ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಬಿಎಸ್‌ವೈ ಕುಟುಂಬದಿಂದ ಚಂಡಿಕಾ ಹೋಮ

KannadaprabhaNewsNetwork |  
Published : Mar 25, 2024, 12:48 AM IST
ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಚಂಡಿಕಾ ಹೋಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬಸ್ಥರು ಭಾಗಿಯಾಗಿರುವುದು.  | Kannada Prabha

ಸಾರಾಂಶ

ಶಕ್ತಿ ದೇವತೆ ಶ್ರೀ ಆಧಿಶಕ್ತ್ಯಾತ್ಮಕ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದವರಿಂದ ಭಾನುವಾರ ಚಂಡಿಕಾ ಹೋಮ ನಡೆಯಿತು.

ಬೆಳಿಗ್ಗೆ 6.30 ರಿಂದ 10.30 ರವರೆಗೆ ಪೂಜೆ ಸಲ್ಲಿಕೆ । ಹೋಳಿ ಹುಣ್ಣಿಮೆ ಹಿಂದಿನ ದಿನ ಪೂಜೆ

ಕನ್ನಡಪ್ರಭ ವಾರ್ತೆ, ಮೂಡಿಗೆರೆಶಕ್ತಿ ದೇವತೆ ಶ್ರೀ ಆಧಿಶಕ್ತ್ಯಾತ್ಮಕ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬದವರಿಂದ ಭಾನುವಾರ ಚಂಡಿಕಾ ಹೋಮ ನಡೆಯಿತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸೊಸೆ ಮತ್ತು ಪುತ್ರಿ ಶನಿವಾರ ರಾತ್ರಿಯೇ ಹೊರನಾಡಿಗೆ ಬಂದು ತಂಗಿದ್ದರು. ಭಾನುವಾರ ಬೆಳಿಗ್ಗೆ 6 ಗಂಟೆ ವೇಳೆಗೆ ಎಲ್ಲರೂ ದೇವಾಲಯಕ್ಕೆ ಆಗಮಿಸಿದರು. ರಾಹುಕಾಲ ಕಳೆಯುತ್ತಿದ್ದಂತೆ ಅಂದರೆ ಬೆಳಿಗ್ಗೆ 6.30 ಕ್ಕೆ ಚಂಡಿಕಾ ಹೋಮ ಆರಂಭಗೊಂಡಿತು. ಶತ್ರು ನಿವಾರಣೆಗಾಗಿ ಮಾಡುವ ಹೋಮ ಇದಾಗಿದೆ. ಬೆಳಿಗ್ಗೆ 10.30 ರ ವೇಳೆಗೆ ಪೂರ್ಣಾಹುತಿ ನಡೆಯಿತು. ಹುಣ್ಣಿಮೆ ಹಿಂದಿನ ದಿನ ಪೂಜೆ ನೆರವೇರಿಸಿರುವುದು ಅತ್ಯಂತ ಶ್ರೇಷ್ಠ ದಿನ ಎಂದು ಹೇಳಲಾಗುತ್ತಿದೆ. ಶ್ರೀ ಕ್ಷೇತ್ರದ ಪುರೋಹಿತರು ಪೂಜಾ ಕೈಂಕರ್ಯ ನೆರವೇರಿಸಿದರು. ಕ್ಷೇತ್ರದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಅವರು ಅಮ್ಮನವರ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ರಾಜಲಕ್ಷ್ಮೀ ಭೀಮೇಶ್ವರ ಜೋಷಿ, ಅಂಕರಕಣ ದೇವಾಲಯದ ಧರ್ಮಕರ್ತರಾದ ರಾಮ ನಾರಾಯಣ್ ಜೋಷಿ, ವ್ಯವಸ್ಥಾಪಕರಾದ ಶೇಷಾದ್ರಿ, ರಾಘವೇಂದ್ರ ಇದ್ದರು. ಹೊರನಾಡಿನಿಂದ ವಾಪಸ್ ತೆರಳುವ ಸಂದರ್ಭದಲ್ಲಿ ದಕ್ಷಿಣ ಕಾಶಿ ಎಂದೇ ಖ್ಯಾತಿಯಾದ ಶ್ರೀ ಕಳಸೇಶ್ವರ ದೇಗುಲಕ್ಕೆ ಬಿಎಸ್‌ವೈ ಕುಟುಂಬಸ್ಥರು ಭೇಟಿ ನೀಡಿ ದೇವರ ದರ್ಶನ ಪಡೆದರು.

