ಚಾ.ನಗರ ಸಾಂಸ್ಕೃತಿಕ, ಧಾರ್ಮಿಕ ಪರಂಪರೆ ಹೊಂದಿರುವ ಜಿಲ್ಲೆ: ಪುಟ್ಟಗೌರಮ್ಮChamarajanagar is a district with a rich cultural and religious heritage: Puttagauramma

KannadaprabhaNewsNetwork |  
Published : Jul 08, 2026, 01:45 AM IST
ನ | Kannada Prabha

ಸಾರಾಂಶ

ವಿದ್ಯಾರ್ಥಿಗಳು ಪಾಠ- ಪ್ರವಚನಗಳನ್ನು ಅಲಿಸುವ ಜೊತೆಗೆ ಜೀವನದಲ್ಲಿ ಶಿಸ್ತು ಮತ್ತು ಸಮಯ ಪರಿಪಾಲನೆಯನ್ನು ಬೆಳೆಸಿಕೊಳ್ಳಬೇಕು. ಶ್ರೀ ಮುರುಘ ರಾಜೇಂದ್ರ ಸ್ವಾಮಿ ವಿದ್ಯಾಸಂಸ್ಥೆಯು ಗುಣಾತ್ಮಕ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯವನ್ನು ಹೇಳಿಕೊಡುತ್ತಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಾಂಸ್ಕೃತಿಕ, ಧಾರ್ಮಿಕ ಪರಂಪರೆ ಹೊಂದಿರುವ ಚಾಮರಾಜನಗರ ಜಿಲ್ಲೆಯು ಶೈಕ್ಷಣಿಕವಾಗಿ ಹೆಚ್ಚು ಪ್ರಗತಿಯತ್ತ ಸಾಗುತ್ತಿರುವ ಜಿಲ್ಲೆಯಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟಗೌರಮ್ಮ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಮರಿಯಾಲ ಶ್ರೀ ಮುರುಘ ರಾಜೇಂದ್ರಸ್ವಾಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ೨೦೨೬-೨೭ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಯ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಕಲೆಗಳ ತವರೂರಾಗಿರುವ ಚಾಮರಾಜನಗರ ಜಿಲ್ಲೆಯು ವಿಭಿನ್ನ ಸಂಸ್ಕೃತಿ, ಆಚಾರ ವಿಚಾರವನ್ನು ಹೊಂದಿದೆ. ಅನೇಕ ಧಾರ್ಮಿಕ ಕೇಂದ್ರಗಳು ಹಾಗೂ ಮಠಮಾನ್ಯಗಳ ಪರಂಪರೆ ಜಿಲ್ಲೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಇಂಥ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಸೌಭಾಗ್ಯ ನನ್ನದಾಗಿದೆ. ಪ್ರಥಮವಾಗಿ ಜಿಲ್ಲೆಗೆ ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ದಿನವೇ ಶ್ರೀಮಠದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೆಮ್ಮೆ ಇದೆ. ಕಳೆದ ವರ್ಷವೂ ಸಹ ಕಾಲೇಜಿಗೆ ಶೇ. ೧೦೦ರಷ್ಟು ಫಲಿತಾಂಶ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ಪಾಠ- ಪ್ರವಚನಗಳನ್ನು ಅಲಿಸುವ ಜೊತೆಗೆ ಜೀವನದಲ್ಲಿ ಶಿಸ್ತು ಮತ್ತು ಸಮಯ ಪರಿಪಾಲನೆಯನ್ನು ಬೆಳೆಸಿಕೊಳ್ಳಬೇಕು. ಶ್ರೀ ಮುರುಘ ರಾಜೇಂದ್ರ ಸ್ವಾಮಿ ವಿದ್ಯಾಸಂಸ್ಥೆಯು ಗುಣಾತ್ಮಕ ಶಿಕ್ಷಣದ ಜೊತೆಗೆ ಸಂಸ್ಕಾರ ಮತ್ತು ಮೌಲ್ಯವನ್ನು ಹೇಳಿಕೊಡುತ್ತಿದೆ. ಇಂಥ ವಾತಾವರಣದಲ್ಲಿ ಬೆಳೆದ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ. ಕಳೆದ ೧೩ ವರ್ಷಗಳಿಂದಲೂ ಉತ್ತಮ ಫಲಿತಾಂಶ ನೀಡುತ್ತಾ ಬಂದಿರುವ ಉಪನ್ಯಾಸಕ ವರ್ಗದವರಿಗೆ ಹಾಗೂ ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಮುರುಘ ರಾಜೇಂದ್ರಸ್ವಾಮಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಶ್ರೀ ಇಮ್ಮುಡಿ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕಗಳಿಸಿ ವಿದ್ಯಾಸಂಸ್ಥೆಯ ಹಾಗೂ ಉಪನ್ಯಾಸಕರ ಶ್ರಮವನ್ನು ಸಾರ್ಥಕ ಪಡಿಸಬೇಕು. ಈ ಸಾಲಿನ ೨೦೨೬-೨೭ ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ರಾಜ್ಯದ ಸಾಧಕರ ಪಟ್ಟಿಯ ಸಾಲಿನಲ್ಲಿ ನಿಮ್ಮ ಹೆಸರು ಪ್ರಕಟವಾಗಬೇಕು ಎಂದು ಆಶಿಸಿದರು.

