ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
- ಇವು ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ಶನಿವಾರ ರಾತ್ರಿ ನಡೆದ ಜಲಪಾತೋತ್ಸವದಲ್ಲಿ ಕಂಡು ಬಂದ ರಮಣೀಯ ದೃಶ್ಯಗಳು. ಜಲಪಾತೋತ್ಸವದ ಅಂಗವಾಗಿ ಕಾವೇರಿ ಜಲಪಾತಕ್ಕೆ ಮಾಡಲಾಗಿದ್ದ ಬಗೆ ಬಗೆಯ ವಿದ್ಯುತ್ ದೀಪಾಲಂಕಾರ ಜಗಮಗಿಸಿ ದುಮ್ಮಿಕ್ಕುತ್ತಿದ್ದ ಜಲ ವೈಭವ ಧರೆಗೆ ದೇವಗಂಗೆ ಬಂದಂತೆ ಬಾಸವನ್ನುಂಟು ಮಾಡಿತ್ತು. ಹತ್ತಾರು ಬಗೆಯ ದೀಪಗಳ ಬೆಳಕಿನಿಂದ ಜಲಪಾತದಲ್ಲಿ ನೀರು ಹರಿಯುತ್ತಿದ್ದ ದೃಶ್ಯ ಚಿತ್ತಾರ ಲೋಕವನ್ನು ಸೃಷ್ಠಿಸಿ ಹಾಲ್ನೊರೆಯ ಜಲಪಾತದ ಮನ ಮೋಹಕ ದೃಶ್ಯಗಳು ಎಲ್ಲರ ಮನಸ್ಸಿಗೂ ಮುದ ನೀಡಿದವು.
ಕಳೆದ ನಾಲ್ಕು ವರ್ಷಗಳಿಂದ ವಿವಿಧ ಕಾರಣಗಳಿಂದ ಸ್ಥಗಿತವಾಗಿದ್ದ ಕಾವೇರಿ ಜಲಪಾತೋತ್ಸವ ಈ ಭಾರಿ ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದರಿಂದ ಸಾವಿರಾರು ಮಂದಿ ಭಾಗವಹಿಸಿ ಜಲಪಾತದ ರುದ್ರ ರಮಣೀಯ ದೃಶ್ಯಗಳು ಮತ್ತು ದೀಪಾಲಂಕಾರ ಕಂಡು ಎಲ್ಲರೂ ಸಂತಸಗೊಂಡರು.ಬಸವಯ್ಯ ಮತ್ತು ತಂಡದಿಂದ ಜರುಗಿದ ಜನಪದ ಝೇಂಕಾರ, ಕನ್ನಡ ಸಂಗೀತ ವೈಭವ, ಖ್ಯಾತ ಗಾಯಕ ರಘು ದೀಕ್ಷಿತ್ ತಂಡದಿಂದ ನಡೆದ ಸಂಗೀತ ಸಂಜೆ, ವಿವಿದ ಕಲಾವಿದರು ನೀಡಿದ ವೈವಿಧ್ಯ ಕಾರ್ಯಕ್ರಮಗಳು ಸಂಗೀತದ ರಸದೌತಣ ಉಣ ಬಡಿಸಿತು.