-- ಬಾಕ್ಸ್--28 ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ:ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಹೊರನಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಎನ್.ಡಿ.ಆರ್.ಎಫ್‌ ಹಣದ ವಿಚಾರವಾಗಿ ನಾನು ಏನನ್ನು ಮಾತನಾಡುವುದಿಲ್ಲವೆಂದ ಅವರು, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಗಾಗಿ ಪೂಜೆ ಸಲ್ಲಿಸಿದ್ದೇವೆ. ದೇವಿಯ ಮುಂದೆ ರಾಜ್ಯದ ಸಮೃದ್ಧಿಗಾಗಿ ಪ್ರಾರ್ಥನೆ ಮಾಡಿದ್ದೇನೆಂದು ಹೇಳಿದರು. ದೇವರ ದರ್ಶನ ಪಡೆದು ತುಂಬಾ ದಿನವಾಗಿತ್ತು. ಹಾಗಾಗಿ ಇಂದು ಹೊರನಾಡಿಗೆ ಬಂದು ಪೂಜೆ ಸಲ್ಲಿಸಿರುವೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಚುನಾವಣೆ ಇದಾಗಿದೆ. ತಾಯಿಯ ಆಶೀರ್ವಾದದಿಂದ ನಾವು ಯಶಸ್ವಿ ಯಾಗುತ್ತೇವೆಂದು ಹೇಳಿದರು.

-- ಬಾಕ್ಸ್‌--

ಕೆಟ್ಟ ಪರಿಸ್ಥಿತಿ ಸಿಎಂಗೆ ಬರಬಾರದಿತ್ತು:ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿಗೆ ಮತ್ತಷ್ಟು ಶಕ್ತಿ ಬರಲಿ, ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆದ್ದು ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು. ಅದಕ್ಕಾಗಿ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ವಿಜಯೇಂದ್ರ ಹೇಳಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ ಡಿ ಆರ್ ಎಫ್‌ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಮೊರೆಹೋಗಿರುವ ಕುರಿತು ಕೇಳಿದಾಗ ಇಂತ ಕೆಟ್ಟ ಪರಿಸ್ಥಿತಿ ರಾಜ್ಯದ ಮುಖ್ಯಮಂತ್ರಿಗೆ ಬರಬಾರದಿತ್ತು. ಸರ್ಕಾರ ತನ್ನ ವೈಪಲ್ಯ ಮುಚ್ಚಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿದೆ. ಚುನಾವಣೆ ಘೋಷಣೆ ಬಳಿಕ ಸುಪ್ರೀಂ ಮೊರೆ ಹೋಗುವ ಡ್ರಾಮಾವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅವರಿಗೆ ಶೋಭೆ ತರುವುದಿಲ್ಲವೆಂದು ಹೇಳಿದರು. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಣಕಾಸಿನ ವ್ಯವಸ್ಥೆ ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ, ನಾವು ಸೋತಿದ್ದೇವೆ ಎಂದು ಕೇಂದ್ರಕ್ಕೆ ಹೋಗಿ ಒತ್ತಾಯ ಮಾಡಿದರೆ ಬೇರೆ ಮಾತು. ಬಿಜೆಪಿಯವರ ಮನೆ ಹಾಳಾಗ ಎಂಬ ಸಿದ್ದು ಹೇಳಿಕೆಗೆ ವಿಜಯೇಂದ್ರ ಕಿಡಿಕಾರಿದರು. ವಿನಾಶ ಕಾಲೇ ವಿಪರೀತ ಬುದ್ಧಿ ಅಷ್ಟೆ ಎಂದು ತಿಳಿಸಿದರು. ಸೋಲನ್ನು ಎದುರು ನೋಡುತ್ತಿರುವ ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡುತ್ತಿದೆ. ಸೋಲಿನ ಹತಾಶೆಯಿಂದ ವಿವಿಧ ರೀತಿ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

24 ಕೆಸಿಕೆಎಂ 4ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಚಂಡಿಕಾ ಹೋಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕುಟುಂಬಸ್ಥರು ಭಾಗಿಯಾಗಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!