‘ನಮ್ಮ ಭೂಮಿ-ನಮ್ಮ ಹಕ್ಕು’ ಘೊಷಣೆಯಡಿ ಒಂದು ದಿನದ ಧರಣಿ । ಸಂತ್ರಸ್ತರಿಂದ ಅಹವಾಲು ಸ್ವೀಕಾರ । ಸಚಿವ ಜಮೀರ್, ಸರ್ಕಾರದ ವಿರುದ್ಧ ಘೋಷಣೆ
ಕನ್ನಡಪ್ರಭ ವಾರ್ತೆ ಚಾಮರಾಜನಗರವಕ್ಫ್ ಕಾಯ್ದೆ ವಿರುದ್ಧ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ‘ನಮ್ಮ ಭೂಮಿ-ನಮ್ಮ ಹಕ್ಕು’ ಎಂಬ ಘೋಷ ವಾಕ್ಯದಡಿ ಒಂದು ದಿನದ ಧರಣಿ ನಡೆಸಿ, ಸಂತ್ರಸ್ತರಿಂದ ಅಹವಾಲು ಸ್ವೀಕರಿಸಲಾಯಿತು.
ನಗರದ ಚಾಮರಾಜೇಶ್ವರ ಉದ್ಯಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಸರ್ಕಾರ ಹಾಗೂ ಸಚಿವ ಜಮೀರ್ ಅಹಮದ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್, ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನಕುಮಾರ್ ಹಾಗೂ ಮುಖಂಡರು, ಕೇಂದ್ರ ಸರ್ಕಾರ ೧೯೯೫ ಮತ್ತು ೨೦೧೩ರ ವಕ್ಫ್ ಕಾಯ್ದೆ ತಿದ್ದುಪಡಿ ತರುವ ಸಂಬಂಧ ಪ್ರಕ್ರಿಯೆ ಆರಂಭಿಸಿದ ನಂತರ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಸೇರಿ ವಕ್ಫ್ ಬೋರ್ಡ್ ಹೆಸರಿನಲ್ಲಿ ರೈತರು, ಮಠಮಂದಿರಗಳು, ಶಾಲೆಗಳು ಸೇರಿದಂತೆ ಸಾವಿರಾರು ಜನರಿಗೆ ‘ನಿಮ್ಮ ಆಸ್ತಿ ವಕ್ಫ್ ಬೋರ್ಡ್‌ಗೆ ಸೇರಿದ್ದು’ ಎಂದು ನೋಟಿಸ್ ನೀಡುವ ಮೂಲಕ ರಾಜ್ಯದಲ್ಲಿ ಆತಂಕ ಮೂಡಿಸಿದ್ದಾರೆ’ ಎಂದು ಕಿಡಿಕಾರಿದರು.
ಯಾವ ನ್ಯಾಯಾಲಯದಲ್ಲೂ ಪ್ರಶ್ನಿಸದೆ ಇರುವ ವಕ್ಫ್ ಕಾಯ್ದೆ ವಿರುದ್ಧ ಪ್ರತಿಪಕ್ಷ ಬಿಜೆಪಿ ಮಾತನಾಡಿದರೆ ಮುಖ್ಯಮಂತ್ರಿ ಅವರು ಬಿಜೆಪಿ ರಾಜಕೀಯ ಮಾಡುತ್ತಿದ್ದಾರೆ ಎನ್ನುತ್ತಾರೆ. ಸಂವಿಧಾನ ವಿರೋಧಿಯಾಗಿರುವ ವಕ್ಫ್ ಕಾಯ್ದೆ ಪರವಾಗಿರುವ ಕಾಂಗ್ರೆಸ್ ನಿಜವಾಗಿಯೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.ಈ ವಕ್ಫ್ ಕಾಯ್ದೆ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಶಕ್ತಿ ತುಂಬುವ ಸಲುವಾಗಿ. ‘ನಮ್ಮ ಭೂಮಿ-ನಮ್ಮ ಹಕ್ಕು’ ಶೀರ್ಷಿಕೆಯ ಅಡಿ ಪ್ರತಿ ಜಿಲ್ಲೆಯಲ್ಲಿ ಮಠಾಧೀಶರೂ ಸೇರಿದಂತೆ ಜಿಲ್ಲೆಯ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತೆ ಎಲ್ಲರನ್ನೂ ಭೇಟಿ ಮಾಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಬಿಜೆಪಿ ಹೋರಾಟಕ್ಕೆ ಇಳಿದ ಮೇಲೆ ನೋಟಿಸ್ ಹಿಂಪಡೆಯುವಂತೆ ಮುಖ್ಯಮಂತಿ ಅವರು ಹೇಳಿದ್ದು ಕೇವಲ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆಗಾಗಿ ಜನರ ಕಣ್ಣೊರೆಸುವ ತಂತ್ರ, ರೈತರ ಕುರಿತು -ಕಾಂಗ್ರೆಸ್ಸಿನದು ಮೊಸಳೆ ಕಣ್ಣೀರು ಎಂದು ಟೀಕಿಸಿದರು.
