ಮೂಡುಬಿದಿರೆ: ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಕಂಬಳ ಸಮಿತಿ ನೂತನ ಅಧ್ಯಕ್ಷರಾಗಿ ಮೂಡುಬಿದಿರೆಯ ಹೊಸಬೆಟ್ಟು ಏರಿಮಾರು ಬರ್ಕೆಯ ಚಂದ್ರಹಾಸ್ ಸಾಧು ಸನಿಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರೆಂಜಾಳ ವಿದ್ಯಾಧರ್ ಜೈನ್ ಅವಿರೋಧ ಆಯ್ಕೆಯಾಗಿದ್ದಾರೆ.ಭಾನುವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯಲ್ಲಿ 2026-29ನೇ ಸಾಲಿನ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ 2026-27ರ ಕಂಬಳ ಋತುವಿನ ತಾತ್ಕಾಲಿಕ ವೇಳಾಪಟ್ಟಿಯ ಕುರಿತು ಚರ್ಚಿಸಿ ರೂಪುರೇಷೆ ಸಿದ್ಧಪಡಿಸಲಾಯಿತು. ಜಿಲ್ಲಾ ಮಟ್ಟದ ಅಧಿಕೃತ ಕಂಬಳಗಳ ಪಟ್ಟಿಗೆ ಸೇರ್ಪಡೆಗಾಗಿ ಬಂದಿರುವ ಹೊಸ ಅರ್ಜಿಗಳ ಕುರಿತು ಪರಿಶೀಲನೆ ನಡೆಸಲಾಯಿತು.
ಮೈಸೂರು ದಸರಾ ಅಂಗವಾಗಿ ಅ. 17 ಮತ್ತು 18ರಂದು ಕಂಬಳ ಆಯೋಜಿಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದ್ದು, ಕರಾವಳಿ ಸಂಸ್ಕೃತಿಯ ಪ್ರತೀಕವಾದ ಕಂಬಳವನ್ನು ಪ್ರವಾಸೋದ್ಯಮದ ಬ್ರ‍್ಯಾಂಡ್ ಆಗಿ ಬೆಳೆಸುವ ಯೋಜನೆಯೂ ರೂಪುಗೊಳ್ಳುತ್ತಿದೆ ಎಂದರು. ಮುಂದಿನ ವರ್ಷದಿಂದ ಕಂಬಳಕ್ಕೆ ವಾರ್ಷಿಕ 5 ಕೋಟಿ ರು. ಅನುದಾನ ನೀಡುವ ಕುರಿತು ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ ಎಂದರು.ಈ ಬಾರಿ ಡಿ. 26ರಂದು ಮೂಲ್ಕಿಯಲ್ಲಿ ಸಾಂಪ್ರದಾಯಿಕ ಕಂಬಳ ನಡೆಯಲಿದ್ದು, ಹರೇಕಳ, ಸಾಣೂರು ಹಾಗೂ ಬಡಗಬೆಟ್ಟು ಕಂಬಳಗಳ ಆಯೋಜನೆಗೆ ಸಿದ್ಧತೆ ನಡೆದಿದೆ. ಪಿಲಿಕುಳ ಕಂಬಳಕ್ಕೆ ಸಂಬಂಧಿಸಿದ ನ್ಯಾಯಾಲಯದ ವ್ಯಾಜ್ಯದ ಕುರಿತು ಶೀಘ್ರದಲ್ಲೇ ಸ್ಪಷ್ಟ ಆದೇಶ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು ಕಲ್ಕುಡೆ ಸಭೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.