ಹನೂರು ಹಿಂಸಾಚಾರ ಬಗ್ಗೆ ನಕ್ಸಲ್‌ ನಿಗ್ರಹ ದಳ ತನಿಖೆ?

Published : Aug 31, 2026, 10:08 AM IST
hanuru set fire

ಸಾರಾಂಶ

ಆ.15ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಶೂಟೌಟ್‌ ಪ್ರಕರಣ ಹೊಸ ಸ್ವರೂಪ ಪಡೆದಿದೆ. ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

 ಜಿ. ದೇವರಾಜು ನಾಯ್ಡು

 ಹನೂರು : ಆ.15ರಂದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಶೂಟೌಟ್‌ ಪ್ರಕರಣ ಹೊಸ ಸ್ವರೂಪ ಪಡೆದಿದೆ. ಗುಂಡಿನ ದಾಳಿ ತರುವಾಯ ಕಿಡಿಗೇಡಿಗಳು ಜಿಲೆಟಿನ್‌ ಕಡ್ಡಿ, ಡೈನಮೈಟ್‌ ಬಳಸಿ ಅರಣ್ಯ ಇಲಾಖೆ ಕಚೇರಿಗಳು, ಕಳ್ಳಬೇಟೆ ತಡೆ ಶಿಬಿರಗಳ ಮೇಲೆ ದಾಳಿ ನಡೆಸಿದ್ದ ಘಟನೆಯನ್ನು ನಕ್ಸಲ್‌ ನಿಗ್ರಹ ಪಡೆ (ಎಎನ್‌ಎಫ್‌) ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ನಡೆಸುವ ಸಾಧ್ಯತೆ ಹೆಚ್ಚಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸ್ಫೋಟಕ್ಕೆ ಜಿಲೆಟಿನ್‌ ಕಡ್ಡಿ ಹೇಗೆ ಬಂತು, ಯಾರು ಈ ಕೃತ್ಯದ ಹಿಂದಿದ್ದಾರೆಂಬ ಮಾಹಿತಿ ಕುರಿತು ಕೇಂದ್ರ ತನಿಖಾ ಪಡೆ ಈಗಾಗಲೇ ಹಲವು ಮಾಹಿತಿಯನ್ನು ಕಲೆ ಹಾಕಿದೆ ಎಂದು ಮೂಲಗಳು ತಿಳಿಸಿವೆ.

ಆ.15ರ ಗುಂಡಿನ ದಾಳಿ ಬಳಿಕ ಹನೂರು ತಾಲೂಕಿನ ಶಾಗ್ಯ ಅರಣ್ಯ ವ್ಯಾಪ್ತಿಯ ಹಲವು ಶಿಬಿರಗಳ ಮೇಲೆ ಕಿಡಿಗೇಡಿಗಳು ಜಿಲೆಟಿನ್‌ ಕಡ್ಡಿ, ಡೈನಮೈಟ್‌ ಇಟ್ಟು ಸ್ಫೋಟಗೊಳಿಸಿದ್ದರು. ಜೊತೆಗೆ ವನ್ಯಮೃಗಗಳು ಕಾಡು ತೊರೆದು, ನಾಡಿನತ್ತ ಬರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ನಿರ್ಮಿಸಿದ್ದ ಸೋಲಾರ್‌ ಬೇಲಿ, ಕಂಬಗಳು, ಗೇಟ್‌ಗಳನ್ನು ಹಾಳುಗೆಡವಿದ್ದರು. ಈ ಮೂಲಕ ಅನಿವಾರ್ಯವಾಗಿ ಗ್ರಾಮಗಳಿಗೆ ಬರುವ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಶಂಕೆಯನ್ನು ಅರಣ್ಯ ಇಲಾಖೆ ಮೂಲಗಳು ಕಳವಳ ವ್ಯಕ್ತಪಡಿಸಿತ್ತು.

