ಚಾಮರಾಜನಗರ ಹಾಲು ಒಕ್ಕೂಟ ಸಹಯೋಗದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಾಲು ಕರೆಯುವ ಸ್ಪರ್ಧೆ ಹಾಗೂ ಶ್ವಾನಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟನೆ ಮಾಡಿದರು.ಇದೇ ವೇಳೆ ಮಾತನಾಡಿ, ಮೈಸೂರು ದಸರಾ ಮಹೋತ್ಸವದ ಭಾಗವಾಗಿ ಚಾಮರಾಜನಗರದಲ್ಲಿಯೂ ಮೂರು ದಿನಗಳ ಕಾಲ ಜಿಲ್ಲಾ ದಸರಾ ಉತ್ಸವವನ್ನು ಆಯೋಜಿಸಲಾಗುತ್ತಿದೆ. ನಾವೆಲ್ಲಾ ರೈತರು, ರೈತರ ಮಕ್ಕಳು, ವ್ಯವಸಾಯವನ್ನೇ ನಂಬಿ ಬದುಕುವವರು. ಚಾಮರಾಜನಗರ ಜಿಲ್ಲೆ ವಿಶೇಷ ಹಾಗೂ ವಿಭಿನ್ನ ಮಣ್ಣಿನ ಗುಣಲಕ್ಷಣಗಳನ್ನು ಹೊಂದಿದೆ. ರೈತರನ್ನು ಉತ್ತೇಜಿಸಲು ಸರ್ಕಾರದಿಂದ ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ನಾಡಹಬ್ಬ ದಸರಾ ಮಹೋತ್ಸವ ಮೈಸೂರಿನ ಪರಂಪರೆಯಾಗಿದೆ. ಅದನ್ನು ಚಾಮರಾಜನಗರದಲ್ಲಿಯೂ ಮುಂದುವರಿಸುವ ಮೂಲಕ ಈ ಬಾರಿಯ ದಸರಾ ಉತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದೆ ಎಂದರು.
ಬಳಿಕ ರೈತ ದಸರಾ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದವರೆಗೆ ಡೊಳ್ಳುಕುಣಿತ, ಮರಗಾಲು ಕುಣಿತ, ಚಂಡೆವಾದ್ಯ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಲಂಕೃತ ಎತ್ತಿನಗಾಡಿಗಳ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು.
ತದನಂತರ ದಸರಾ ಪ್ರಯುಕ್ತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಹೆಲಿ ರೈಡ್ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಸ್ವತಃ ಹೆಲಿ ರೈಡ್ ಮಾಡುವ ಮೂಲಕ ಹೆಲಿ ಟೂರಿಸಂ ಅನ್ನು ಪ್ರೋತ್ಸಾಹಿಸಿದರು. ಸಚಿವರೊಂದಿಗೆ ಶಾಸಕರು, ಜಿಲ್ಲಾಧಿಕಾರಿಗಳು ಹೆಲಿ ರೈಡ್ ಮಾಡಿ ಇಡೀ ಜಿಲ್ಲೆಯನ್ನು ಒಂದು ಸುತ್ತು ಸುತ್ತಿ ಬಂದು ತಮ್ಮ ಖುಷಿಯ ಕ್ಷಣಗಳನ್ನು ಅನುಭವಿಸಿದರು.
ಚಾಮರಾಜನಗರ ದಸರಾ ಪ್ರಯುಕ್ತ ನಗರದ ಜಿಲ್ಲಾಡಳಿತ ಭವನದಲ್ಲಿ ಫಲ-ಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು ಕಲ್ಲಂಗಡಿ ಹಣ್ಣಿನಲ್ಲಿ ಗಣ್ಯರು ಅರಳಿದ್ದು ಗಮನ ಸೆಳೆಯಿತು.
ಚಾಮರಾಜನಗರ ಜಿಲ್ಲೆಯಲ್ಲಿ ಬೆಳೆಯುವ ವೈವಿಧ್ಯಮಯ ಬೆಳೆ- ಹಣ್ಣುಗಳ ಪ್ರದರ್ಶನ ಮಾಡಲಾಗಿದ್ದು ತರಹೇವಾರಿ ಹಣ್ಣುಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ.
ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾಧಿಕಾರಿ ಶ್ರೀರೂಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಹೆಚ್ಚಿವರಿ ಜಿಲ್ಲಾಧಿಕಾರಿ ವಿ.ಪ್ರಿಯದರ್ಶಿನಿ ಇತರರು ಪಾಲ್ಗೊಂಡಿದ್ದರು.