ಉದ್ಯಮಿಗಳು ತಾಲೂಕಿನ ಹಿರೀಕಾಟಿ ಸರ್ಕಾರಿ ಕಟ್ಟೆಯನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದ ಒತ್ತುವರಿ ಜಾಗದಲ್ಲಿದ್ದ ಹೋಟೆಲ್‌ ಹಾಗೂ ವಾಸದ ಮನೆಗಳ ಜೆಸಿಬಿ ತೆರವು ಕಾರ್ಯ ೩ನೇ ದಿನವೂ ಮುಂದುವರಿಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಉದ್ಯಮಿಗಳು ತಾಲೂಕಿನ ಹಿರೀಕಾಟಿ ಸರ್ಕಾರಿ ಕಟ್ಟೆಯನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದ ಒತ್ತುವರಿ ಜಾಗದಲ್ಲಿದ್ದ ಹೋಟೆಲ್‌ ಹಾಗೂ ವಾಸದ ಮನೆಗಳ ಜೆಸಿಬಿ ತೆರವು ಕಾರ್ಯ ೩ನೇ ದಿನವೂ ಮುಂದುವರಿಸಿದೆ.

ತಾಲೂಕಿನ ಹಿರೀಕಾಟಿ ಸ.ನಂ.೧೯೯ರಲ್ಲಿ ೧.೨೧ ಎಕರೆ ಪ್ರದೇಶದ ಸರ್ಕಾರಿ ಕಟ್ಟೆಯ ಸ್ಥಳವನ್ನು ಕಳೆದ ಎರಡು ದಶಕಗಳಿಂದಲೂ ಒತ್ತುವರಿ ಮಾಡಿಕೊಂಡ ಕ್ರಸರ್‌ ರಸ್ತೆ, ಹೋಟೆಲ್‌ ಹಾಗೂ ವಾಸದ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಕನ್ನಡಪ್ರಭ ವರದಿ ಪ್ರಕಟಿಸಿ ತಾಲೂಕು ಅಡಳಿತದ ಗಮನ ಸೆಳೆದಿತ್ತು.

ತಹಸೀಲ್ದಾರ್‌ ಎಂ.ಎಸ್.ತನ್ಮಯ್‌ ಕಳೆದ ಆ.೨೮ ರ ಶುಕ್ರವಾರ ಒತ್ತುವರಿ ತೆರವಿಗೆ ಚಾಲನೆ ಕೊಟ್ಟ ನಂತರ ಶನಿವಾರ ಹಾಗೂ ಭಾನುವಾರ ಸರ್ಕಾರಿ ಕಟ್ಟೆ ಜಾಗದಲ್ಲಿದ್ದ ಹೋಟೆಲ್‌ ಹಾಗೂ ವಾಸದ ಮನೆಯ ಕಟ್ಟಡಗಳನ್ನು ಬೇಗೂರು ರಾಜಸ್ವ ನಿರೀಕ್ಷಕ ಉಲ್ಲಾಸ್‌ ಹಾಗೂ ಹಿರೀಕಾಟಿ ಗ್ರಾಮ ಆಡಳಿತ ಅಧಿಕಾರಿ ವಿನಯ್‌ ಕುಮಾರ್‌ ಖುದ್ದು ನಿಂತು ಜೆಸಿಬಿ ಯಂತ್ರಗಳ ಮೂಲಕ ವಾಸದ ಮನೆ, ಹೋಟೆಲ್‌ ಕಟ್ಟಡಗಳನ್ನು ನೆಲಸಮಗೊಳಿಸಿದರು.

ಹಿರೀಕಾಟಿ ಸ.ನಂ.೧೯೯ ರ ಸರ್ಕಾರಿ ಕಟ್ಟೆಯ ಜಾಗದ ಮೂಲಕವೇ ಕ್ರಷರ್‌ಗೆ ರಸ್ತೆ ಮಾಡಿಕೊಂಡು ಕ್ರಷರ್‌ ಮಾಲೀಕರು ಎರಡು ದಶಕಗಳಿಗೂ ಹೆಚ್ಚು ಕಾಲ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದರು.