ಗ್ಯಾರಂಟಿಗಳಿಗೆ ಹಣ ಒದಗಿಸಲಾಗಿದೆ. ಈಗ ಬಿಪಿಎಲ್ ಹೆಸರಿನಲ್ಲಿ ೨೪ ಲಕ್ಷ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಲು ಹೊರಟಿತ್ತು, ಪ್ರತಿಪಕ್ಷಗಳು ಟೀಕಿಸಿದ ಮೇಲೆ ಯಾವುದೇ ರದ್ದು ಇಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಬಡವರ ವಿರೋಧಿ ನೀತಿಯನ್ನು ಸರ್ಕಾರ ಅನುಸರಿಸುತ್ತಿದ್ದು, ವಕ್ಫ್ ಆಸ್ತಿ ಕುರಿತ ಗೆಜೆಟ್ ಅಧಿಸೂಚನೆ ಹಿಂಪಡೆಯಬೇಕು, ಅಧಿಕಾರ ದುರ್ಬಳಕೆಯ ಕುರಿತು ಸಿಬಿಐ ತನಿಖೆ ನಡೆಸಬೇಕು ಹಾಗೂ ವಿವಾದಕ್ಕೆ ಕಾರಣವಾದ ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೃಷಭೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಆರ್ ಸುಂದರ್, ನೂರೊಂದುಶೆಟ್ಟಿ, ಕುಲಗಾಣ ಶಾಂತಮೂರ್ತಿ, ಶಿವರಾಜ್, ಸುದರ್ಶನ್, ಕಮಲಮ್ಮ, ಮೂಡಲ್ಲಿ ಮೂರ್ತಿ, ಎಚ್.ಎಂ.ಬಸವಣ್ಣ, ಅರಕಲವಾಡಿ ನಾಗೇಂದ್ರ, ನಟರಾಜು, ಸುದರ್ಸನ್ ಮಮತಾ. ಬಾಲಸುಬ್ರಮಣ್ಯಂ. ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಬಾಲರಾಜು, ಕಮರಳ್ಳಿ ರವಿ ಆಗತಗೌಡನಹಳ್ಳಿ ಬಸವರಾಜು, ಮಹದೇವಪ್ರಸಾದ್ ನಮೋ ಮಂಜು, ಜಯಸುಂದರ್, ಚಂದ್ರು, ವಿರಾಟ್ ಶಿವು, ಮುತ್ತಿಗೆ ಮೂರ್ತಿ, ಕೂಡ್ಲೂರು ಶ್ರೀಧರ್ಮೂರ್ತಿ, ಜಿಡಿಎಲ್ ಸುರೇಶ, ಸೂರ್ಯ, ಶಿವಣ್ಣ, ಹರವೆ ಮಹದೇವಪ್ರಸಾದ್, ಶಿವಕುಮಾರ್, ಪದ್ಮ, ಸರಸ್ವತಮ್ಮ, ವನಜಾಕಿ, ದ್ರಾಕ್ಷಾಯಿಣ, ರಂಗಸ್ವಾಮಿ, ವಿರೇಂದ್ರ ಇತರರು ಭಾಗವಹಿಸಿದ್ದರು.