ತೀರ್ಪುಗಾರರ ಸಂಚಾಲಕ ವಿಜಯಕುಮಾರ್ ಕಂಗಿನಮನೆ, ಗೌರವಾಧ್ಯಕ್ಷ ರೋಹಿತ್ ಹೆಗ್ಡೆ, ಉಪಾಧ್ಯಕ್ಷ ಶ್ರೀಕಾಂತ್ ಭಟ್, ಗೌರವ ಸಲಹೆಗಾರ ಶಾಂತರಾಮ್ ಶೆಟ್ಟಿ, ಉಪ್ಪಿನಂಗಡಿ ಕಂಬಳದ ಸ್ಥಾಪಕ ಅಧ್ಯಕ್ಷ ಉಮೇಶ್ ಶಣೈ ಸೇರಿದಂತೆ ವಿವಿಧ ಕಂಬಳ ಸಮಿತಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ನೂತನ ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ಮಲ್ಲಿಕಾ ಯಶವಂತ್ ಶೆಟ್ಟಿ, ರಶ್ಮಿತ್ ಶೆಟ್ಟಿ, ಮಿಜಾರು ಶಕ್ತಿ ಪ್ರಸಾದ್ ಶೆಟ್ಟಿ, ತ್ರಿಶಾಲ್ ಕೆ. ಪೂಜಾರಿ, ಸತೀಶ್ಚಂದ್ರ ಸಾಲ್ಯಾನ್, ಗಿರೀಶ್ ಆಳ್ವ, ಕೌಶಿಕ್ ದಿನಕರ ಶೆಟ್ಟಿ ಹಾಗೂ ಬಾಲಚಂದ್ರ ಲೋಕಯ್ಯ ಶೆಟ್ಟಿ ಆಯ್ಕೆಯಾಗಿದ್ದಾರೆ. ಜಂಟಿ ಕಾರ್ಯದರ್ಶಿಗಳಾಗಿ ಕೇಶವ ಭಂಡಾರಿ ಮತ್ತು ಸಂಜೀವ ಪೂಜಾರಿ, ಕೋಶಾಧಿಕಾರಿಯಾಗಿ ಸಂದೀಪ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಂಬಳ ವೇಳಾಪಟ್ಟಿ: 2026-27ರ ಕಂಬಳ ಋತುವಿಗೆ ಅ.17ರಂದು ಮೈಸೂರಿನಲ್ಲಿ ಚಾಲನೆ ದೊರೆಯಲಿದ್ದು, ಏಪ್ರಿಲ್ 24ರಂದು ಬಡಗಬೆಟ್ಟು ಕಂಬಳದೊಂದಿಗೆ ಸಮಾರೋಪಗೊಳ್ಳಲಿದೆ. ಸಾಣೂರು, ಕಡಂದಲೆ, ಸಸಿಹಿತ್ಲು, ಬೈಂದೂರು ಹಾಗೂ ಶಿರ್ವ ಕಂಬಳಗಳಿಗೆ ದಿನಾಂಕ ನಿಗದಿಯಾಗಬೇಕಿದೆ.ನವೆಂಬರ್‌ನಿಂದ ಏಪ್ರಿಲ್‌ವರೆಗೆ ಕರಾವಳಿಯ ವಿವಿಧ ಕಂಬಳ ಕಣಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ನ. 14ರಂದು ಪಣಪಿಲ, ನ. 21ರಂದು ಕೊಡಂಗೆ ಹಾಗೂ ನ. 28ರಂದು ಕಕ್ಕೆಪದವು ಕಂಬಳ ನಡೆಯಲಿದೆ. ಡಿಸೆಂಬರ್ ತಿಂಗಳಲ್ಲಿ ಹೊಕ್ಕಾಡಿ, ಬಳ್ಳಮಂಜ, ಬಾರಾಡಿ, ಮಂಗಳೂರು ಹಾಗೂ ಮೂಲ್ಕಿ ಕಂಬಳಗಳಿಗೆ ದಿನಾಂಕ ನಿಗದಿಪಡಿಸಲಾಗಿದೆ.ಜನವರಿಯಲ್ಲಿ ಮಿಯ್ಯಾರು, ನರಿಂಗಾನ, ಅಡ್ವೆ, ಮೂಡುಬಿದಿರೆ ಹಾಗೂ ಐಕಳ ಕಂಬಳಗಳು ನಡೆಯಲಿದ್ದು, ಫೆಬ್ರವರಿಯಲ್ಲಿ ಪುತ್ತೂರು, ಜಪ್ಪಿನಮೊಗರು, ವಾಮಂಜೂರ್ ಹಾಗೂ ಎರ್ಮಾಳ್ ಕಂಬಳಗಳು ಆಯೋಜನೆಗೊಳ್ಳಲಿವೆ. ಮಾರ್ಚ್ ತಿಂಗಳಲ್ಲಿ ಬಂಟ್ವಾಳ, ಬಂಗಾಡಿ, ವೇಣೂರು ಹಾಗೂ ಉಪ್ಪಿನಂಗಡಿ ಕಂಬಳಗಳು ನಡೆಯಲಿದ್ದು, ಏಪ್ರಿಲ್‌ನಲ್ಲಿ ಗುರುಪುರ, ಬಳ್ಕುಂಜೆ, ಹರೇಕಳ ಹಾಗೂ ಬಡಗಬೆಟ್ಟು ಕಂಬಳಗಳೊಂದಿಗೆ 2026-27ರ ಕಂಬಳ ಋತು ಪೂರ್ಣಗೊಳ್ಳಲಿದೆ.