ಹಿರೀಕಾಟಿ ಸರ್ಕಾರಿ ಕಟ್ಟೆ ೧.೨೧ ಎಕರೆ ಪ್ರದೇಶದ ಸುತ್ತಲೂ ಜೆಸಿಬಿ ಯಂತ್ರದ ಮೂಲಕ ಕಂಬ ನೆಡಿಸಲಾಗಿದ್ದು, ಕ್ರಷರ್‌ಗೆ ರಸ್ತೆ ಇಲ್ಲದಂತಾಗಿದೆ. ಸದ್ಯಕ್ಕೀಗ ಕಟ್ಟೆಯ ಸುತ್ತ ಕಂಬದ ಮೂಲಕ ಒತ್ತುವರಿದಾರರಿಗೆ ಕಂದಾಯ ಇಲಾಖೆ ಶಾಕ್‌ ಕೊಟ್ಟಿದೆ.

ಹಿರೀಕಾಟಿ ಸ.ನಂ.೧೯೯ರಲ್ಲಿ ೧.೨೧ ಎಕರೆ ಸರ್ಕಾರಿ ಕಟ್ಟೆ ಒತ್ತುವರಿಯಾಗಿತ್ತು. ಒತ್ತುವರಿ ಸರ್ವೆಯಲ್ಲೂ ದೃಢಪಟ್ಟಿದೆ. ೩ನೇ ದಿನದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಸರ್ಕಾರಿ ಕಟ್ಟೆಯೊಳಗಿದ್ದ ರಸ್ತೆ ಹಾಗೂ ೨ ವಾಸದ ಮನೆ,೧ ಹೋಟೆಲ್‌ ಹಾಗೂ ೩ ಲೇಬರ್‌ ಕ್ವಾಟ್ರಸ್‌ ಕಟ್ಟಡಗಳ ನೆಲಸಮವಾಗಿದೆ. ಒತ್ತುವರಿ ತೆರವುಗೊಳಿಸಿದ್ದು, ತಹಸೀಲ್ದಾರ್‌ಗೆ ಸೋಮವಾರ ವರದಿ ಸಲ್ಲಿಸಲಾಗುವುದು. ಒತ್ತುವರಿ ತೆರವಾದ ಕಟ್ಟೆಯನ್ನು ಹೊರೆಯಾಲ ಗ್ರಾಪಂಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಗ್ರಾಮ ಆಡಳಿತ ಅಧಿಕಾರಿ ವಿನಯ್‌ ಕುಮಾರ್ ಹೇಳಿದ್ದಾರೆ.

‘ಕನ್ನಡಪ್ರಭʼ ವರದಿಗೆ ಜನರ ಮೆಚ್ಚುಗೆ

ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಬಳಿ ಸ.ನಂ.೧೯೯ರಲ್ಲಿ ೧.೨೧ ಎಕರೆ ಸರ್ಕಾರಿ ಕಟ್ಟೆಯನ್ನು ಉದ್ಯಮಿಗಳು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದ ಕಟ್ಟೆ ಜಾಗದ ಉಳಿಯಲು ಕನ್ನಡಪ್ರಭ ಕಾರಣವಾಗಿದ್ದಕ್ಕೆ ಹಿರೀಕಾಟಿ,ಚಿಕ್ಕಾಟಿ ಸುತ್ತಮುತ್ತಲಿನ ರೈತರು ಕನ್ನಡಪ್ರಭಕ್ಕೆ ಮೆಚ್ಚುಗೆಯ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ಪತ್ರಿಕೆಯಲ್ಲಿ ನಿರಂತರ ವರದಿ ಬಂದ ಪರಿಣಾಮ ಎಚ್ಚೆತ್ತು ತಹಸೀಲ್ದಾರ್‌ ಎಂ.ಎಸ್.ತನ್ಮಯ್‌, ಬೇಗೂರು ಕಂದಾಯ ನಿರೀಕ್ಷಕ ಉಲ್ಲಾಸ್‌,ಹಿರೀಕಾಟಿ ಗ್ರಾಮ ಆಡಳಿತ ಅಧಿಕಾರಿ ವಿನಯ್‌ ಕುಮಾರ್‌ ಒತ್ತುವರಿ ತೆರವಿಗೆ ಮುಂದಾದ ಪರಿಣಾಮ ಎರಡು ದಶಕಗಳಿಂದ ಉದ್ಯಮಿಗಳ ಪಾಲಾಗಿದ್ದ ಕಟ್ಟೆ ಜಾಗ ಉಳಿದಿದೆ ಎಂದು ರೈತರು ಕನ್ನಡಪ್ರಭ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.