ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಚಂದನಾ ಆಯ್ಕೆ

KannadaprabhaNewsNetwork | Published : Aug 13, 2024 12:46 AM

ಸಾರಾಂಶ

ಬರುವ ಆ.15ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಲೂಕಿನ ಮಾಸಣಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಚಂದನಾ ಕೆಪ್ಪಲಿಂಗಣ್ಣನವರ ಅವರಿಗೆ ಆಹ್ವಾನ ಲಭಿಸಿದೆ.

ಬ್ಯಾಡಗಿ: ಬರುವ ಆ.15ರಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಲಿರುವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಾಲೂಕಿನ ಮಾಸಣಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಚಂದನಾ ಕೆಪ್ಪಲಿಂಗಣ್ಣನವರ ಅವರಿಗೆ ಆಹ್ವಾನ ಲಭಿಸಿದೆ.

ಭಾರತ ಸರ್ಕಾರದ ನವೋದಯ ವಿದ್ಯಾಲಯ ಸಮಿತಿ ಶಿಕ್ಷಾ ಮಂತ್ರಾಲಯದ ಮೂಲಕ ಚಂದನಾಳಿಗೆ ಆಹ್ವಾನ ಬಂದಿದ್ದು ಪ್ರಸ್ತುತ ಮಾಸಣಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ಧಾಳೆ. ಗುಜರಾತನ ವಡಾನಗರದ ಜವಾಹರ ನವೋದಯ ವಿದ್ಯಾಲಯದಲ್ಲಿ ಕಳೆದ ಮೇ.13 ರಿಂದ 17 ರವರೆಗೆ ಜರುಗಿದ ರಾಷ್ಟ್ರಮಟ್ಟದ ಪ್ರೇರಣಾ ಉತ್ಸವದಲ್ಲಿ ಪಾಲ್ಗೊಂಡಿದ್ದ ಚಂದನಾ ಆಯ್ಕೆಪ್ರಕ್ರಿಯೆಯಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಚಂದನಾಳನ್ನು ರಾಷ್ಟ್ರಮಟ್ಟಕ್ಕೆ ಪರಿಗಣಿಸಲ್ಪಟ್ಟಿದ್ದಳು, ಇವೆಲ್ಲ ಕಾರಣಗಳಿಂದ ಇದೀಗ ದೆಹಲಿಗೆ ಆಹ್ವಾನ ದೊರೆತಿದೆ.

ಶಾಲೆಯಲ್ಲಿ ಸಂತಸದ ವಾತಾವರಣ: ಮೊದಲ ಬಾರಿ ಅವಕಾಶ ಲಭಿಸಿದ್ದು, ಶಿಕ್ಷಕ ಸಿಬ್ಬಂದಿಗಳು ಸೋಮವಾರ ಬೀಳ್ಕೊಡುಗೆ ಸಮಾರಂಭವನ್ನು ಶಾಲೆಯಲ್ಲಿ ಏರ್ಪಡಿಸಿದ್ದರು. ವಿದ್ಯಾರ್ಥಿನಿ ಚಂದನಾ ರೈಲ್ವೆ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದಳು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ಮುಖ್ಯಶಿಕ್ಷಕ ಎಂ.ಡಿ. ಮೋಮಿನ್, ಸಹಶಿಕ್ಷಕರಾದ ಎಸ್.ಬಿ.ಇಮ್ಮಡಿ, ಎ.ಬಿ. ತಳಮನಿ, ಸುಭಾಸ್ ಕುರಕುಂದಿ, ಎಸ್. ಉಮಾದೇವಿ, ಶಿವಕುಮಾರ ಹನಗೋಡಿಮಠ ಸೇರಿದಂತೆ ವಿದ್ಯಾರ್ಥಿನಿಯ ಪಾಲಕರು ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಚಂದನಾಳಿಗೆ ಶುಭ ಕೋರಿ ಬೀಳ್ಕೊಟ್ಟರು.ಚಂದನಾ ಕೆಪ್ಪಲಿಂಗಣ್ಣನವರ ಸಾಧನೆ ಅತ್ಯಂತ ಸಂತಸ ತಂದಿದೆ, ತನ್ನಲ್ಲಿರುವ ಸೂಪ್ತ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಅತ್ಯುತ್ತಮ ಸಾಧನೆ ತೋರಿದ್ದಾಳೆ, ಬ್ಯಾಡಗಿ ಮತ ಕ್ಷೇತ್ರದಿಂದ ಇಂತಹ ಪ್ರತಿಭೆ ಗುರ್ತಿಸಿದ್ದು ಅವಳಿಗೆ ಶುಭ ಕೋರುತ್ತೇನೆ ಎಂದು ಶಾಸಕ ಬಸವರಾಜ ಶಿವಣ್ಣವರ ಹೇಳಿದರು.

Share this article