ಎಎನ್‌ಎಫ್‌ಗೆ ಮರುಜೀವ:

ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆಗಳು ನಿಷ್ಕ್ರಿಯಗೊಂಡ ಬಳಿಕ ರಾಜ್ಯ ಸರ್ಕಾರವು ನಕ್ಸಲ್‌ ನಿಗ್ರಹ ಪಡೆಯನ್ನು ನಿಷ್ಕ್ರಿಯಗೊಳಿಸಿತ್ತು. ಈಗ ಹನೂರು ಘಟನೆ ಹಿಂದೆ ನಕ್ಸಲ್‌ ಪರ ಒಲವುಳ್ಳ ಹಲವು ಸಂಘಟನೆಗಳ ಪಾತ್ರ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಎನ್‌ಎಫ್‌ ಪಡೆಯನ್ನು ಮತ್ತೆ ಸಕ್ರಿಯಗೊಳಿಸಿ ತನಿಖೆ ಹೊಣೆ ಹೊರಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ಸ್ಫೋಟಕ್ಕೆ ಜಿಲೆಟಿನ್‌ ಕಡ್ಡಿಗಳು ಹೇಗೆ ಸಿಕ್ಕವು, ಕ್ಯಾಂಪ್‌ಗೆ ತಂದು ಧ್ವಂಸಗೊಳಿಸಿದ್ದು ಯಾರು ಎಂಬುದರ ಕುರಿತು ಇಂಚಿಂಚೂ ಮಾಹಿತಿ ಕಲೆ ಹಾಕಲು ಸಿಐಡಿ ಬಳಿಕ ಎಎನ್‌ಎಫ್‌ ಕಾರ್ಯಪ್ರವೃತ್ತವಾಗಲಿದೆ. ಅರಣ್ಯ ಪ್ರದೇಶವು ಕೇಂದ್ರದ ಅಧೀನಕ್ಕೂ ಒಳಪಟ್ಟಿರುವ ಕಾರಣ ಸಿಐಡಿ ತನಿಖೆ ಬಳಿಕ ಎನ್‌ಐಎ ತನ್ನ ತೆಕ್ಕೆಗೆ ತೆಗೆದುಕೊಂಡು ರಾಷ್ಟ್ರ ವಿರೋಧಿ ಕೃತ್ಯಗಳು ಇದರಲ್ಲಿ ಅಡಗಿವೆಯೇ ಎಂಬುದನ್ನು ತನಿಖೆ ನಡೆಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ತನಿಖೆ ಪ್ರಗತಿ:

ಈ ಮಧ್ಯೆ ತನಿಖೆಯ ಹೊಣೆ ಹೊತ್ತಿರುವ ಸಿಐಡಿ, ವಿವಿಧ ಆಯಾಮಗಳಲ್ಲಿ ಪ್ರಕರಣದ ಮಾಹಿತಿ ಅರಸುತ್ತಿದೆ. ಒಟ್ಟು ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ ಸಿಐಡಿ ಅಧಿಕಾರಿಗಳು ಅಖಾಡದಲ್ಲಿದ್ದಾರೆ. ಮೃತರ ಮನೆಗಳಿಗೆ ತೆರಳಿ ವಿಚಾರಣೆ, ಆ.15ರಂದು ಗುಂಡಿನ ಚಕಮಕಿಯಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಮಹಿಮಾದಾಸ್‌ನನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವಾರದಲ್ಲಿ ಸಿಐಡಿ ತನಿಖೆ ಮುಕ್ತಾಯಗೊಳ್ಳಬಹುದು ಎನ್ನಲಾಗಿದೆ.

PREV
Get the latest news from Chamarajanagar district (ಚಾಮರಾಜನಗರ ಸುದ್ದಿ) — covering local developments, environment and wildlife, civic issues, politics, culture, tourism, agriculture and community stories. Stay updated with timely headlines and in-depth coverage from Chamarajanagar on Kannada Prabha.
Read more Articles on

Recommended Stories

ಉಪ್ಪಾರರ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲಿ: ಸಚಿವ ಪುಟ್ಟರಂಗಶೆಟ್ಟಿ
ಸರ್ಕಾರಿ ಕಟ್ಟೆಯಲ್ಲಿನ ಮನೆ, ಹೋಟೆಲ್‌ ನೆಲಸಮ