ಚಂಪೂ ಸರೋವರದ ಭಕ್ತಿಯ ಅಲೆಗಳು, ಪರಿಶೋಧ ಕೃತಿ ಬಿಡುಗಡೆ

KannadaprabhaNewsNetwork |  
Published : Dec 15, 2025, 03:45 AM IST
 | Kannada Prabha

ಸಾರಾಂಶ

ಚಂಪೂ ಸರೋವರದ ಭಕ್ತಿಯ ಅಲೆಗಳು ಮತ್ತು ಪರಿಶೋಧ ಎಂಬ ಎರಡು ಕೃತಿಗಳನ್ನು ಕನ್ನಡ ಪ್ರಾಧ್ಯಾಪಕ ಪ್ರೊ. ಮಣಿ ಪಿ ಬಿಡುಗಡೆ ಮಾಡಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕರಾದ ಡಾ. ಪ್ರಭು ಡಿ ರವರು ರಚಿಸಿದ ಚಂಪೂ ಸರೋವರದ ಭಕ್ತಿಯ ಅಲೆಗಳು ಮತ್ತು ಪರಿಶೋಧ ಎಂಬ ಎರಡು ಕೃತಿಗಳನ್ನು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಮಣಿ ಪಿ ರವರು ಬಿಡುಗಡೆ ಮಾಡಿದರು.

ಡಾ. ಪಿ ಮಣಿ ಮಾತನಾಡಿ ಪ್ರಾಚೀನ ಸಾಹಿತ್ಯದಲ್ಲಿ ಆಗಮಿಕ ಕಾವ್ಯಗಳಲ್ಲಿ ಭಕ್ತಿಯ ಪ್ರಧಾನವಾದ ಅಂಶ. ಆದರೆ ಅಲೌಕಿಕ ಕಾವ್ಯಗಳಲ್ಲಿ ಭಕ್ತಿ ವಿಶೇಷವಾದುದು. ಈ ಕೃತಿಯಲ್ಲಿ ಭಕ್ತಿ ಪರಂಪರೆಯನ್ನು ಬೌದ್ಧ ಧರ್ಮದಿಂದ ಆರಂಭಿಸಿ ಹರಿದಾಸರವರೆಗೂ ಹಾದು ಬಂದ ಬಗೆಯನ್ನು ಅಮೂಲಾಗ್ರವಾಗಿ ತಿಳಿಸಲಾಗಿದೆ. ಪಂಪ, ಪೊನ್ನ, ರನ್ನರಂತಹ ಪ್ರಮುಖ ಕವಿಗಳ ಕಾವ್ಯಗಳನ್ನು ಉಲ್ಲೇಖಿಸಿ, ದಶವಿಧ ಭಕ್ತಿಯನ್ನು ವಿವರಿಸಿರುವುದು ಪರಿಣಾಮಕಾರಿಯಾದದ್ದು. ವಚನ ಮತ್ತು ಕೀರ್ತನ ಸಾಹಿತ್ಯವನ್ನು ಚಂಪೂ ಕಾವ್ಯದಲ್ಲಿ ಮೂಡಿದ ಭಕ್ತಿಯ ಪರಂಪರೆಯನ್ನು ತೌಲನಿಕವಾಗಿ ಚರ್ಚಿಸಿದ್ದು ಚಂಪೂ ಸರೋವರದ ಭಕ್ತಿಯ ಅಲೆಗಳು ಕೃತಿಯ ಬಹು ಮುಖ್ಯ ಭಾಗವಾಗಿದೆ.ಇವರ ಪರಿಶೋಧ ಕೃತಿಯು ಸಾಹಿತ್ಯ, ಇತಿಹಾಸ, ಸಂಸ್ಕೃತಿಯ ಚಿಂತನೆಯೊಂದಿಗೆ ಸಂಶೋಧನಾತ್ಮಕ ಲೇಖನಗಳಿಂದ ಕೂಡಿದೆ. ಈ ಕೃತಿಯು ಹಳಗನ್ನಡ ಕಾವ್ಯಗಳು ಮತ್ತು ಶಾಸನಗಳ ಪರಿಶೀಲನೆಯನ್ನು ಒಳಗೊಂಡಿದೆ ಎಂದು ಪ್ರೊ.ಮಣಿಯವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಸರಸ್ವತಿ ಡಿ.ಕೆ ಅವರು ಮಾತನಾಡಿ, ಇವರ ಲೇಖನಗಳು ಆಧಾರ ಸಹಿತವಾಗಿ ಚರ್ಚಿಸಿದ್ದು ಸಂಶೋಧನಾ ನಿಷ್ಠೆಯನ್ನು ಮನಗಾಣಿಸುತ್ತವೆ. ಪರಿಶೋಧ ಕೃತಿಯು ಹಳಗನ್ನಡ ಕಾವ್ಯಗಳ ಸಂಶೋಧನೆ ಮಾಡುವವರಿಗೆ ಉಪಯುಕ್ತ ಕೃತಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ನೇತ್ರಾವತಿ, ಕನ್ನಡ ಪ್ರಾಧ್ಯಾಪಕರಾದ ಪ್ರೊ. ಬಸವರಾಜು.ಕೆ ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ರಘುರಾಜು ಆರ್ ಅವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!