ಹಿರಿಯರು, ಗುರುಗಳಿಗೆ ಗೌರವ ಕೊಡುವುದರ ಮೂಲಕ ತಮ್ಮ ತಂದೆ- ತಾಯಿಗಳು ಮೆಚ್ಚುಗೆ ಪಡುವಂತಹ ವಿದ್ಯಾರ್ಥಿಗಳು ನೀವಾಗಬೇಕು. ಸನ್ನಡತೆ, ಉತ್ತಮ ಚಾರಿತ್ರ್ಯ, ಸದ್ಗುಣಗಳನ್ನು ಅಳವಡಿಸಿಕೊಳ್ಳಿ. ಕ್ರೀಡಾ ಮತ್ತು ಸಾಂಸ್ಕ್ರತಿಕ ವೇದಿಕೆಯು ಸುಪ್ತ ಪ್ರತಿಭೆಗಳಿಗೆ ವೇದಿಕೆಯಾಗಿದೆ. ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ತಾವು ದಕ್ಷ ಅಧಿಕಾರಿಗಳಾಗಿ ಸಂಸ್ಥೆಯ ಕೀರ್ತಿಯನ್ನು ಇಮ್ಮಡಿಗೊಳಿಸಬೇಕೆಂಬ ಆಶಯವನ್ನು ಶ್ರೀಗಳು ವ್ಯಕ್ತಪಡಿಸಿದರು.

ಉಮ್ಮತ್ತೂರಿನ ಲಿಂಗಪ್ಪ ಟ್ರೇಡರ್‍ಸ್ ನ ಮಾಲೀಕ ಶಿವಕುಮಾರ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಿದರು. ೨೦೨೫- ೨೬ನೇ ಸಾಲಿನಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು. ಕಳೆದ ಬಾರಿ ಶೇಕಡಾ ೧೦೦ ರಷ್ಟು ಫಲಿತಾಂಶ ನೀಡಿದ ಉಪನ್ಯಾಸಕರನ್ನು ಸನ್ಮಾನಿಸಿದರು.

ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪಿ. ಮಹದೇವಸ್ವಾಮಿ ವಹಿಸಿದ್ದರು. ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಮುಖ್ಯ ಅಧೀಕ್ಷಕರಾದ ಪಾರ್ವತಿ, ಉಮ್ಮತ್ತೂರು ಜೆ ಎಸ್ ಎಸ್ ಪ್ರೌಢಶಾಲೆ ಮುಖ್ಯಶಿಕ್ಷಕ ಮಲ್ಲರಾಜು, ಗ್ರಾನೈಟ್ ಉದ್ಯಮಿ ಗುರುಸಿದ್ದಯ್ಯ, ಮರಿಯಾಲ ಡೈರಿ ಅಧ್ಯಕ್ಷ ಮಹದೇವಸ್ವಾಮಿ, ನಿವೃತ್ತ ಕಾರ್ಯನಿರ್ವಹಣಾ ಅಧಿಕಾರಿ ಕಿರಗಸೂರು ಮಾದಪ್ಪ, ಚಿನ್ನಸ್ವಾಮಿ, ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರು, ಉಪನ್ಯಾಸಕ ಕೆ.ಸಿ. ಮಹೇಂದ್ರ, ಎಸ್. ಶಂಭು, ವಿದ್ಯಾರ್ಥಿಗಳಾದ ಮಾನಸ, ಐಶ್ವರ್ಯ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗಪಟ್ಟಣ: ಕಾವೇರಿ ನದಿಗಿಳಿದು ರೈತ ಮುಖಂಡರಿಂದ ಪ್ರತಿಭಟನೆ
ಬೈಕ್‌ಗಳ ನಡುವೆ ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